ADVERTISEMENT

‘ಸುಮೇರು’ ಆವರಿಸಿದ ಅನಂತ ದುಃಖ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 20:22 IST
Last Updated 12 ನವೆಂಬರ್ 2018, 20:22 IST
1999ರ ಮೇ 9ರಂದು ಬೆಂಗಳೂರಿನಲ್ಲಿ ನಡೆದಿದ್ದ ಬಿಜೆಪಿ ಮತ್ತು ಲೋಕಶಕ್ತಿ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಅನಂತ್‌ ಕುಮಾರ್ (ಬಲದಿಂದ ಮೊದಲಿನವರು). ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ, ಲೋಕಶಕ್ತಿ ಪಕ್ಷದ ನಾಯಕ ರಾಮಕೃಷ್ಣ ಹೆಗಡೆ ಹಾಗೂ ಬಿಜೆಪಿ ನಾಯಕ ನರೇಂದ್ರ ಮೋದಿ ಇದ್ದಾರೆ– ಪ್ರಜಾವಾಣಿ ಚಿತ್ರ
1999ರ ಮೇ 9ರಂದು ಬೆಂಗಳೂರಿನಲ್ಲಿ ನಡೆದಿದ್ದ ಬಿಜೆಪಿ ಮತ್ತು ಲೋಕಶಕ್ತಿ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಅನಂತ್‌ ಕುಮಾರ್ (ಬಲದಿಂದ ಮೊದಲಿನವರು). ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ, ಲೋಕಶಕ್ತಿ ಪಕ್ಷದ ನಾಯಕ ರಾಮಕೃಷ್ಣ ಹೆಗಡೆ ಹಾಗೂ ಬಿಜೆಪಿ ನಾಯಕ ನರೇಂದ್ರ ಮೋದಿ ಇದ್ದಾರೆ– ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಸವನಗುಡಿಯ ‘ಸುಮೇರು’ವಿನಲ್ಲಿ ದುಃಖ ಮತ್ತು ಮೌನ ಆವರಿಸಿತ್ತು. ಸಾವಿರಾರು ಅಭಿಮಾನಿಗಳು ಸರದಿಯಲ್ಲಿ ಬಂದು, ಅಗಲಿದ ಅನಂತ್‌ ಕುಮಾರ್‌ ಅವರ ಪಾರ್ಥಿವ ಶರೀರದ ದರ್ಶನ ಪಡೆದರು.

ಕೆಲಕಾಲದಿಂದ ಅಸ್ವಸ್ಥಗೊಂಡಿದ್ದ ಅವರು ಇಷ್ಟು ಬೇಗ ಅಗಲಲಾರರು ಎಂಬ ವಿಶ್ವಾಸ ಅವರ ಅಭಿಮಾನಿಗಳದ್ದಾಗಿತ್ತು.

‘ಸುಮೇರು’ವಿನ ದ್ವಾರದಲ್ಲಿ ಹಾರ ಹಾಕಲಾದ ಅನಂತ್‌ ಅವರ ದೊಡ್ಡ ಭಾವಚಿತ್ರವೇ ಅಲ್ಲಿನ ಇಡೀ ಸನ್ನಿವೇಶವನ್ನು ಸಾರಿ ಹೇಳಿತ್ತು. ಸುತ್ತಮುತ್ತ ಬಿಗಿ ಭದ್ರತೆಗಿದ್ದ ನೂರಾರು ಪೊಲೀಸರಿಗೆ, ಆ ಭದ್ರತೆಯನ್ನೇ ಮೀರಿ ನುಸುಳುತ್ತಿದ್ದ ಅಭಿಮಾನಿಗಳು, ಮಾಧ್ಯಮದವರ ದಂಡನ್ನೆಲ್ಲ ನಿಭಾಯಿಸುವುದೇ ಹರಸಾಹಸವೆನಿಸಿತು.

ADVERTISEMENT

ರಾತ್ರಿ 9ರ ವೇಳೆಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸುಮಾರು 10 ನಿಮಿಷ ಇದ್ದು ನಿರ್ಗಮಿಸಿದರು. ಸಚಿವ ಡಿ.ವಿ. ಸದಾನಂದ ಗೌಡ ಅವರಂತೂ ಬಿಕ್ಕಿಬಿಕ್ಕಿ ಅತ್ತರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ವಿಷಾದದ ಭಾವ ಹೊತ್ತು ಮೌನದ ಮೊರೆಹೋಗಿದ್ದರು. ಪಕ್ಷಭೇದ ಮರೆತು ಎಲ್ಲ ನಾಯಕರು, ಜನಪ್ರತಿನಿಧಿಗಳು ಬಂದು ಅಂತಿಮ ದರ್ಶನ ಪಡೆದರು. ಕುಟುಂಬದವರಿಗೆ ಸಾಂತ್ವನ ಹೇಳಿದರು. ಉಕ್ಕಿ ಬರುತ್ತಿದ್ದ ದುಃಖದ ನಡುವೆಯೇ ಅನಂತ್‌ ಅವರ ಪತ್ನಿ ತೇಜಸ್ವಿನಿ ಅವರು ಬಂದವರಿಗೆಲ್ಲಾ ಕೈಮುಗಿದರು.

ಮನೆಯ ಹೊರಗೆ ಕೆಲವು ಮಹಿಳೆಯರು ಕುಳಿತು ವಿಷ್ಣುಸಹಸ್ರನಾಮ ಸಹಿತ ವಿವಿಧ ಶ್ಲೋಕಗಳನ್ನು ಪಠಿಸಿದರು. ಸಾವಿರಾರು ಹಾರಗಳು ಮೃತದೇಹದ ಪೆಟ್ಟಿಗೆ ಸ್ಪರ್ಶಿಸಿ ಒಂದೆಡೆ ರಾಶಿಬಿದ್ದವು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಟಿ.ಎ.ಶರವಣ, ನಟರಾದ ಅಂಬರೀಷ್‌, ಪುನೀತ್‌ ರಾಜ್‌ಕುಮಾರ್‌ ಅಂತಿಮ ದರ್ಶನ ಪಡೆದವರಲ್ಲಿ ಪ್ರಮುಖರು.

ಮಲ್ಲೇಶ್ವರದ ಬಿಜೆಪಿ ಕಚೇರಿ ಹಾಗೂ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಮೈದಾನದ ಸಿದ್ಧತೆಯನ್ನು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಪರಿಶೀಲಿಸಿದರು. ಬ್ಯಾರಿಕೇಡ್‌ಗಳು, ಭದ್ರತೆ, ಪೆಂಡಾಲ್‌ ಮತ್ತಿತರ ತಯಾರಿ ಮಾಡಲಾಯಿತು. ಮಧ್ಯಾಹ್ನ 1ಕ್ಕೆ ಚಾಮರಾಜಪೇಟೆಯಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದನ್ನು ಖಂಡಿಸಿ ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಕಚೇರಿ ಎದುರು 1996ರ ಸೆಪ್ಟೆಂಬರ್‌ 17ರಂದು ಪಕ್ಷದ ವತಿಯಿಂದ ನಡೆದಿದ್ದ ಧರಣಿಯಲ್ಲಿ ಭಾಗವಹಿಸಿದ್ದ ಅನಂತ್‌ ಕುಮಾರ್‌ (ಎಡದಿಂದ ನಾಲ್ಕನೆಯವರು). ಪಕ್ಷದ ಮುಖಂಡರಾದ ರಾಮಚಂದ್ರಗೌಡ, ಕೆ.ಎಸ್‌.ಈಶ್ವರಪ್ಪ, ಬಿ.ಎಸ್‌.ಯಡಿಯೂರಪ್ಪ ಹಾಗೂ ಸುರೇಶ್‌ ಕುಮಾರ್‌ ಇದ್ದಾರೆ– ಪ್ರಜಾವಾಣಿ ಚಿತ್ರ

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.