ADVERTISEMENT

ಚಿಗರೇನಹಳ್ಳಿ: ಬಿಬಿಎಂಪಿ ಕಸ ವಿರುದ್ಧ ಮತ್ತೆ ಮೊಳಗಿದ ಹೋರಾಟದ ಕಹಳೆ

ಕಸ ವಿಲೇವಾರಿ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ ಎಚ್ಚರಿಕೆ । ವಿವಿಧ ಸಂಘಟನೆ ಮುಖಂಡರು, ಸಾರ್ವಜನಿಕರ ಸಮಾಲೋಚನ ಸಭೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 19:02 IST
Last Updated 14 ಜೂನ್ 2025, 19:02 IST
<div class="paragraphs"><p>ದೊಡ್ಡಬಳ್ಳಾಪುರ ಡಾ.ಬಾಬುಜಗಜೀವನ್‌ ರಾಮ್‌ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಶಾಸಕ ಧೀರಜ್‌ ಮುನಿರಾಜ್‌ ಮಾತನಾಡಿರು</p></div>

ದೊಡ್ಡಬಳ್ಳಾಪುರ ಡಾ.ಬಾಬುಜಗಜೀವನ್‌ ರಾಮ್‌ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಶಾಸಕ ಧೀರಜ್‌ ಮುನಿರಾಜ್‌ ಮಾತನಾಡಿರು

   

ದೊಡ್ಡಬಳ್ಳಾಪುರ: ತಾಲ್ಲೂಕಿನ ಚಿಗರೇನಹಳ್ಳಿಯಲ್ಲಿ ಬಿಬಿಎಂಪಿ ಕಸ ವಿಲೇವಾರಿ ವಿರುದ್ಧ ಮತ್ತೆ ಹೋರಾಟ ಕಹಳೆಯನ್ನು ಇಲ್ಲಿನ ಸ್ಥಳೀಯರು ಮೊಳಗಿಸಿದ್ದಾರೆ.

ಈ ಸಂಬಂಧ ನಗರದ ಡಾ.ಬಾಬುಜಗಜೀವನ್‌ ರಾಮ್‌ ಭವನದಲ್ಲಿ ಶನಿವಾರ ನಡೆದ ಗ್ರಾಮ ಪಂಚಾಯಿತಿ, ನಗರಸಭೆ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಂಘಟನೆ ಮುಖಂಡರು ಹಾಗೂ ಸಾರ್ವಜನಿಕರ ಸಮಾಲೋಚನ ಸಭೆಯಲ್ಲಿ ಮತ್ತೆ ಹೋರಾಟ ಆರಂಭಿಸುವ ತೀರ್ಮಾನ ಕೈಗೊಳ್ಳಲಾಯಿತು.

ADVERTISEMENT

ಶಾಸಕ ಧೀರಜ್‌ ಮುನಿರಾಜ್‌ ಮಾತನಾಡಿ, ಬಿಬಿಎಂಪಿ ವ್ಯಾಪ್ತಿ ಕಸ ವಿಲೇವಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ತಾಲ್ಲೂಕಿನ ಜನರ ಆರೋಗ್ಯ, ಪರಿಸರ ರಕ್ಷಣೆಗೆ ಎಲ್ಲರು ಪಕ್ಷಾತೀತವಾಗಿ ಬೆಂಬಲಸಬೇಕು ಎಂದು ಮನವಿ ಮಾಡಿದರು.

‘ಎರಡು ವರ್ಷಗಳಿಂದಲೂ ಬಿಬಿಎಂಪಿ ಕಸ ವಿಲೇವಾರಿ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ತಾಲ್ಲೂಕಿನ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ಅನುದಾನ ಪಡೆಯದೆ ಪ್ರತಿರೋಧ ವ್ಯಕ್ತಪಡಿಸಲಾಗಿದೆ. ನಮಗೆ ಬೇಕಿರುವುದು ಬಿಬಿಎಂಪಿ ಅನುದಾನ ಅಲ್ಲ, ಕಸ ಇಲ್ಲಿಗೆ ಬರುವುದು ನಿಲ್ಲಬೇಕು’ ಎಂದರು. 

ಅಂತರ್ಜಲ ಬಳಕೆಯಿಂದ ಬೆಳೆಗಳು ಸಹ ಹಾಳಾಗುತ್ತಿವೆ. ಇದರ ವಿರುದ್ಧ ಈಗಾಗಲೇ ಹಲವಾರು ಜನ ರೈತರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಹ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕುರಿತು ವರದಿ ನೀಡಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದಲೂ ಕಸ ವಿಲೇವಾರಿ ಘಟಕ ಮುಚ್ಚುವಂತೆ ನಿರ್ಣಯ ಅಂಗೀಕರಿಸಿದ್ದಾರೆ ಎಂದು ತಿಳಿಸಿದರು.

ಬಿಬಿಎಂಪಿ ಕಸ ಇಲ್ಲಿಗೆ ಬರುತ್ತಿರುವುದರಿಂದ ಅಂತರ್ಜಲ ಕಲುಸಿತವಾಗಿ ದೊಡ್ಡಬೆಳವಂಗಲ ಹಾಗೂ ಸಾಸಲು ಭಾಗದ ಹತ್ತಾರು ಗ್ರಾಮಗಳ ಜನರು ನಾನಾ ರೀತಿಯ ಚರ್ಮ ರೋಗ ಸೇರಿದಂತೆ ಹಲವಾರು ಆರೋಗ್ಯದ ಸಮಸ್ಯೆಗಳಿಂದ ನರಳುತ್ತಿದ್ದಾರೆ.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್‌.ರವಿಕುಮಾರ್‌, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ್‌, ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ತಿ.ರಂಗರಾಜು, ಜೋ.ನ.ಮಲ್ಲಿಕಾರ್ಜುನ್‌, ವತ್ಸಲಾ ಇದ್ದರು.

ಕಸವೂ ಬೇಡ ಅನುದಾನವೂ ಬೇಡ..
‘ಸ್ಥಳೀಯ ಗ್ರಾಮ ಪಂಚಾಯಿತ ಹಾಗೂ ತಾಲ್ಲೂಕು ಆಡಳಿತದ ಗಮನಕ್ಕು ತರದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ್ಕೆ ರಸ್ತೆ ನಿರ್ಮಿಸಿರುವ ಗುತ್ತಿಗೆದಾರನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ನಮಗೆ ಬಿಬಿಎಂಪಿ ಕಸವು ಬೇಡ ಬಿಬಿಎಂಪಿ ಅನುದಾನವು ಬೇಡ’  ಎಂದು ಶಾಸಕ ಧೀರಜ್‌ ಮುನಿರಾಜು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.