
ಬೆಳಗಾವಿ: ‘ಈ ಬಾರಿಯ ಚಳಿಗಾಲಯದ ಅಧಿವೇಶನಕ್ಕೆ 6,000 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗುವುದು’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಡಿ.8ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ, ನಗರದಲ್ಲಿ ಬುಧವಾರ ಪೊಲೀಸರೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
‘ಅಧಿವೇಶನ ವೇಳೆ ಎದುರಾಗುವ ಸಮಸ್ಯೆಗಳು, ಪ್ರತಿಭಟನೆಗಳನ್ನು ಸಮರ್ಥವಾಗಿ ನಿಭಾಯಿಸಲು ಸಮಾಲೋಚನೆ ನಡೆಸಿದ್ದೇನೆ. ನಗರ ಪೊಲೀಸ್ ಕಮೀಷನರ್, ಬೆಳಗಾವಿ ಐಜಿ ಮತ್ತು ರಾಜ್ಯಮಟ್ಟದ ಎಡಿಜಿಪಿ ಜೊತೆಗೆ ಮಾಡಿದ್ದೇವೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ. ಅಧಿವೇಶನದಲ್ಲಿ ಸಾಲು– ಸಾಲು ಪ್ರತಿಭಟನೆ ನಡೆಯಲಿವೆ. ರೈತರ, ಎಂಇಎಸ್, ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ. ಇದೆಲ್ಲಕ್ಕೂ ಪೊಲೀಸರು ನಿಗಾ ಇಡಲಿದ್ದಾರೆ’ ಎಂದರು.
‘ನಮ್ಮ ಸಿಬ್ಬಂದಿ ಊಟ, ವಸತಿ ಸೇರಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿದ್ದೇವೆ. ನಮ್ಮ ಸರ್ಕಾರ ವಿವಿಧ ಇಲಾಖೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅನುಮತಿ ಕೊಟ್ಟಿದ್ದೇವೆ. ಆಂತರಿಕ ಮೀಸಲಾತಿ ಕಾರಣಕ್ಕೆ ನೇಮಕಾತಿ ವಿಳಂಬವಾಗಿತ್ತು. ಈಗ ಆ ಸಮಸ್ಯೆ ನಿವಾರಣೆಯಾಗಿದೆ. 545 ಸಬ್ ಇನ್‌ಸ್ಪೆಕ್ಟರ್‌ಗಳ ನೇಮಕ ಆಗಿ, ತರಬೇತಿ ಮುಗಿಯುವ ಹಂತಕ್ಕೆ ಬಂದಿದೆ. ಇನ್ನೂ 600 ಖಾಲಿ ಇರುವ ಪಿಎಸ್ಐ ಹುದ್ದೆ ನೇಮಕಾತಿ ಮಾಡುತ್ತೇವೆ’ ಎಂದರು.
‘ರಾಜ್ಯದಲ್ಲಿ 15 ಸಾವಿರ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆ ಖಾಲಿ ಇವೆ. ಅವುಗಳನ್ನು ಹಂತ ಹಂತವಾಗಿ ನೇಮಕಾತಿ ಮಾಡುತ್ತೇವೆ. ಎರಡು ವರ್ಷ ವಯೋಮಿತಿ ವಿನಾಯಿತಿ ಕೊಟ್ಟಿದ್ದೇವೆ. 70 ಸಾವಿರದವರೆಗೂ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಸರ್ಕಾರದ ಹಂತದಲ್ಲಿ ಆರಂಭವಾಗಿದೆ’ ಎಂದೂ ತಿಳಿಸಿದರು.
‘ಗ್ಯಾಂಬ್ಲಿಕ್, ಮಟ್ಕಾ ಸೇರಿದಂತೆ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ನಮ್ಮ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ನಮ್ಮ ಪೊಲೀಸರು ಉತ್ತಮ ಕೆಲಸ ಮಾಡ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.