ADVERTISEMENT

ಬಾಗಲಕೋಟೆ | ತ್ಯಾಜ್ಯಕ್ಕೆ ಬೆಂಕಿ: ಪರಿಸರಕ್ಕೆ ಹಾನಿ

ಕಸಕ್ಕೆ ಬೆಂಕಿ ಹಚ್ಚುವ ಬಿಟಿಡಿಎ ಸ್ವಚ್ಛತಾ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 7:43 IST
Last Updated 5 ಜನವರಿ 2026, 7:43 IST
<div class="paragraphs"><p>ಬಾಗಲಕೋಟೆಯ ನವನಗರದಲ್ಲಿ ರಸ್ತೆ ಬದಿ ತ್ಯಾಜ್ಯಕ್ಕೆ ಬೆಂಕಿ ಹಚ್ಚಿರುವುದು</p></div>

ಬಾಗಲಕೋಟೆಯ ನವನಗರದಲ್ಲಿ ರಸ್ತೆ ಬದಿ ತ್ಯಾಜ್ಯಕ್ಕೆ ಬೆಂಕಿ ಹಚ್ಚಿರುವುದು

   

ಬಾಗಲಕೋಟೆ: ನವನಗರದ ವಿವಿಧ ಸೆಕ್ಟರ್‌ಗಳಲ್ಲಿ ರಸ್ತೆ ಬದಿಯ ಸಣ್ಣ ಗಿಡಗಳನ್ನು ಕತ್ತರಿಸಿ, ಎಲೆಗಳನ್ನು ಒಂದೆಡೆ ಸೇರಿಸಿ ಹೊರಗಡೆ ಸಾಗಿಸಬೇಕಿದ್ದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸ್ವಚ್ಛತಾ ಸಿಬ್ಬಂದಿಯೇ ಬೆಂಕಿ ಹಚ್ಚಿ ಪರಿಸರವನ್ನು ಕಲುಷಿತಗೊಳಿಸುತ್ತಿದ್ದಾರೆ.

ಹಸಿರಿನಿಂದ ಕಂಗೊಳಿಸುತ್ತಿರುವ ಬಾಗಲಕೋಟೆ ಶುದ್ಧವಾದ ಗಾಳಿಯನ್ನು ಹೊಂದಿದೆ. ಇತ್ತೀಚೆಗೆ ಸೆಂಟರ್‌ ಫಾರ್‌ ಕ್ಲಿನ್‌ ಏರ್‌ ಎಂಬ ಸಂಸ್ಥೆ ಸಿದ್ಧಪಡಿಸಿದ ವರದಿಯಲ್ಲಿ ದೇಶದಲ್ಲಿಯೇ ಬಾಗಲಕೋಟೆಗೆ 10ನೇ ಸ್ಥಾನ ಲಭಿಸಿತ್ತು. ನಿತ್ಯ ವಿವಿಧ ರಸ್ತೆಗಳಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ಪರಿಸರ ಹಾಳಾಗುತ್ತಿದೆ.

ADVERTISEMENT

ಹತ್ತಾರು ವರ್ಷಗಳ ಹಿಂದೆ ನೆಟ್ಟ ಬೇವು, ಆಲ, ಕಣಗಲೆ ಸೇರಿದಂತೆ ವಿವಿಧ ಗಿಡಗಳನ್ನು ದೊಡ್ಡದಾಗಿ ಬೆಳೆದು ನಿಂತಿವೆ. ನಿತ್ಯ ಅವುಗಳಿಂದ ಎಲೆಗಳು ಉದುರಿ ಬೀಳುತ್ತವೆ. ಜೊತೆಗೆ ರಸ್ತೆ ಹಾಗೂ ಗಟಾರ ಮಧ್ಯದಲ್ಲಿಯೂ ಸಣ್ಣ, ಸಣ್ಣದಾಗಿ ಗಿಡಗಳು ಬೆಳೆದಿರುತ್ತವೆ. ಅವುಗಳನ್ನು ಕತ್ತರಿಸಿ ಎಲೆಗಳನ್ನು ಒಂದೆಡೆ ಗೂಡಿಸುವ ಕೆಲಸವನ್ನು ಬಿಟಿಡಿಎ ಸ್ವಚ್ಛತಾ ಸಿಬ್ಬಂದಿ ಮಾಡುತ್ತಾರೆ.

ರಸ್ತೆಯಲ್ಲಿ ಸಾಕಷ್ಟು ಎಲೆಗಳು ಬಿದ್ದಿದ್ದರೂ, ಬದಿಯಲ್ಲಿ ಸಣ್ಣದಾಗಿ ಗಿಡಗಳು ಬೆಳೆದಿದ್ದರೂ, ಹತ್ತಾರು ದಿನಕ್ಕೊಮ್ಮೆ ಸ್ವಚ್ಛತೆ ಮಾಡಲಾಗುತ್ತದೆ. ಹದಿನೈದು ಇಪ್ಪತ್ತು ಅಡಿಗೊಂದು ಗುಂಪು ಹಾಕಲಾಗುತ್ತದೆ. ನಂತರ ಸಾಲಾಗಿ ಬೆಂಕಿ ಹಚ್ಚಿಕೊಂಡು ಬರುವ ಕೆಲಸ ನಿತ್ಯವೂ ನಡೆಯುತ್ತಿದೆ. ಇದರಿಂದಾಗಿ ಗಂಟೆಗಟ್ಟಲೇ ದಟ್ಟವಾದ ಹೊಗೆ ಆವರಿಸಿರುತ್ತದೆ.

ಬೆಳಿಗ್ಗೆ ಶುದ್ಧವಾದ ಗಾಳಿ ಇರುತ್ತದೆ ಎಂದು ಹಲವರು ವಾಕಿಂಗ್‌ ಬರುತ್ತಾರೆ. ಇವರು ಹೊತ್ತಿಸಿದ ಬೆಂಕಿಯಿಂದಾಗಿ ಹೊಗೆ ಕುಡಿದುಕೊಂಡು ಹೋಗಬೇಕಾದ ಸ್ಥಿತಿ ಇದೆ. ಶಾಲೆಗೆ ಹೋಗುವ ಮಕ್ಕಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕೆಲವೊಮ್ಮೆ ಅದರಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯವೂ ಸೇರಿರುವುದರಿಂದ ಪರಿಸರದ ಮೇಲೆ ತೀವ್ರ ಪರಿಣಾಮವಾಗುತ್ತದೆ.

‘ವಾಹನಗಳು ಬರುವುದು ವಿಳಂಬವಾಗುತ್ತದೆ. ಕೆಲವೊಮ್ಮೆ ಬರುವುದೇ ಇಲ್ಲ. ಎಲೆಗಳು ಬೇರೆಡೆ ಹಾರಿ ಹೋಗಬಾರದು ಎಂದು ಬೆಂಕಿ ಹಚ್ಚಲಾಗುತ್ತದೆ’ ಎನ್ನುತ್ತಾರೆ ಸ್ವಚ್ಛತಾ ಸಿಬ್ಬಂದಿ.

‘ಶುದ್ಧವಾದ ಗಾಳಿ, ಪರಿಸರ ಇದೆ ಎಂದು ವಾಕಿಂಗ್‌ ಬರುತ್ತೇವೆ. ಆದರೆ, ಹೀಗೆ ಬೆಂಕಿ ಹಚ್ಚಿದರೆ ಹೊಗೆ ಸೇವಿಸಬೇಕಾಗಿದೆ. ಸ್ವಚ್ಛತೆ ಕಾಪಾಡಬೇಕಾದವರೇ ಬೆಂಕಿ ಹಚ್ಚುವುದು ಸರಿಯಲ್ಲ’ ಎಂದು ಪ್ರಕಾಶ ದೂರಿದರು.