
ಹುಕ್ಕೇರಿ (ಬೆಳಗಾವಿ): ತಾಲ್ಲೂಕಿನ ಬಸ್ತವಾಡ ಗ್ರಾಮದ ಮುಸ್ಲಿಂ ದಂಪತಿಯು ಹಿಂದೂ ಧರ್ಮದ ಇಬ್ಬರು ಅನಾಥ ಮಕ್ಕಳನ್ನು ಸಾಕಿ ಬೆಳೆಸಿ, ಶಿಕ್ಷಣ ಕೊಡಿಸಿ, ಈಗ ಒಬ್ಬರ ಮದುವೆಯನ್ನೂ ಮಾಡಿದ್ದಾರೆ.
ಗ್ರಾಮದ ಕಾಡಸಿದ್ದೇಶ್ವರ ಸಭಾಭವನದಲ್ಲಿ ಭಾನುವಾರ ಹಾಕಿದ್ದ ಮದುವೆ ಮಂಟಪದಲ್ಲಿ ವಧು–ವರರಷ್ಟೇ ಹಿಂದೂಗಳು. ಮದುವೆ ಜವಾಬ್ದಾರಿ, ಖರ್ಚು– ವೆಚ್ಚ, ಓಡಾಟ ಎಲ್ಲವೂ ಮುಸ್ಲಿಮರದ್ದು.
ಗ್ರಾಮದ ಮೆಹಬೂಬ್ ಹಸನ್ ನಾಯಿಕವಾಡಿ (ಮುಲ್ಲಾ) ಹಾಗೂ ನೂರಜಾನ್ ದಂಪತಿಯೇ ಭಾವೈಕ್ಯ ಮೆರೆದವರು. ದಂಪತಿಯ ನಿರ್ಧಾರಕ್ಕೆ ಅವರ ಇಡೀ ಕುಟುಂಬದವರು ಬೆಂಬಲವಾಗಿ ನಿಂತರು.
ಇಡೀ ಬದುಕು ತ್ಯಾಗ:
ಹಿಂದೂ– ಲಿಂಗಾಯತ ಸಮಾಜದ ಶಿವಾನಂದ ಕಾಡಯ್ಯ ಪೂಜಾರ ದಂಪತಿಗೆ ಇಬ್ಬರು ಪುತ್ರರಿದ್ದರು. ಹಿರಿಯ ಪುತ್ರ ಸೋಮಶೇಖರಗೆ 4 ವರ್ಷ, ಕಿರಿಯ ಪುತ್ರ ವಸಂತಗೆ 2 ವರ್ಷ ಇದ್ದಾಗ ಪೂಜಾರ ದಂಪತಿ ನಿಧನರಾದರು.
ಅನಾಥರಾದ ಮಕ್ಕಳನ್ನು ನಾಯಿಕವಾಡಿ ದಂಪತಿ ಮಡಿಲಿಗೆ ಹಾಕಿಕೊಂಡರು. ಇಬ್ಬರನ್ನೂ ಸಾಕಿ, ಸಲುಹಿ, ಉತ್ತಮ ಶಿಕ್ಷಣ ಕೊಡಿಸಿದರು. ನಾಯಿಕವಾಡಿ ದಂಪತಿಗೂ ನಾಲ್ವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಏಳು ಮಕ್ಕಳನ್ನು ದಂಪತಿ ಒಂದೇ ಮನೆಯಲ್ಲಿಟ್ಟುಕೊಂಡು ಸಲಹಿದ್ದಾರೆ.
ಮೆಹಬೂಬ್ ಹಸನ್ ನಾಯಿಕವಾಡಿ ಅವರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಶಿವಾನಂದ ಕಾಡಯ್ಯ ಪೂಜಾರ ಕೂಡ ಖಾಸಗಿ ಬಸ್ ಚಾಲಕರಾಗಿದ್ದರು.
ಪದವಿ ಶಿಕ್ಷಣ ಪಡೆದಿರುವ ಸೋಮಶೇಖರ್ ಮತ್ತು ಪಿಯು ಶಿಕ್ಷಣ ಮುಗಿಸಿದ ವಸಂತ ಇಬ್ಬರೂ ವಿಶೇಷ ಆರ್ಥಿಕ ವಲಯದ (ಎಸ್.ಇ.ಝಡ್) ಏಕಸ್ ಕಂಪನಿಯ ಉದ್ಯೋಗಿಗಳು.
ಈಗ ಸೋಮಶೇಖರ್‌ಗೆ ಕನ್ಯೆ ನೋಡಿದ್ದಿ. ಗ್ರಾಮದಲ್ಲಿ ಹಿಂದೂ –ಲಿಂಗಾಯತ ಸಂಪ್ರದಾಯದಂತೆಯೇ ಮದುವೆ ಮಾಡಿದ್ದಾರೆ. ಕರುಳಕುಡಿಯಂತೆ ಸಾಕಿ ಬೆಳೆಸಿದ ಮಗನ ಮದುವೆ ಕಂಡು ನಾಯಿಕವಾಡಿ ದಂಪತಿ ಭಾವುಕರಾದರು. ಕುಟುಂಬದವರು ಹಾಗೂ ಊರಿನ ಹಿರಿಯರು ಇದಕ್ಕೆ ಸಾಕ್ಷಿಯಾದರು.
ಮನುಷ್ಯರೆಲ್ಲ ಒಂದೇ ಎಂಬುದು ನನ್ನ ಭಾವನೆ. ಇಬ್ಬರೂ ಮಕ್ಕಳು ನಮ್ಮ ಮನೆಯಲ್ಲಿ ನಮ್ಮ ಮಕ್ಕಳಂತೆಯೇ ಬೆಳೆದರು. ಅವರ ಬಗ್ಗೆ ನನಗೆ ಹೆಮ್ಮೆ ಇದೆ.ಮೆಹಬೂಬ್ ಹಸನ್ ನಾಯಿಕ್ (ಮುಲ್ಲಾ) ಪಾಲಕ
ಧರ್ಮ ಸಂಘರ್ಷಗಳು ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ನಾಯಿಕವಾಡಿ ಕುಟುಂಬದವರು ತಗೆದುಕೊಂಡ ನಿರ್ಧಾರ ಇಡೀ ದೇಶಕ್ಕೆ ಮಾದರಿ.ಬಸವಪ್ರಭು ವಂಟಮೂರಿ ಅಧ್ಯಕ್ಷ ಜಿಲ್ಲಾ ರೈತ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.