
ಆನೇಕಲ್: ರೈತರು ದೇಶದ ಬೆನ್ನೆಲುಬು. ಆದರೆ ಇತ್ತೀಚಿನ ದಿನಗಳಲ್ಲಿ ರೈತರು ಮತ್ತು ರೈತರ ಭೂಮಿಯ ಮೇಲಿನ ಶೋಷಣೆ ಹೆಚ್ಚಾಗುತ್ತಿದೆ. ರೈತರ ಹಿತ ಕಾಯಬೇಕಾದ ಸರ್ಕಾರಗಳೇ ರೈತರ ಭೂಕಬಳಿಕೆಗೆ ಮುಂದಾಗಿರುವುದು ದುಃಖದ ಸಂಗತಿ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಆನೇಕಲ್ ತಾಲ್ಲೂಕು ಆಧ್ಯಕ್ಷ ಹಂದೇನಹಳ್ಳಿ ಚಂದ್ರಾರೆಡ್ಡಿ ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದಿಂದ ತಾಲ್ಲೂಕಿನ ಮಾಯಸಂದ್ರ ಗ್ರಾಮದಲ್ಲಿ ಭಾನುವಾರ ನಡೆದ ರೈತ ಸಮಾವೇಶದಲ್ಲಿ ಮಾತನಾಡಿದರು.
ಸರ್ಕಾರಗಳು ರೈತರ ಕೃಷಿಗೆ ಪ್ರೋತ್ಸಾಹ ನೀಡುವ ಬದಲಿಗೆ ಕಾರ್ಪೊರೇಟ್ ಬಂಡವಾಳಗಾರರು ಮತ್ತು ರಿಯಲ್ ಎಸ್ಟೇಟ್ ಲಾಬಿಗೆ ಮಣಿದು ಕೃಷಿ ಭೂಮಿಯನ್ನು ಕೆಐಎಡಿಬಿ, ಕರ್ನಾಟಕ ಗೃಹ ಮಂಡಳಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಕೃಷಿ ಭೂಮಿಯನ್ನು ಕಬಳಿಕೆ ಮಾಡಲಾಗುತ್ತಿದೆ ಎಂದು ದೂರಿದರು.
ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ 11 ಗ್ರಾಮಗಳ 2535 ಎಕರೆ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳುತ್ತಿದೆ. ಹತ್ತಾರು ವರ್ಷಗಳಿಂದ ಕೃಷಿ ಮಾಡಿಕೊಂಡಿರುವ ರೈತರನ್ನು ಅನಾಥರನ್ನಾಗಿ ಮಾಡುತ್ತಿದೆ. ಈ ಕ್ರಮದಿಂದಾಗಿ ರೈತರು ಜೀವನ ನಡೆಸುವುದೇ ಕಷ್ಟವಾಗಿದೆ ಎಂದರು.
ರೈತ ಮುಖಂಡ ಯಶವಂತ್ ಮಾತನಾಡಿ ರೈತರ ಕೃಷಿ ಭೂಮಿಯ ಭೂಸ್ವಾದಿನ ಪ್ರಕ್ರಿಯೆಯ ವಿರುದ್ಧದ ಹೋರಾಟ ತೀವ್ರಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ನೇಗಿಲು ಹಿಡಿಯುವ ರೈತ ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗಲಿದ್ದಾರೆ ಎಂದರು.
ಸಂಘದ ರಾಜ್ಯ ಉಪಾಧ್ಯಕ್ಷ ಕಲ್ಲಯ್ಯ ವೆಂಕಟಾಚಲ, ಆನೇಕಲ್ ತಾಲ್ಲೂಕು ಗೌರವ ಅಧ್ಯಕ್ಷ ವೆಂಕಟೇಶ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಬಾಲರಾಜು, ಖಜಾಂಚಿ ವೆಂಕಟಸ್ವಾಮಿ ರೆಡ್ಡಿ, ಉಪಾಧ್ಯಕ್ಷ ಸತೀಶ್ ರೆಡ್ಡಿ, ಮುನಿರಾಜು, ಮಾದೇಶ್, ಮಹೇಶ್, ಸದಸ್ಯರಾದ ಗೋಪಾಲ್, ಮುನಿರಾಜು, ಕೆಂಪಣ್ಣ, ಅಪ್ಪಯ್ಯ ರೆಡ್ಡಿ, ಮುನಿಯಪ್ಪ, ಮಂಜುನಾಥ್, ಅಣ್ಣಯ್ಯಪ್ಪ, ರಾಜಪ್ಪ, ಗೌಡಪ್ಪ, ವೆಂಕಟಪ್ಪ, ಮೋಹನ್, ನಾಗರಾಜ ರೆಡ್ಡಿ, ಪದ್ಮಮ್ಮ ಇದ್ದರು.
ಹಕ್ಕೋತ್ತಾಯ ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಭೂಸ್ವಾಧೀನ ಕೈಬಿಡಬೇಕು ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಬೇಕು ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ನೀಡಬೇಕು ರೈತರು ಬೆಳೆದ ಬೆಳಗಳಿಗೆ ಬೆಂಬಲ ಬೆಲೆ ಖಾತ್ರಿಪಡಿಸಬೇಕು ರೈತ ವಿರೋಧಿ, ಕಾರ್ಮಿಕ ವಿರೋಧಿ ಮತ್ತು ಜನವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.