ADVERTISEMENT

ಭಯ ಹುಟ್ಟಿಸಲು ಸಿಬಿಐ ದಾಳಿ: ಡಿ.ಕೆ.ಶಿವಕುಮಾರ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 16:17 IST
Last Updated 20 ಡಿಸೆಂಬರ್ 2022, 16:17 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಳಗಾವಿ: ‘ನಾನು ಯಾರಿಗೂ ಸಹಾಯ ಮಾಡಬಾರದು– ಸಹಾಯ ಪಡೆಯಬಾರದು, ಯಾರಿಗೂ ಸಾಲ ಕೊಡಬಾರದು– ತಗೆದುಕೊಳ್ಳಬಾರದು, ಸಂಘಟನೆಯಲ್ಲೂ ತೊಡಗಬಾರದು ಎಂಬ ರೀತಿಯಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಸಿಬಿಐ, ಇಡಿ ದಾಳಿಯ ಉದ್ದೇಶವೇ ಇದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಹೇಳಿದರು.‌

ತಮ್ಮ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದ ವಿಚಾರವಾಗಿ ನಗರದಲ್ಲಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ನನ್ನ ಸಂಸ್ಥೆ ಒಂದೇ ಅಲ್ಲ, ನನ್ನ ಸಂಪರ್ಕ ಇಟ್ಟುಕೊಂಡಿ ಎಲ್ಲರ ಸಂಸ್ಥೆ– ಮನೆಗಳ ಮೇಲೂ ದಾಳಿ ನಡೆದಿದೆ. ನನ್ನ ವಕೀಲರಿಂದ ಹಿಡಿದು ಟ್ರಾವೆಲ್‌ ಏಜೆನ್ಸಿಯವರೆಗೂ ಯಾರನ್ನೂ ಬಿಟ್ಟಿಲ್ಲ. ಯಾರಿಗಾದರೂ ₹1 ಲಕ್ಷದ ಚೆಕ್‌ ನೀಡಿದ್ದರೂ ಅವರನ್ನು ಕರೆದು ವಿಚಾರಣೆಗೆ ಒಳಪಡಿಸುತ್ತಿದ್ದಾರೆ’ ಎಂದರು.

‘2017ರಲ್ಲೇ ನನ್ನ ಮನೆ ಮೇಲೆ ದಾಳಿ ನಡೆಯಿತು. ಆಮೇಲೆ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ನಂತರ ಜಾರಿ ನಿರ್ದೇಶನಾಲಯ (ಇ.ಡಿ)ದವರು ಕೇಸ್‌ ಹಾಕಿದರು. ಅವರದೆಲ್ಲ ಮುಗಿದಿದೆ. ಈಗ ಮತ್ತೆ ಆರ್ಥಿಕ ವ್ಯವಹಾರಗಳ ನ್ಯಾಯಾಲಯ (ಎಕನಾಮಿಕ್‌ ಅಫೆನ್ಸ್‌ ಕೋರ್ಟ್‌)ದಲ್ಲಿ ಕೇಸ್‌ ನಡೆಯುತ್ತಿದೆ. ಸಿಬಿಐ, ಇಡಿ ನಿರಂತರ ತನಿಖೆ ನಡೆದೇ ಇದೆ’ ಎಂದರು.‘ಇದರ ಮೇಲಾಗಿ, ನನ್ನ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ಮಾಡಿಸಿದ್ದಾರೆ. ನಮ್ಮ ಅಧಿಕಾರಿಗಳನ್ನೆಲ್ಲ ಹೆದರಿಸಿ ಏನೇನು ಮಾಡಬೇಕೋ ಮಾಡಿದ್ದಾರೆ. ಮುಂಚೆಯೇ ನಾನು ಎಲ್ಲ ದಾಖಲೆ ಕೊಟ್ಟಿದ್ದೆ, ಚುನಾವಣೆ ಕೆಲಸದಲ್ಲಿ ಕ್ರಿಯಾಶೀಲನಾಗಿದ್ದು, ಚುನಾವಣೆ ಮುಗಿದ ಬಳಿಕ ಕರೆಯಿರಿ ಎಂದೂ ಹೇಳಿದ್ದೆ. ತನಿಖೆ ಮಾಡುವುದೇ ಆಗಿದ್ದರೆ ಚುನಾವಣೆ ಮುಗಿದ ಬಳಿಕ ಮಾಡಬಹುದಿತ್ತು. ಆದರೆ, ತನಿಖಾ ಸಂಸ್ಥೆಗಳಿಗೆ ನಾನೊಬ್ಬನೇ ಕಾಣಿಸುತ್ತಿದ್ದೇನೆ’ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.