ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ಪತ್ರ ಬರಹಾಗರರ ಒಕ್ಕೂಟದವರು ಧರಣಿ ಮಾಡಿದರು
ಪ್ರಜಾವಾಣಿ ಚಿತ್ರ
ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯು, ವಿಧಾನಮಂಡಲ ಚಳಿಗಾಲದ ಅಧಿವೇಶನದ ಏಳನೇ ದಿನವಾದ ಮಂಗಳವಾರ ಸರಣಿ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿಭಟನಕಾರರು, ತಮ್ಮ ಹಕ್ಕೊತ್ತಾಯ ಮಂಡಿಸಿದರು.
ಚರ್ಮಕಾರ/ಚಮ್ಮಾರ ಸಮುದಾಯಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾದವರು ಪ್ರತಿಭಟನೆ ನಡೆಸಿದರು.
‘ಮೂಲ ಚರ್ಮೋದ್ಯೋಗ ಮಾಡುವ ಜಾತಿಯವರನ್ನು ಒಂದೇ ಗುಂಪಿನಡಿ ಕ್ರೋಢೀಕರಿಸಿ ಗಣತಿ ಮಾಡಿ, ಜನಗಣತಿ ವರದಿಯಲ್ಲಿ ಪ್ರಕಟಿಸಬೇಕು. ಚರ್ಮಕಾರ ಸಮುದಾಯದವರಿಗಾಗಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಲು ಅನುದಾನ ಒದಗಿಸಬೇಕು’ ಎಂದೂ ಆಗ್ರಹಿಸಿದರು.
ಮುಖಂಡರಾದ ಭೀಮರಾವ್ ಪವಾರ, ಮನೋಹರ ಮಂದೋಲಿ, ಸಂಜೀವ ಲೋಕಾಪುರ, ಶಿವಾನಂದ ದೊಡಮನಿ, ರಾಮಕೃಷ್ಣ ದೊಡಮನಿ, ಶಿವಣ್ಣ ಮುಳಗುಂದ, ಸಂತೋಷ ಹೊಂಗಲ ನೇತೃತ್ವ ವಹಿಸಿದ್ದರು.
ಸಚಿವ ರಹೀಮ್ ಖಾನ್ ಪ್ರತಿಭಟನಾ ಸ್ಥಳಕ್ಕಾಗಮಿಸಿ ಬೇಡಿಕೆ ಆಲಿಸಿದರು.
ಕ್ರೈಸ್‌ನಡಿ ವಸತಿ ಶಾಲೆಗಳಲ್ಲಿ 6ರಿಂದ 10 ವರ್ಷಗಳಿಂದ ದುಡಿಯುತ್ತಿರುವ ನಮ್ಮ ವಯಸ್ಸು ಮೀರುತ್ತಿದೆ. ಹಾಗಾಗಿ ಸೇವಾನುಭವ ಆಧರಿಸಿ, ಮುಂದಿನ ನೇಮಕಾತಿಯಲ್ಲಿ ನಮಗೆ ವರ್ಷಕ್ಕೆ ಶೇ 5ರಷ್ಟು ಕೃಪಾಂಕ ಕೊಡಬೇಕು ಎಂದು ಆಗ್ರಹಿಸಿ ಹೈದರಾಬಾದ್ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಸಂಘದವರು ಪ್ರತಿಭಟನೆ ಮಾಡಿದರು.
ಜವಾಹರ ನವೋದಯ ವಸತಿ ಶಾಲೆಗಳ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಮಾದರಿಯಲ್ಲೇ ನಮಗೂ ವೇತನ ಕೊಡಬೇಕು. ಏಪ್ರಿಲ್, ಮೇ ಮತ್ತು ಅಕ್ಟೋಬರ್ ತಿಂಗಳ ಪೂರ್ಣ ಗೌರವಧನ ನೀಡಬೇಕು. ಪಿಎಫ್, ವೈದ್ಯಕೀಯ ಸೌಲಭ್ಯ ಸೇರಿ ಸೇವಾಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಬೇರೆ ರಾಜ್ಯಗಳ ಮಾದರಿಯಲ್ಲೇ, ಕರ್ನಾಟಕದಲ್ಲೂ ದಸ್ತಾವೇಜು ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ಪತ್ರ ಬರಹಾಗರರ ಒಕ್ಕೂಟದವರು ಧರಣಿ ಮಾಡಿದರು.
ನೋಂದಣಿ ಆಗುವ ಎಲ್ಲ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರು ಸಹಿ ಹಾಕುವುದನ್ನು ಕಡ್ಡಾಯವಾಗಿಸಬೇಕು. ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟಬೇಕು. ರಾಜ್ಯದ ಎಲ್ಲ ದಸ್ತಾವೇಜು ಬರಹಗಾರರಿಗೆ ಏಕರೂಪದ ಗುರುತಿನ ಚೀಟಿ ನೀಡಬೇಕು. ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಬೆಳಗಾವಿಯ ವಿವಿಧ ಪ್ರದೇಶಗಳಲ್ಲಿ ಬಾಂಡ್ ಪೇಪರ್‌ಗಳ ಆಧಾರದಲ್ಲಿ ಖರೀದಿಸಿದ ನಿವೇಶನ ಮತ್ತು ಮನೆಗಳನ್ನು ಸಕ್ರಮಗೊಳಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಅಂಜುಮನ್–ಇ–ಇಸ್ಲಾಂ ಕಮಿಟಿಯವರು ಧರಣಿ ಮಾಡಿದರು.
‘ಬಡತನದ ಮಧ್ಯೆಯೂ ಹಣ ಕೂಡಿಟ್ಟು, ಬಾಂಡ್ ಪೇಪರ್‌ಗಳನ್ನು ಆಧರಿಸಿ ನಿವೇಶನ ಹಾಗೂ ಮನೆ ಖರೀದಿಸಿದ್ದೇವೆ. ಅವುಗಳನ್ನು ಸರ್ಕಾರ ಸಕ್ರಮ ಮಾಡಬೇಕು’ ಎಂದು ಒತ್ತಾಯಿಸಿದರು.
ಆರ್ಥಿಕವಾಗಿ ಹಿಂದುಳಿದಿರುವ ಹಿರಿಯ ನಾಗರಿಕರಿಗೆ ಮಾಸಿಕ ₹10 ಸಾವಿರ ವೃದ್ಧಾಪ್ಯ ವೇತನ ನೀಡಬೇಕು. ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಚಿಕಿತ್ಸಾ ವಿಭಾಗ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದವರು ಧರಣಿ ಮಾಡಿದರು.
ಉಡುಪಿ, ದಕ್ಷಿಣ ಕನ್ನಡ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ವಾಸಿಸುತ್ತಿರುವ ಕಮ್ಮಾರರಿಗೆ ಪರಿಶಿಷ್ಟ ಪಂಗಡ(ಎಸ್‌ಟಿ) ಮೀಸಲಾತಿಯನ್ನು ಸರ್ಕಾರ ನೀಡಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಕಂಬಾರರಿಗೆ(ಕಮ್ಮಾರರಿಗೆ) ಎಸ್‌ಟಿ ಮೀಸಲಾತಿ ದೊರೆಯಬೇಕು ಎಂದು ಆಗ್ರಹಿಸಿ ಕಂಬಾರ ಸಮುದಾಯದ ಮುಖಂಡರು ಧರಣಿ ಮಾಡಿದರು.
ಪರಿಶಿಷ್ಟರ ಕಲ್ಯಾಣಕ್ಕಾಗಿ ಎಸ್‌ಟಿಪಿ, ಟಿಎಸ್‌ಪಿ ಯೋಜನೆಗಳಡಿ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸುತ್ತಿರುವುದನ್ನು ವಿರೋಧಿಸಿ ಛಲವಾದಿ ಮಹಾಸಭಾದವರು ಪ್ರತಿಭಟಿಸಿದರು.
ಎಸ್‌ಟಿಪಿ, ಟಿಎಸ್‌ಪಿ ಯೋಜನೆಗಳ ಹಣವನ್ನು ಪರಿಶಿಷ್ಟರ ಕಲ್ಯಾಣಕ್ಕಾಗಿ ಮಾತ್ರ ಮೀಸಲಿಡಬೇಕು. ಬೆಳಗಾವಿಯಲ್ಲಿ ಛಲವಾದಿ ಸಾಂಸ್ಕೃತಿಕ ಭವನ ನಿರ್ಮಿಸಲು ಎರಡು ಎಕರೆ ಸರ್ಕಾರಿ ಜಮೀನು ಹಾಗೂ ₹5 ಕೋಟಿ ಅನುದಾನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಮುಖಂಡ ದುರ್ಗೇಶ ಮೇತ್ರಿ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.