ADVERTISEMENT

ನನ್ನ ತಮ್ಮನಿಗೇ ಪರಿಷತ್‌ ಟಿಕೆಟ್‌, ಗುಟ್ಟೇನೂ ಇಲ್ಲ ಎಂದ ಲಕ್ಷ್ಮೀ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 12:25 IST
Last Updated 18 ನವೆಂಬರ್ 2021, 12:25 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ‘ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸಹೋದರ ಚನ್ನರಾಜ ಹಟ್ಟಿಹೊಳಿ ಅವರಿಗೆ ಅಧಿಕೃತವಾಗಿ ಪಕ್ಷದಿಂದ ಟಿಕೆಟ್‌ ಘೋಷಣೆಯಾಗಿಲ್ಲ ನಿಜ. ಆದರೆ, ಸಮಯದ ಅಭಾವ ಇರುವುದರಿಂದ ಪ್ರಚಾರ ಆರಂಭಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸೂಚಿಸಿದ್ದಾರೆ. ಹೀಗಾಗಿ, ನಾನು ಮತ್ತು ಕೆ‍‍ಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರಚಾರ ನಡೆಸುತ್ತಿದ್ದೇವೆ. ಇದರಲ್ಲಿ ಗುಟ್ಟೇನೂ ಇಲ್ಲ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಯಾವುದೇ ನಾಯಕರ ಟಿಕೆಟ್ ತಪ್ಪಿಸಿ ನಾವು ಟಿಕೆಟ್ ತೆಗೆದುಕೊಂಡಿಲ್ಲ. ಎಲ್ಲ ನಾಯಕರ ಒಮ್ಮತದ ಅಭಿಪ್ರಾಯ ಪರಿಗಣಿಸಿದ್ದಾರೆ. ಹೀಗಾಗಿ, ಸಿಂಗಲ್ ಟಿಕೆಟ್ ಘೋಷಿಸಲಾಗಿದೆ. ಆಕಾಂಕ್ಷಿಗಳಾಗಿದ್ದ ಘಟಾನುಘಟಿ ನಾಯಕರನ್ನು ಎದುರು ಹಾಕಿಕೊಳ್ಳಲು ಆಗುತ್ತದೆಯೇ?’ ಎಂದು ಕೇಳಿದರು.

‘ಚನ್ನರಾಜ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ ಎನ್ನುವುದನ್ನು ವರಿಷ್ಠರು ಒಪ್ಪಿದ್ದಾರೆ. ಘಟಾನುಘಟಿ ನಾಯಕರೆ ಮುಂದೆ ನಿಂತು ಚುನಾವಣೆ ನಡೆಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಚುನಾವಣೆಯಲ್ಲಿ ಉದ್ಯಮಿ ಲಖನ್ ಜಾರಕಿಹೊಳಿ ಅಥವಾ ಯಾರು ಸ್ಪರ್ಧಿಸುತ್ತಾರೆ ಎನ್ನುವುದರ ಬಗ್ಗೆ ನಮಗೆ ಗಮನವಿಲ್ಲ. ನಮ್ಮ ಅಭ್ಯರ್ಥಿ ಗೆಲ್ಲಿಸಲು ಆದ್ಯತೆ ಕೊಡುತ್ತೇವೆ. ನ.23ರಂದು ಸಹೋದರ ನಾಮಪತ್ರ ಸಲ್ಲಿಸಲಿದ್ದಾರೆ. ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ನಡೆಸುತ್ತೇವೆ. ಅವರೇ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಅವರು ಅವರ ಕುಟುಂಬ ರಾಜಕಾರಣದಲ್ಲಿದ್ದಾರೆ ಎಂದೆನಿಸುವುದಿಲ್ಲ’ ಎಂದರು.

‘ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕ ಕಾರ್ಯತಂತ್ರ ರೂಪಿಸಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.