
ಚಿತ್ರ: ಪಿಟಿಐ
ಭಾರತೀಯ ಸಂಸ್ಕೃತಿಯಲ್ಲಿ ಶ್ರೀ ರಾಮನಿಗೆ ವಿಶೇಷ ಸ್ಥಾನವಿದೆ. ಭಾರತವನ್ನು ರಾಮ ಜನ್ಮಭೂಮಿ ಎಂದು ಗುರುತಿಸಲಾಗುತ್ತದೆ. ಅಯೋಧ್ಯೆಯಲ್ಲಿ ಜನಿಸಿದ ಶ್ರೀರಾಮ ಇಡೀ ಭಾರತ ಖಂಡವನ್ನೇ ಆಳಿದ ಎಂದು ಪುರಾಣ ಕಥೆಗಳು ಹೇಳುತ್ತವೆ. ಭಾರತದಲ್ಲಿ ಅನೇಕ ರಾಮನಿಗಾಗಿ ಅನೇಕ ಮಂದಿರಗಳನ್ನು ನಿರ್ಮಾಣ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಅಯೋಧ್ಯೆ ರಾಮ ಮಂದಿರದಲ್ಲಿ ಧರ್ಮಧ್ವಜ ಸ್ಥಾಪಿಸಲಾಯಿತು. ಆ ಮೂಲಕ ನೂರಾರು ವರ್ಷದ ಕನಸ್ಸು ನೇರವೇರಿದೆ. ರಾಮನು ಮಹಾವಿಷ್ಣುವಿನ 7ನೇ ಅವತಾರ ಎಂದು ಹಿಂದೂ ಪುರಾಣಗಳಲ್ಲಿ ಹೇಳಲಾಗುತ್ತದೆ.
ರಾಮನಾಥಸ್ವಾಮಿ ದೇವಾಲಯ:
ತಮಿಳುನಾಡಿನ ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಾಲಯ ರಾಮಾಯಣದೊಂದಿಗೆ ನಿಕಟ ಸಂಬಂಧ ಹೊಂದಿದೆ. ರಾವಣನನ್ನು ಸಂಹಾರ ಮಾಡಿ ಭಾರತಕ್ಕೆ ಹಿಂದಿರುಗಿದ ನಂತರ ತನ್ನ ಪಾಪ ವಿಮೋಚನೆಗಾಗಿ ರಾಮನು ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದನು ಎಂದು ಹೇಳಲಾಗುತ್ತದೆ. 12 ಜ್ಯೋತಿರ್‌ಲಿಂಗಗಳ ಪೈಕಿ ಇದು ಒಂದು.
ರಾಮ ಮಂದಿರ:
ಹಿಂದೂಗಳ ಪವಿತ್ರ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವ ಅಯೋಧ್ಯೆ, ರಾಮನ ಜನ್ಮಸ್ಥಳವಾಗಿದೆ. ಇಲ್ಲಿ ದೇಶದ ಬೃಹತ್ ರಾಮ ಮಂದಿರವಿದೆ. ಸರಯೂ ನದಿಯ ದಡದಲ್ಲಿರುವ ಅಯೋಧ್ಯೆಯಲ್ಲಿ ಹತ್ತಾರು ಧಾರ್ಮಿಕ ಸ್ಥಳಗಳಿವೆ.
ತ್ರಿಪ್ರಯಾರ್ ಶ್ರೀರಾಮ ದೇವಾಲಯ:
ಕೇರಳದಲ್ಲಿರುವ ತ್ರಿಪ್ರಯಾರ್ ಶ್ರೀ ರಾಮ ದೇವಾಲಯವು ಸುಂದರವಾದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ರಾಮಾಯಣ ಕಾಲದ ದೃಶ್ಯಿಕೆಗಳನ್ನು ಕೆತ್ತನೆ ಮಾಡಲಾಗಿದೆ. ಭಿತ್ತಿ ಚಿತ್ರಗಳನ್ನು ನೋಡಬಹುದು. ರಾಮ, ಭರತ, ಲಕ್ಷ್ಮಣ ಮತ್ತು ಶತ್ರುಘ್ನನಿಗೆ ಸಮರ್ಪಿತವಾದ 4 ದೇವಾಲಯಗಳಲ್ಲಿ ಈ ದೇವಾಲಯ ಕೂಡ ಒಂದು.
ರಾಮ ರಾಜ ದೇವಾಲಯ:
ಮಧ್ಯಪ್ರದೇಶದ ಓರ್ಚಾದಲ್ಲಿರುವ ರಾಮ ರಾಜ ದೇವಾಲಯದಲ್ಲಿ ರಾಮನನ್ನು ರಾಜನ ರೂಪದಲ್ಲಿ ಪೂಜಿಸುವ ಏಕೈಕ ದೇವಾಲಯವಾಗಿದೆ. ಮೊದ ಮೊದಲು ಈ ದೇವಾಲಯ ಅರಮನೆಯಾಗಿತ್ತು. ನಂತರದಲ್ಲಿ ದೇವಾಲಯವಾಗಿ ಮಾರ್ಪಡು ಮಾಡಲಾಯಿತು. ರಜಪೂತ ಹಾಗೂ ಮೊಘಲ್ ಶೈಲಿಗಳ ಸಂಯೋಜನೆಯನ್ನು ಈ ದೇವಾಲಯ ಹೊಂದಿದೆ.
ಕೋದಂಡ ರಾಮ ದೇವಾಲಯ:
ತಿರುಪತಿಯಲ್ಲಿರುವ ಕೋದಂಡ ರಾಮ ದೇವಾಲಯ ವಿಜಯನಗರ ಮತ್ತು ಚೋಳ ಶೈಲಿಯ ವಾಸ್ತುಶಿಲ್ಪಕ್ಕೆ ಸೇರಿದೆ. ರಾಮ, ಸೀತೆ ಮತ್ತು ಲಕ್ಷ್ಮಣರ ವಿಗ್ರಹವನ್ನು ಏಕಶಿಲೆಯಲ್ಲಿ ಕೆತ್ತಲಾಗಿದೆ. ಇದರ ಹೊರತಾಗಿಯೂ ದೇಶದ ನಾನಾ ಭಾಗಗಳಲ್ಲಿ ಕೋದಂಡ ರಾಮನ ದೇವಾಲಯವಿದೆ. ಇಲ್ಲಿ ರಾಮ ಲಕ್ಮಣ ಹಾಗೂ ಸೀತೆಯನ್ನು ಏಕಕಾಲದಲ್ಲಿ ದರ್ಶನ ಮಾಡಬಹುದು.
ಸೀತಾ ರಾಮಚಂದ್ರ ಸ್ವಾಮಿ ದೇವಾಲಯ:
ಆಂಧ್ರಪ್ರದೇಶದ ಭದ್ರಾಚಲಂನಲ್ಲಿ ಈ ದೇವಾಲಯವಿದೆ. ಈ ಸ್ಥಳದಲ್ಲಿ ಹನುಮಂತ ಶ್ರೀರಾಮನನ್ನು ಭೇಟಿ ಮಾಡಿದ ಸ್ಥಳವೆಂದು ಪುರಾಣ ಕಥೆಗಳಲ್ಲಿ ಹೇಳಲಾಗುತ್ತದೆ. ಗೋದಾವರಿ ನದಿಯ ದಡದಲ್ಲಿದೆ ಈ ದೇವಾಲಯವಿದೆ.
ತ್ರೇತಾ ಕೆ ಠಾಕೂರ್ ದೇವಾಲಯ:
ರಾಮ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಮತ್ತೊಂದು ರಾಮ ದೇವಾಲಯವಿದೆ. ರಾಮನು ಅಶ್ವಮೇಧ ಯಜ್ಞ ಮಾಡಿದ ಸ್ಥಳವೆಂದು ಈ ದೇವಾಲಯವಿರುವ ಸ್ಥಳಕ್ಕೆ ಹೇಳಲಾಗುತ್ತದೆ. ಕಪ್ಪು ಮರಳುಗಲ್ಲಿನಿಂದ ಈ ವಿಗ್ರಹವನ್ನು ಕೆತ್ತಲಾಗಿದೆ. ಈ ದೇವಾಲಯ 300 ವರ್ಷಗಳ ಹಿಂದೆ ಕುಲ ಎಂಬ ರಾಜನಿಂದ ನಿರ್ಮಾಣವಾಯಿತು ಎಂದು ಹೇಳಲಾಗುತ್ತದೆ. ಇಲ್ಲಿ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮಂತನ ವಿಗ್ರಹಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.