ಚೌತಿ ಬಂತೆಂದರೆ ಸಾಕು ಎಲ್ಲೆಡೆ ಸಡಗರ. ಎಲ್ಲರೂ ಸೇರಿ ಕೂಡಿ ಸಂಭ್ರಮಿಸುವ ಹಬ್ಬ ಗಣೇಶ ಚತುರ್ಥಿ. ಸಮಾಜದಲ್ಲಿ ಒಗ್ಗಟ್ಟು ಕಾಪಾಡುವ ಸಲುವಾಗಿ ಗಣಪತಿ ಹಬ್ಬವನ್ನು ಆಚರಿಸಲಾಗುತ್ತದೆ.
ವೈದಿಕ ಪರಂಪರೆಯಲ್ಲಿ ಗಣೇಶನಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಯಾವುದೇ ಶುಭ ಕಾರ್ಯ ಪ್ರಾರಂಭಿಸುವ ಮುನ್ನ ಗಣಪತಿಗೆ ಪೂಜೆ ಸಲ್ಲಿಸುವುದು ಪದ್ಧತಿಯಾಗಿದೆ.
ಗಣಪತಿ ಪ್ರತಿಷ್ಠಾಪನೆ
ಮಣ್ಣಿನಿಂದ ಮಾಡಿದ ಗಣಪತಿಯನ್ನು ಚತುರ್ಥಿ ದಿನ ಪ್ರತಿಷ್ಠಾಪಿಸಿ, ಶುಚಿರ್ಭೂತರಾಗಿ ಪೂಜಾ ಕಾರ್ಯಗಳನ್ನು ನೆರವೇರಿಸುವ ಮೂಲಕ ಹಬ್ಬವನ್ನು ಆಚರಿಸುವುದರಿಂದ ಚೌತಿಯ ವಿಶೇಷ ಫಲ ಸಿಗುತ್ತದೆ.
ಪೂಜಾ ವಿಧಿ ವಿಧಾನಗಳಿಗೆ ಎಲ್ಲಾ ಸಮಯ ಶ್ರೇಷ್ಠವಲ್ಲ. 12 ಗಂಟೆಯೊಳಗೆ ಗಣಪತಿಯನ್ನು ಪ್ರತಿಷ್ಠಾಪಿಸಿ, ಪೂಜಿಸುವುದು ಸಂಪ್ರದಾಯವಾಗಿದೆ.
ವಿನಾಯಕ ಹಬ್ಬದ ಪೂರ್ವಭಾವಿಯಾಗಿ ರಾಹುಕಾಲ, ಯಮಗಂಡಕಾಲದ ಒಳಗೆ ಗಣಪನನ್ನು ಮಾರುಕಟ್ಟೆಯಿಂದ ತಂದು ಶುದ್ಧವಾದ ಸ್ಥಳದಲ್ಲಿ ಇರಿಸಿ.
ಗಣಪತಿ ವಿಗ್ರಹ ಶುದ್ಧೀಕರಣ
ಮನೆಗೆ ಅಥವಾ ಊರಿಗೆ ತಂದ ಗಣಪನ ವಿಗ್ರಹವನ್ನು ಮಹಿಳೆಯರಿಂದ ಆರತಿ ಮಾಡಿಸಿ ಗಣಪತಿಯನ್ನು ಬರಮಾಡಿಕೊಳ್ಳಬೇಕು.
ಮನೆಯ ಹೊರಗೆ ಅಥವಾ ಹೊರಾಂಗಣದಲ್ಲಿ ಗಣಪತಿಯನ್ನು ಶುದ್ಧ ಜಾಗದಲ್ಲಿ ಇರಿಸಿ, ಮಂತ್ರ ಪಠಣೆಯಿಂದ ಗಣಪನನ್ನು ಆಹ್ವಾನಿಸಿ.
ಶುದ್ಧ ನೀರು , ಗಂಧ, ಹೂವು, ಅಕ್ಷತೆಗಳಿಂದ, ವಿನಾಯಕನಿಗೆ ಅಭಿಷೇಕ ಮಾಡಿದ ಬಳಿಕ ಅಕ್ಕಿಯಿಂದ ಮಾಡಿದ ಪೀಠದಲ್ಲಿ ಮೇಲೆ ಬಾಳೆ ಎಲೆ ಇಟ್ಟು ಅದರಲ್ಲಿ ಗಣಪನನ್ನು ಕೂರಿಸಿ.
ಎರಡು ಬದಿಯಲ್ಲಿ ದೀಪವನ್ನು ಹಚ್ಚಿಟ್ಟು, ಮಾವಿನ ಎಲೆ, ಬಾಳೆ ಕಂಬ, ಕಬ್ಬುಗಳಿಂದ ಅಲಂಕಾರ ಮಾಡಿದ ಮಂಟಪದ ಒಳಗೆ ವಿನಾಯಕನನ್ನು ಪ್ರತಿಷ್ಠಾಪಿಸಬೇಕು.
ಪ್ರತಿಷ್ಠಾಪನೆ ಬಳಿಕ ಒಂದು ತಟ್ಟೆಯಲ್ಲಿ ಕೊಬ್ಬರಿ, ವೀಳ್ಯದೆಲೆ – ಅಡಿಕೆ, ಬೆಲ್ಲ, ಬಾಳೆಹಣ್ಣು, ತೆಂಗಿನಕಾಯಿ ಇಟ್ಟು ಗಣೇಶನಿಗೆ ಬಾಗಿನ ಅರ್ಪಿಸುವುದು ಪದ್ಧತಿಯಾಗಿದೆ.
ಪೂಜೆಗೆ ಬೇಕಾಗುವ ಸಾಮಗ್ರಿಗಳು
ಅರಶಿಣ, ಕುಂಕುಮ, ಗಂಧ , ಭಸ್ಮ, ಗಂಜಲ, ಗರಿಕೆ ಹುಲ್ಲು , ಬಿಡಿ ಹೂಗಳು, ಅಗರಬತ್ತಿ, ವೀಳ್ಯದೆಲೆ.
ಕಳಶ ತೀರ್ಥ ಸಿಂಪಡಿಸುವ ಮೂಲಕ ಪೂಜೆಯನ್ನು ಪ್ರಾರಂಭಿಸಬೇಕು. ಗಣಪತಿಗೆ ಧೂಪ ಸಮರ್ಪಿಸಿ, ಅಷ್ಟೋತ್ತರ ಜಪಿಸಿ, ದೀಪ ಬೆಳಗಿಸಿ, ಮೋದಕ ಸೇರಿದಂತೆ ಅನೇಕ ಭಕ್ಷ್ಯಗಳು, ಫಲ ಪುಷ್ಪಗಳನ್ನ ಅರ್ಪಿಸಿ ಪೂಜೆ ಮಾಡುವುದು ಪರಂಪರೆಯಾಗಿದೆ.
ಗಣೇಶನಿಗೆ ಪೂಜೆ ಸಂದರ್ಭದಲ್ಲಿ ಗರಿಕೆಯ ಹಾಗೂ ಕುಂಕುಮ ಅರ್ಚನೆಯನ್ನು ಮಾಡುವುದು ಸಂಪ್ರದಾಯವಾಗಿದೆ. ಗರಿಕೆ ಬಳಸಿದಷ್ಟು ಶುಭಕರ ಎನ್ನುತ್ತಾರೆ.
ಬಳಿಕ ಏಕಾರತಿ , ಅಥವಾ ಕಳಶ ಬೆಳಗುವುದನ್ನು ಮರೆಯಬಾರದು.
ಗಣಪತಿ ಪ್ರತಿಷ್ಠಾಪಿಸಿದ ದಿನದಿಂದ ವಿಸರ್ಜನೆವರೆಗೂ ಮನೆಯವರು ಎಲ್ಲರೂ ಅಕ್ಷತೆ ಹಿಡಿದು ಎಲ್ಲಾ ಕೆಲಸಗಳು ನಿರ್ವಿಘ್ನವಾಗಿ ನೆರವೇರಲೆಂದು ಪ್ರಾರ್ಥಿಸಿ ಪೂಜೆ ಸಲ್ಲಿಸಬೇಕು.
ಗಣಪ ವಿಸರ್ಜನೆ ದಿನ
ಗಣೇಶನಿಗೆ ಅರ್ಪಿಸಿದ ಭಕ್ಷ್ಯಗಳನ್ನು ಮನೆಗೆ ಬಂದ ಅತಿಥಿಗಳಿಗೆ ಹಂಚಿ, ಬಾಗಿನವನ್ನು ಮಹಿಳೆಯರಿಗೆ ನೀಡುವುದು ಪದ್ಧತಿಯಾಗಿದೆ.
ವಿನಾಯಕ ಮತ್ತೆ ಬರಲೆಂದು ಪ್ರಾರ್ಥಿಸಿ, ವಾದ್ಯಗಳಿಂದ ವಿನಾಯಕನನ್ನು ತೃಪ್ತಿ ಪಡಿಸಿ ಮನೆಯಲ್ಲಿರುವ ಶುದ್ಧ ತೊಟ್ಟಿ ಅಥವಾ ಊರಿನ ಕೊಳದಲ್ಲಿ ಗಣೇಶನನ್ನು ವಿಸರ್ಜಿಸುವುದು ಪದ್ಧತಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.