ADVERTISEMENT

ಬಳ್ಳಾರಿ | ಎನ್‌ಎಂಡಿಸಿ: ಸಾವಿರಾರು ಟನ್‌ ಅದಿರು ಕಳ್ಳತನ; ಮಹತ್ವದ ಸಂಗತಿಗಳು ಬಯಲು

20 ಟನ್‌ ಅಕ್ರಮ ಸಾಗಣೆ ತನಿಖೆ ವೇಳೆ ಮಹತ್ವದ ಸಂಗತಿಗಳು ಬಯಲು

ಆರ್. ಹರಿಶಂಕರ್
Published 9 ಫೆಬ್ರುವರಿ 2026, 0:30 IST
Last Updated 9 ಫೆಬ್ರುವರಿ 2026, 0:30 IST
<div class="paragraphs"><p>ಅದಿರು ಗಣಿ</p></div>

ಅದಿರು ಗಣಿ

   
ಕಾರ್ಖಾನೆಗಳಿಂದ 2 ಸಾವಿರ ಟನ್ ಅದಿರು ಜಪ್ತಿ | ಪ್ರಮುಖ ಆರೋಪಿಗಾಗಿ ಮುಂದುವರಿದ ಶೋಧ | ನಿಗಾ ವ್ಯವಸ್ಥೆಯಿದ್ದರೂ ಸಾಗಣೆ ಬಗ್ಗೆಯೇ ಅನುಮಾನ

ಬಳ್ಳಾರಿ: ಕೇಂದ್ರದ ಉಕ್ಕು ಸಚಿವಾಲಯದ ಒಡೆತನದ, ರಾಷ್ಟ್ರೀಯ ನವರತ್ನ ಕಂಪನಿಗಳಲ್ಲಿ ಒಂದಾದ  ‘ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್‌ಎಂಡಿಸಿ) ಕಬ್ಬಿಣದ ಅದಿರು ಗಣಿಯಿಂದ ಸಾವಿರಾರು ಟನ್ ಅದಿರು ಅಕ್ರಮವಾಗಿ ಸಾಗಣೆ ಆಗಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಸಂಡೂರಿನಲ್ಲಿರುವ ಎನ್‌ಎಂಡಿಸಿ ಗಣಿ ಸಂಖ್ಯೆ 1111ರ ‘ಸಿ’ ಬ್ಲಾಕ್‌ನಿಂದ ಉತ್ಕೃಷ್ಟ (60–62 ಗ್ರೇಡ್‌) ಗುಣಮಟ್ಟದ 20 ಟನ್‌ ಕಬ್ಬಿಣದ ಅದಿರನ್ನು ಹೊತ್ತ ಲಾರಿಯೊಂದು ಜನವರಿ 16ರಂದು ಪೊಲೀಸರಿಗೆ ಸಿಕ್ಕಿಬಿದ್ದಿತ್ತು. ಈ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಂಡ ಸಂಡೂರು ಪೊಲೀಸರು ತನಿಖೆ ನಡೆಸಿದ್ದಾರೆ. 

ADVERTISEMENT

ತನಿಖೆಯಿಂದ ಭಾರೀ ಪ್ರಮಾಣ ಅದಿರು ಸಾಗಣೆ ಆಗಿರುವುದು ತನಿಖೆ ವೇಳೆ ಗೊತ್ತಾಗಿದೆ. 

‘ಆಂಧ್ರಪ್ರದೇಶದ ಕಬ್ಬಿಣ ಕಾರ್ಖಾನೆಯಲ್ಲಿ 1,000 ಟನ್‌, ಬಳ್ಳಾರಿ ಹೊರವಲಯದ ಕಾರ್ಖಾನೆಯಲ್ಲಿ 1,500 ಟನ್‌ ಜಪ್ತಿ ಮಾಡಲಾಗಿದೆ. ಬಳ್ಳಾರಿ ಕಾರ್ಖಾನೆಯು ರಾಜ್ಯದ ಆಡಳಿತ ಪಕ್ಷದ ನಾಯಕರೊಬ್ಬರಿಗೆ ಸಂಬಂಧಿಸಿದ್ದು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ಪೊಲೀಸ್‌ ಮೂಲಗಳು ಹೇಳಿವೆ.  

‘ಪ್ರಕರಣ ಸಂಬಂಧ ಮೊದಲು ಬಂಧಿಸಲಾಗಿದ್ದ ಚಾಲಕ ತಿಪ್ಪೇಸ್ವಾಮಿ, ಅಂದಾಜು 250 ಟನ್‌ಗೂ ಅಧಿಕ ಅದಿರನ್ನು ಅಕ್ರಮ ಮಾರ್ಗದಲ್ಲಿ ಸಾಗಣೆ ಮಾಡಿದ್ದು ಗೊತ್ತಾಗಿದೆ. ಪ್ರಕರಣದಲ್ಲಿ ಐದಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಲಾರಿ ಚಾಲಕರಿಗೆ ಕಾರ್ಖಾನೆಗಳೊಂದಿಗೆ ಸಂಪರ್ಕ ಕಲ್ಪಿಸಿದ ಕಿಂಗ್‌ಪಿನ್‌ಗಾಗಿ ಹುಡುಕಾಟ ನಡೆದಿದೆ. ಆತನ ಬಂಧನದಿಂದ ಹೆಚ್ಚು ವಿವರ ತಿಳಿಯಬಹುದು’ ಎಂದು ಹೇಳಲಾಗುತ್ತಿದೆ.

ಇನ್ನು ಈ ಅಕ್ರಮ ಬಯಲಾಗುತ್ತಲೇ ಎನ್‌ಎಂಡಿಸಿಯು ಆಡಳಿತಾತ್ಮಕ ಬದಲಾವಣೆ ಮಾಡಿದೆ ಎಂದು ಹೇಳಲಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಎನ್‌ಎಂಡಿಸಿ ಅಧಿಕಾರಿಯ ಸಂಪರ್ಕ ಸಾಧ್ಯವಾಗಲಿಲ್ಲ. 

2011ರ ಅಕ್ರಮ ಗಣಿಗಾರಿಕೆ ಯುಗ ಅಂತ್ಯವಾದ ಬಳಿಕ ಸುಪ್ರೀಂ ಕೋರ್ಟ್‌ ನೇಮಿಸಿದ ಮೇಲುಸ್ತುವಾರಿ ಪ್ರಾಧಿಕಾರದ ನೇರ ಪರಿವೀಕ್ಷಣೆಯಲ್ಲಿ ಬಳ್ಳಾರಿಯಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆ ನಡೆಯುತ್ತಿದೆ. ಗಣಿಗಳಿಂದ ಲಾರಿಗಳು ಹೊರಬರಲು ಹಲವು ಹಂತಗಳ ಪರಿಶೀಲನಾ ವ್ಯವಸ್ಥೆಗಳಿವೆ. ಲಾರಿಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಪರ್ಮಿಟ್‌, ಟ್ರಿಪ್‌ಶೀಟ್‌ಗಳನ್ನು ಪಡೆದೇ ಅದಿರು ಒಯ್ಯಲಾಗುತ್ತದೆ.

ಎನ್‌ಎಂಡಿಸಿಯ ಗಣಿಯಲ್ಲಿ ಸಿಐಎಸ್‌ಎಫ್‌ ಭದ್ರತೆ ಇದೆ. ಮುಖ್ಯವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕ್ಯಾಂಪ್‌ ಅಧಿಕಾರಿಯೊಬ್ಬರು ಎನ್‌ಎಂಡಿಸಿಯಲ್ಲೇ ಕರ್ತವ್ಯ ನಿರ್ವಹಿಸುತ್ತಾರೆ. ಇದು ಎಲ್ಲವನ್ನೂ ಮೀರಿ ಸಾವಿರಾರು ಟನ್‌ ಅದಿರು ಹೊರಗೆ ಸಾಗಣೆ ಆಗಿದೆ.

ಅದಿರು ಸಾಗಣೆಯಲ್ಲಿ ಅಕ್ರಮ ಸಾಧ್ಯತೆ ಇದೆ. ಸದ್ಯ ಭಾರೀ ಪ್ರಮಾಣದ ಅದಿರು ವಶಕ್ಕೆ ಪಡೆಯಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.
ಸುಮನ್‌ ಡಿ.ಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಳ್ಳಾರಿ 
ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಸರೋಜಿನಿ ಮಹಷಿ ವರದಿ ಅನುಷ್ಠಾನದಿಂದ ತಪ್ಪಿಸಿಕೊಳ್ಳಲು ಎನ್‌ಎಂಡಿಸಿ ಗಣಿಯಲ್ಲಿ ಎಲ್ಲ ಕೆಲಸಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡಿ ಅಕ್ರಮಗಳನ್ನು ನಡೆಸಿದೆ.
ಇ.ತುಕಾರಾಂ ಬಳ್ಳಾರಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.