
ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ಅನಾಥ ವಾಹನಗಳು | ಸುಗಮ ಸಂಚಾರಕ್ಕೆ ಅಡ್ಡಿ | ಈ ವಾಹನಗಳನ್ನು ಅಕ್ರಮ ಚಟುವಟಿಕೆಗೆ ಬಳಸುವ ಆತಂಕ
ಬೆಂಗಳೂರು: ನಗರದ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳಲ್ಲಿ ಕೆಟ್ಟು ನಿಂತಿರುವ ಹಳೆಯ ಅನಾಥ ವಾಹನಗಳು ಹತ್ತಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ನಿಂತಿವೆ. ಆ ವಾಹನಗಳ ಮಾಲೀಕರು ಯಾರು ಎಂಬುದು ಗೊತ್ತಿಲ್ಲ. ಜಿಬಿಎ ಅವುಗಳನ್ನು ಸ್ಥಳಾಂತರಿಸಿ, ಗುಜರಿಗೆ ಹಾಕುವ ಪ್ರಯತ್ನ ಮಾಡುತ್ತಿಲ್ಲ. ಇದರಿಂದ ಸ್ಥಳೀಯ ನಾಗರಿಕರು, ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ವರ್ಷಾನುಗಟ್ಟಲೇ ಒಂದೇ ಸ್ಥಳದಲ್ಲಿ ನಿಂತಿರುವ ಗಾಜುಗಳಿಲ್ಲದ ಕಾರುಗಳು, ಆಟೊ, ಬೈಕ್‌ಗಳು, ಈ ವಾಹನಗಳಲ್ಲಿ ಎಂಜಿನ್, ಸೀಟ್ ಯಾವುದೂ ಇರುವುದಿಲ್ಲ. ನಿಂತ ಸ್ಥಳದಲ್ಲೇ ವಾಹನಗಳು ನಿಂತು ಸಿಲಿಕಾನ್ ಸಿಟಿಯ ಸೌಂದರ್ಯಕ್ಕೆ ಧಕ್ಕೆ ತರುತ್ತಿವೆ. ಇದರ ಜೊತೆಗೆ ಸಂಚಾರ ದಟ್ಟಣೆ ಹಾಗೂ ಅನೈತಿಕ ಚಟುವಟಿಕೆಗಳ ತಾಣಗಳಾಗಿಯೂ ಮಾರ್ಪಡುತ್ತಿವೆ ಎಂಬುದು ಸಾರ್ವಜನಿಕರ ದೂರು.
‘ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಸಾವಿರಾರು ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿದ್ದು, ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಇದರ ಜೊತೆಗೆ ಹಳೆಯ ಅನಾಥ ವಾಹನಗಳು ಪಾದಚಾರಿ ಮಾರ್ಗ ಅಕ್ರಮಿಸಿಕೊಂಡು ನಿಂತಿದ್ದು, ಪಾದಚಾರಿಗಳ ಓಡಾಟಕ್ಕೆ ಸಮಸ್ಯೆ ಆಗುತ್ತಿದೆ. ಕೆಲವು ವಾಹನಗಳನ್ನು ರಸ್ತೆಗಳ ಬದಿಯಲ್ಲಿ ನಿಲುಗಡೆ ಮಾಡುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಇವುಗಳ ಮಾಲೀಕರನ್ನು ಹುಡುಕಿ ದಂಡ ಹಾಕಬೇಕು. ಇಲ್ಲದಿದ್ದರೆ ಈ ವಾಹನಗಳನ್ನು ಸ್ಥಳಾಂತರಿಸಿ ಗುಜರಿಗೆ ಹಾಕಬೇಕು’ ಎಂದು ವಾಹನ ಸವಾರರಾದ ಪ್ರಮೋದ್ ಹಾಗೂ ಧ್ರುವ್ ಒತ್ತಾಯಿಸಿದರು.
ರಾಜಾಜಿನಗರ, ಮಲ್ಲೇಶ್ವರದ ವೃತ್ತ, ಶಿವಾಜಿನಗರ, ಜಯನಗರ, ಜೆ.ಪಿ. ನಗರ, ಯಶವಂತಪುರ, ಸುಂಕದಕಟ್ಟೆ, ವಿಜಯನಗರ, ಹಲಸೂರು, ಇಂದಿರಾನಗರ, ಕೋರಮಂಗಲ, ಬೆನ್ಸನ್‌ಟೌನ್, ಕೆಂಗೇರಿ, ಬ್ಯಾಟರಾಯನಪುರ, ಮೈಸೂರು ರಸ್ತೆ, ಕಬ್ಬನ್‌ಪೇಟೆ, ಚಿಕ್ಕಪೇಟೆ, ಕೆ.ಆರ್. ಮಾರುಕಟ್ಟೆಯ ಅಕ್ಕಪಕ್ಕದ ರಸ್ತೆಗಳಲ್ಲಿ, ಕುರುಬರಹಳ್ಳಿ, ಗಾಂಧಿನಗರ, ಬನ್ನಪ್ಪಪಾರ್ಕ್, ಗಿರಿನಗರ, ಹೊಸಕೆರೆಹಳ್ಳಿ, ರಾಜರಾಜೇಶ್ವರಿನಗರ, ನಂದಿನಿ ಲೇಔಟ್, ಮಹಾಲಕ್ಷ್ಮಿ ಬಡಾವಣೆ, ವೈಟ್ ಫೀಲ್ಡ್, ಮಹದೇವಪುರ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಬಳಕೆಗೆ ಬಾರದ ಸಾವಿರಾರು ಸಂಖ್ಯೆಯ ವಾಹನಗಳು ರಸ್ತೆಯ ಬದಿಯಲ್ಲಿ ನಿಂತಿವೆ. ಇವುಗಳ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗಾಂಧಿನಗರದ ಶಿವಪ್ರಸಾದ್ ಒತ್ತಾಯಿಸಿದರು.
‘ಕಿರಿದಾದ ರಸ್ತೆಗಳಲ್ಲಿ ತುಕ್ಕು ಹಿಡಿದು ನಿಂತಿರುವ ವಾಹನಗಳಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು ಅನಗತ್ಯವಾಗಿ ಸಂಚಾರ ದಟ್ಟಣೆ ಆಗುತ್ತಿದೆ. ರೇಸ್ ಕೋರ್ಸ್ ರಸ್ತೆ ಹಾಗೂ ಆಸ್ಟಿನ್ ಟೌನ್ ಪೊಲೀಸ್ ಕ್ವಾಟರ್ಸ್ ಮುಂಭಾಗದ ರಸ್ತೆಗಳಲ್ಲಿ ಎರಡು ಕಾರುಗಳು ಇದ್ದಲ್ಲೇ ತುಕ್ಕು ಹಿಡಿದಿವೆ’ ಎಂದು ತಿಳಿಸಿದರು.
ನಗರದ ಬೀದಿಗಳಲ್ಲಿ ವರ್ಷಗಳಿಂದ ಕೆಟ್ಟು ನಿಂತಿರುವ ವಾಹನಗಳನ್ನು ಸಂಚಾರ ವಿಭಾಗದ ಪೊಲೀಸರ ಸಹಕಾರದಿಂದ ವಿಲೇವಾರಿ ಮಾಡಬೇಕು. ಕೂಡಲೇ ಇಂತಹ ವಾಹನಗಳನ್ನು ವಿಲೇವಾರಿ ಮಾಡಿ ನಗರದ ಸೌಂದರ್ಯ ಕಾಪಾಡಬೇಕು.ಶಿವಪ್ರಸಾದ್ ಗಾಂಧಿನಗರ
‘ಟೋಯಿಂಗ್ ಕಾರ್ಯ ಪ್ರಾರಂಭಿಸುತ್ತೇವೆ’
ನಗರದ ವಿವಿಧ ರಸ್ತೆಗಳಲ್ಲಿ ಹಲವಾರು ತಿಂಗಳುಗಳಿಂದ ರಸ್ತೆ ಬದಿಯಲ್ಲಿ ನಿಂತಿರುವ ಅನಾಥ ವಾಹನಗಳನ್ನು ತೆರವುಗೊಳಿಸುವ ಸಲುವಾಗಿ ಎರಡು ಟೋಯಿಂಗ್ ವಾಹನಗಳನ್ನು ಖರೀದಿಸಲಾಗಿದೆ. ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಎಲ್ಲಾ ಕಡೆ ಅನಾಥ ವಾಹನಗಳ ತೆರವು ಕಾರ್ಯವನ್ನು ಕೂಡಲೇ ಪ್ರಾರಂಭಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರರಾವ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.