ADVERTISEMENT

ಜಮಖಂಡಿ | ಸರ್ಕಾರಿ ಶಾಲೆ ನವೀಕರಿಸಿದ ಯುವಕರು: 60 ವಿದ್ಯಾರ್ಥಿಗಳಿದ್ದಲ್ಲಿ ಈಗ 360

ಆರ್.ಎಸ್.ಹೊನಗೌಡ
Published 22 ಜುಲೈ 2025, 2:08 IST
Last Updated 22 ಜುಲೈ 2025, 2:08 IST
ಜಮಖಂಡಿ: ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾಷಾ ಪ್ರಯೋಗಾಲಯ ನಿರ್ಮಿಸಿರುವದು.
ಜಮಖಂಡಿ: ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾಷಾ ಪ್ರಯೋಗಾಲಯ ನಿರ್ಮಿಸಿರುವದು.   

ಜಮಖಂಡಿ: ಖಾಸಗಿ ಶಾಲೆಗಳ ಭರಾಟೆಯಲ್ಲಿ ಹಲವಾರು ಕಡೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ, ಆದರೆ ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಯುವಕರು ಸೇರಿ ಸರ್ಕಾರಿ ಶಾಲೆಯ ಅಭಿವೃದ್ಧಿ ಮಾಡಿ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಮಾಡಿದ್ದಾರೆ.

ಹಿಪ್ಪರಗಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದೇ ಶಾಲೆಯಲ್ಲಿ ಓದಿದ ಗ್ರಾಮದ ಹತ್ತಾರು ಜನ ಸಮಾನ ಮನಸ್ಕ ಯುವಕರು ಒಗ್ಗೂಡಿ ದಾನಿಗಳಿಂದ ಹಣ ಪಡೆದು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಕಳೆದ ಐದು ವರ್ಷದಲ್ಲಿ ಎಲ್.ಕೆಜಿ ಯಿಂದ 8ನೇ ತರಗತಿವರೆಗೆ ಕೇವಲ 60 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಇಂದು 360 ವಿದ್ಯಾರ್ಥಿಗಳು ಪ್ರವೇಶವನ್ನು ಪಡೆದಿದ್ದಾರೆ.

ದಾನಿಗಳ ನೆರವಿನೊಂದಿಗೆ ಪ್ರತಿ ಕೊಠಡಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಸ್ಮಾರ್ಟ್ ಬೋರ್ಡ್‌ ಅಳವಡಿಕೆ ಮಾಡಿದ್ದಾರೆ. ಪಾಲಕರು ವಿದ್ಯಾರ್ಥಿಗಳ ಭೇಟಿಗೆ ಬಂದಾಗ ನೇರವಾಗಿ ಮುಖ್ಯಗುರುಗಳ ಕೊಠಡಿಗೆ ಹೋಗಬೇಕು, ಅಲ್ಲಿಂದ ಮೈಕ್‌ ಮೂಲಕ ಸಂಬಂಧಿಸಿದ ತರಗತಿ ಕೊಠಡಿಯ ವಿದ್ಯಾರ್ಥಿ ಹೆಸರು ಹೇಳಿದಾಗ ವಿದ್ಯಾರ್ಥಿ ಬರುತ್ತಾನೆ, ಹಾಗೂ ಒಂದೇ ಸಮಯದಲ್ಲಿ ಎಲ್ಲ ಕೊಠಡಿಗಳಿಗೆ ಸಂದೇಶ ನೀಡುವಂತೆಯೂ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಶಿಕ್ಷಕರಿಗೆ ಒಂದು ವರ್ಷಕ್ಕೆ ಬೇಕಾಗುವ ಡಸ್ಟರ್‌ಗಳು, ಬುಕ್ಸ್ ಗಳನ್ನು ಶಾಲೆ ಪ್ರಾರಂಭ ಆಗುವಾಗಲೇ ವಿತರಿಸುವ ಟೀಚರ್ ಕಿಟ್‌ನಲ್ಲಿ ಕೊಡಲಾಗುವುದು. ಅವುಗಳನ್ನು ಇಟ್ಟುಕೊಳ್ಳಲು ಪ್ರತಿ ಕೊಠಡಿಯಲ್ಲಿ ಪ್ರತ್ಯೇಕ ಲಾಕರ್‌ಗಳ ವ್ಯವಸ್ಥೆ ಮಾಡಲಾಗಿದೆ, ಪ್ರತಿ ಕೊಠಡಿಯಲ್ಲಿ ಫ್ಯಾನ್ ಹಾಗೂ ಲೈಟ್ ವ್ಯವಸ್ಥೆ, ಕೊಠಡಿಯ ಮುಂದೆ ಕಸದ ಡಬ್ಬಿ ಇಡಲಾಗಿದ್ದು, ನೆಲದಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮ್ಯಾಟ್ ಅಳವಡಿಸಲಾಗಿದೆ.

ವಿದ್ಯಾರ್ಥಿಗಳು ಆಟವಾಡಲು ವಿವಿಧ ಸಲಕರಣೆಗಳನ್ನು ಖರೀದಿಸಲಾಗಿದ್ದು, ಸುಸಜ್ಜಿತವಾದ ಆಟದ ಮೈದಾನ ನಿರ್ಮಿಸಲಾಗಿದೆ ಹಾಗೂ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಲ್ಯಾಬ್ ಮಾಡಲಾಗಿದ್ದು, ಕಿಚನ್ ಗಾರ್ಡನ್‌ ನಿರ್ಮಿಸಿದ್ದಾರೆ, 10 ಅಧಿಕ ಕಂಪ್ಯೂಟರ್ ಗಳಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ನೀಡುತ್ತಿದ್ದಾರೆ ಹಾಗೂ ಗ್ರಂಥಾಲಯ ಮಾಡಲಾಗಿದೆ.

ಜಮಖಂಡಿ: ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುಕೆಜಿ ಮಕ್ಕಳು ಕಲಿಯುತ್ತಿರುವದು.

ವಿದ್ಯಾರ್ಥಿ ಪ್ರವೇಶ ಪಡೆದಾಗಿನಿಂದ ಅವನ ಕಲಿಕಾ ಮಟ್ಟ ಹಾಗೂ ಪರೀಕ್ಷೆಗಳು ಸೇರಿದಂತೆ ಅವನ ಚಟುವಟಿಕೆಗಳ ಬಗ್ಗೆ ಪ್ರತಿ ವಿದ್ಯಾರ್ಥಿಗೊಂದು ಫೈಲ್‌ ಮಾಡಿದ್ದಾರೆ ಅದರಲ್ಲಿ ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ನಮೂದಿಸಲಾಗಿದೆ. ಅತಿಥಿ ಶಿಕ್ಷಕರು ಸೇರಿ 13 ಜನ ಕಾರ್ಯನಿರ್ವಹಿಸುತ್ತಿದ್ದಾರೆ.

ಬೇರೆ ಶಾಲೆಗಳಿಂದ ಬಂದ ಹಾಗೂ ಅತಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಬೋಧನೆ ಮಾಡಲಾಗುತ್ತಿದೆ, ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್‌, ಹಿಂದಿ ವಿಷಯದ ಬಗ್ಗೆ ಹಾಗೂ ಚಿತ್ರಗಳನ್ನು ನೋಡಿ ಓದಲು ಅನುಕೂಲವಾಗುವಂತೆ ಭಾಷಾ ಪ್ರಯೋಗಾಲಯ ನಿರ್ಮಿಸಿದ್ದು ವಿಶೇಷವಾಗಿದೆ.

2023-24ರಲ್ಲಿ ಪಿಎಂಶ್ರೀ ಗೆ ಶಾಲೆಯನ್ನು ಆಯ್ಕೆ ಮಾಡಲಾಗಿದ್ದು ಪಿಎಂಶ್ರೀಯಲ್ಲಿ ಒಂದು ಕೊಠಡಿ ಮಂಜೂರಾಗಿದೆ ಹಾಗೂ ಎಲ್ ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಖುರ್ಚಿ, ಟೇಬಲ್, ಆಟದ ಸಾಮಗ್ರಿ, ಕೆಲ ಕಡೆ ಫರ್ನಿಚರ್, ಮಕ್ಕಳಿಗೆ ಐಡಿ ಕಾರ್ಡ್, ಗ್ರಂಥಾಲಯ ಪುಸ್ತಕ ಸೇರಿದಂತೆ ಹಲವು ವಸ್ತುಗಳನ್ನು ಖರೀದಿ ಮಾಡಲಾಗಿದೆ ಎಂದು ಮುಖ್ಯ ಗುರು ವಿ.ಬಿ.ಸಂಕ್ರಟ್ಟಿ ತಿಳಿಸಿದರು.

ಜಮಖಂಡಿ: ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟವಾಡುತ್ತಿರುವ ವಿದ್ಯಾರ್ಥಿಗಳು

ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ದುರಸ್ತಿ, ಮಕ್ಕಳಿಗೆ ಊಟಕ್ಕೆ ಪ್ರತ್ಯೇಕ ಪ್ಲೇಟ್ ನೀಡಿ ಏಕಕಾಲದಲ್ಲಿ ಎಲ್ಲ ಮಕ್ಕಳಿಗೆ ಊಟದ ವ್ಯವಸ್ಥೆ, ಕೈ ತೊಳೆದುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಿದ್ದಾರೆ.

ಆ ಶಾಲೆಯಲ್ಲಿ ಕಲಿತ ಹಲವಾರು ಜನರು ನೌಕರಿಯನ್ನು ಮಾಡುತ್ತಿದ್ದಾರೆ, ಅವರನ್ನು ಸಂಪರ್ಕಿಸಿರುವ ಶಾಲಾ ಅಭಿವೃದ್ಧಿ ತಂಡ ವಿವಿಧ ಯೋಜನೆಗಳನ್ನು ಹಾಕಿಕೊಂಡಿದ್ದಾರೆ, ಬಡ ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡುವ ಉದ್ದೇಶದಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಕ್ಕಳಿಗೂ ಒಳ್ಳೆಯ ವಾತಾವರಣದಲ್ಲಿ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ಕೆ ಕೈ ಹಾಕಿದ್ದೇವೆ, ಗ್ರಾಮಸ್ಥರಿಂದ ಒಳ್ಳೆಯ ಸ್ಪಂದನೆ ದೊರೆತಿದೆ ಎನ್ನುತ್ತಾರೆ ಯುವಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.