
ಹೋಳಿ, ಕಾಮನ ಹಬ್ಬ, ಕಾಮ ದಹನ, ಕಾಮನ ಹುಣ್ಣಿಮೆ, ವಸಂತೋತ್ಸವ – ಹೀಗೆ ಹಲವು ಹೆಸರುಗಳಿಂದ ಕರೆಯಿಸಿಕೊಳ್ಳುವ ಹಬ್ಬದ ಹಲವು ಹಿನ್ನೆಲೆಗಳಲ್ಲಿ ಒಂದು ‘ಕಾಮದಹನ‘.
ಹೋಳಿ ಹುಣ್ಣಿಮೆ, ಹೋಳಿ ಹಬ್ಬ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಾಚೀನ ಮತ್ತು ಆಧ್ಯಾತ್ಮಿಕ ಹಬ್ಬಗಳಲ್ಲಿ ಒಂದು. ಇದು ಕೆಟ್ಟದರ ಮೇಲೆ ಒಳ್ಳೆತನದ ಜಯವನ್ನು ಸಾರುವ ಹಬ್ಬವಾಗಿದೆ. ವಿಶೇಷವಾಗಿ ಹೋಳಿ ಉತ್ತರ ಭಾರತದಲ್ಲಿ ಬಣ್ಣಗಳ ಹಬ್ಬವಾಗಿ ಪ್ರಸಿದ್ಧವಾಗಿದ್ದರೂ, ಇದರ ಮೂಲದ ಕಥೆ ಮತ್ತು ಧಾರ್ಮಿಕ ಅರ್ಥ ಗಂಭೀರವಾಗಿದೆ.
ಹೋಳಿ ಹುಣ್ಣಿಮೆಯ ಮೂಲ ಹಿರಣ್ಯಕಶಿಪು. ಅವನ ಪುತ್ರ ಪ್ರಹ್ಲಾದ ಮತ್ತು ಸಹೋದರಿ ಹೋಲಿಕಾ ಇವರಿಗೆ ಸಂಬಂಧಿಸಿದ್ದಾಗಿದೆ.
ಹಿರಣ್ಯಕಶಿಪು ತಾನೇ ದೇವರೆಂದು ಘೋಷಿಸಿಕೊಂಡನು. ಆದರೆ ಅವನ ಮಗ ಪ್ರಹ್ಲಾದನು ವಿಷ್ಣುವಿನ ಭಕ್ತನಾಗಿದ್ದ. ಪ್ರಹ್ಲಾದ ಇದನ್ನು ಒಪ್ಪಿಕೊಳ್ಳಲಿಲ್ಲ. ಆಗ ಕೋಪಗೊಂಡ ಹಿರಣ್ಯಕಶಿಪು ತನ್ನ ಸಹೋದರಿ ಹೋಲಿಕಾಳನ್ನು ಕರೆದನು. ಹೋಲಿಕಾಳಿಗೆ ಬೆಂಕಿಯಲ್ಲಿ ಸುಡದ ವರವಿದ್ದರಿಂದ ಪ್ರಹ್ಲಾದನನ್ನು ಮಡಿಲಲ್ಲಿ ಕೂರಿಸಿಕೊಂಡು ಅಗ್ನಿಗೆ ಪ್ರವೇಶಿಸುವಂತೆ ಹೇಳಿದನು. ಆಗ ಹೋಲಿಕಾ ಪ್ರಹ್ಲಾದನನ್ನು ಕೂರಿಸಿಕೊಂಡು ಬೆಂಕಿಗೆ ಪ್ರವೇಶಿಸಿದಳು. ದೇವರ ಕೃಪೆಯಿಂದ ಪ್ರಹ್ಲಾದನು ರಕ್ಷಿಸಲ್ಪಟ್ಟು, ಹೋಲಿಕಾ ದಹನಗೊಂಡಳು. ಈ ಘಟನೆ ‘ಹೋಲಿಕಾ ದಹನ’ ಎಂದು ಕರೆಯಲ್ಪಟ್ಟು, ಕೆಟ್ಟದರ ಮೇಲೆ ಒಳ್ಳೆಯದರ ಜಯದ ಸಂಕೇತವಾಗಿ ಹೋಳಿಯನ್ನು ಆಚರಿಸಲಾಗುತ್ತದೆ.
ಹೋಲಿಕಾ ದಹನದ ಆಧ್ಯಾತ್ಮಿಕ ಅರ್ಥ
ಹೋಳಿ ಹುಣ್ಣಿಮೆಯ ಹಿಂದಿನ ರಾತ್ರಿ ಜನರು ಒಣ ಮರದ ತುಂಡುಗಳನ್ನು ಸೇರಿಸಿ ಬೆಂಕಿ ಹಚ್ಚುತ್ತಾರೆ. ಇದನ್ನು ಹೋಲಿಕಾ ದಹನ ಎಂದು ಕರೆಯಲಾಗುತ್ತದೆ. ಇದು ಅಹಂಕಾರ, ದುಷ್ಟ ಗುಣ ಹಾಗೂ ಕೆಟ್ಟ ಆಲೋಚನೆಗಳನ್ನು ದಹಿಸುವ ಸಂಕೇತವಾಗಿದೆ. ಕುಟುಂಬ ಸಮೇತವಾಗಿ ಪೂಜೆ ಮಾಡಿ, ಧಾನ್ಯಗಳನ್ನು ಅಗ್ನಿಗೆ ಅರ್ಪಿಸುತ್ತಾರೆ.
ಹೊಸ ಬೆಳೆಯ ಹಬ್ಬವಾಗಿ ಕೂಡ ಇದನ್ನು ನೋಡಲಾಗುತ್ತದೆ. ಹೋಳಿ ಸಮಯದಲ್ಲಿ ರಬಿ ಬೆಳೆ ಕೊಯ್ಲಿಗೆ ಸಿದ್ಧವಾಗಿರುತ್ತದೆ. ಸಮುದಾಯದಲ್ಲಿ ಐಕ್ಯತೆ, ಸೌಹಾರ್ದತೆ ಹೆಚ್ಚಿಸುವ ಹಬ್ಬವಾಗಿ ಹೋಳಿಯನ್ನು ಆಚರಿಸಲಾಗುತ್ತದೆ. ಈ ದಿನ ಬಣ್ಣಗಳೊಂದಿಗೆ ಸಂಭ್ರಮಿಸುವುದು, ಸಂತೋಷ ಮತ್ತು ಸ್ನೇಹದ ಸಂಕೇತವಾಗಿದೆ.
ಹೋಳಿ ದಿನ ಪೂರ್ಣಚಂದ್ರ ಉದಯವಾಗುತ್ತದೆ. ಪೂರ್ಣಿಮೆ ತಿಥಿ ಮನಸ್ಸಿನ ಶುದ್ಧತೆ, ಧ್ಯಾನ ಮತ್ತು ದೈವ ಸ್ಮರಣೆಗೆ ಅತ್ಯುತ್ತಮ ಕಾಲ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ದಿನ ದಾನ, ಜಪ, ತಪಸ್ಸು ಮಾಡಿದರೆ ಪುಣ್ಯಫಲ ಹೆಚ್ಚಾಗುತ್ತದೆ ಎಂದು ನಂಬಿಕೆ ಇದೆ.
ಹೋಳಿ ಹುಣ್ಣಿಮೆ ಕೇವಲ ಬಣ್ಣಗಳ ಹಬ್ಬವಲ್ಲ. ಅದು ಧರ್ಮದ ಜಯ, ಭಕ್ತಿಯ ಶಕ್ತಿ, ಮತ್ತು ದುಷ್ಟತನದ ನಾಶದ ಸಂಕೇತ. ಪ್ರಹ್ಲಾದನ ಭಕ್ತಿ ನಮಗೆ ದೃಢ ನಂಬಿಕೆ ಮತ್ತು ಸತ್ಯದ ಮಾರ್ಗವನ್ನು ತೋರಿಸುತ್ತದೆ. ಕೆಟ್ಟದರ ಮೇಲೆ ಒಳ್ಳೆಯದರ ಜಯವೇ ಹೋಳಿಯ ನಿಜವಾದ ಸಂದೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.