
ಚಂದಾಪುರ (ಆನೇಕಲ್): ಚಂದಾಪುರ-ದೊಮ್ಮಸಂದ್ರ ರಸ್ತೆಯ ಗೋಪಸಂದ್ರ ಗ್ರಾಮದಲ್ಲಿ ಸೀತಾರಾಮ ಕಲ್ಯಾಣೋತ್ಸವ ಮತ್ತು ವೀರಾಂಜನೇಯ ಸ್ವಾಮಿ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ಸುತ್ತಮುತ್ತಲ ಗ್ರಾಮಗಳ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಗೋಪಸಂದ್ರದ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಕಳೆದ ಎರಡು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ಶುಕ್ರವಾರ ಸಂಜೆ ಸೀತಾರಾಮ ಕಲ್ಯಾಣೋತ್ಸವ ವಿಜೃಂಭಣೆಯಿಂದ ನಡೆಯಿತು. ಶನಿವಾರ ಆಂಜನೇಯ ಸ್ವಾಮಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ 11.30ರ ಸುಮಾರಿಗೆ ಅಲಂಕೃತ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳರಿಸಲಾಯಿತು. ಭಕ್ತರು ‘ಜೈ ಶ್ರೀರಾಮ್’ ಘೋಷಣೆ ಕೂಗಿ ರಥವನ್ನು ಎಳೆದರು.
ರಥೋತ್ಸವಕ್ಕೆ ತಮಟೆ, ವೀರಗಾಸೆ, ಪೂಜಾ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರುಗು ನೀಡಿದವು. ರೈತರ ಹಳ್ಳಿಕಾರ್ ರಾಸುಗಳ ಮೆರವಣಿಗೆ ಭಕ್ತರ ಗಮನ ಸೆಳೆಯಿತು.
ರಥೋತ್ಸವ ಪ್ರಯುಕ್ತ ಅಂಗನವಾಡಿ ವೀರಾಂಜನೇಯ ಸ್ವಾಮಿ ಕಬಡ್ಡಿ ಉತ್ಸವ ಆಯೋಜಿಸಲಾಗಿತ್ತು. ಸಾಮೂಹಿಕ ಹನುಮಾನ್ ಚಾಲಿಸ ಪಠಣಾ ನಡೆಸಲಾಯಿತು.
ಶಾಸಕ ಬಿ.ಶಿವಣ್ಣ, ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಸೇರಿದಂತೆ ವಿವಿಧ ಮುಖಂಡರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಾಲಯದ ಮುಂಭಾಗದ ಬೃಹತ್ ಹನುಮನ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸುತ್ತಿದ್ದರು. ಬಿಸಿಲಿನ ಬೇಗೆ ತಣಿಸಲು ನೀರು ಮಜ್ಜಿಗೆ, ಪಾನಕ ಕೋಸಂಬರಿ ವಿತರಿಸಲಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.