ADVERTISEMENT

ಬಿಬಿಎಂಪಿಗೆ 15 ಲಕ್ಷ ಆ್ಯಂಟಿಜೆನ್ ಪರೀಕ್ಷಾ ಕಿಟ್

ಬಾಬು ಜಗಜೀವನರಾಮ ನಗರದ ಹೆರಿಗೆ ಆಸ್ಪತ್ರೆಯ ಸ್ಥಿರೀಕರಣ ಕೇಂದ್ರ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 8 ಮೇ 2021, 19:31 IST
Last Updated 8 ಮೇ 2021, 19:31 IST
ಜಗಜೀವನ್‌ರಾಂನಗರದ ಹೆರಿಗೆ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಹಾಗೂ ಗೌರವ್ ಗುಪ್ತ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸರ್ಫರಾಜ್‌ ಖಾನ್‌, ಡಾ.ನಿರ್ಮಲಾ ಬುಗ್ಗಿ ಇದ್ದಾರೆ
ಜಗಜೀವನ್‌ರಾಂನಗರದ ಹೆರಿಗೆ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಹಾಗೂ ಗೌರವ್ ಗುಪ್ತ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸರ್ಫರಾಜ್‌ ಖಾನ್‌, ಡಾ.ನಿರ್ಮಲಾ ಬುಗ್ಗಿ ಇದ್ದಾರೆ   

ಬೆಂಗಳೂರು: ‘ರಾಜ್ಯ ಸರ್ಕಾರದಿಂದ 15 ಲಕ್ಷ ಆಂಟಿಜೆನ್ ಪರೀಕ್ಷಾ ಕಿಟ್‌ಗಳನ್ನು ಬಿಬಿಎಂಪಿಗೆ ಪೂರೈಸಲಾಗುತ್ತಿದೆ. ಇದರಿಂದ ಕೊರೊನಾ ಸೋಂಕಿತರನ್ನು ತ್ವರಿತವಾಗಿ ಪತ್ತೆ ಹಚ್ಚಬಹುದಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.

ಡಾ. ಬಾಬುಜಗಜೀವನರಾಂ ನಗರದಲ್ಲಿನ ಹೆರಿಗೆ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಸ್ಥಿರೀಕರಣ ಕೇಂದ್ರಕ್ಕೆ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಜೊತೆ ಶನಿವಾರ ಭೇಟಿ ನೀಡಿದ ಅವರು ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ‘ಕೋವಿಡ್‌ ಪರೀಕ್ಷೆಗಳನ್ನು ತ್ವರಿತವಾಗಿ ನಡೆಸುವುದರಿಂದ ಶೀಘ್ರ ಚಿಕಿತ್ಸೆ ನೀಡುವುದು ಸಾಧ್ಯವಾಗುತ್ತದೆ. ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯೂ ಇದರಿಂದಾಗಿ ತಗ್ಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಮ್ಲಜನಕ ಹಾಸಿಗೆ ಸೌಲಭ್ಯ: ಕೊರೊನಾ ಸೋಂಕಿತರಿಗೆ ಆಮ್ಲಜನಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಗರದಲ್ಲಿನ ಕೋವಿಡ್ ಆರೈಕೆ ಕೇಂದ್ರಗಳು ಹಾಗೂ 12 ಹೆರಿಗೆ ಆಸ್ಪತ್ರೆಗಳನ್ನು ಆಮ್ಲಜನಕ ಸೌಲಭ್ಯ ಇರುವ ಸ್ಥಿರೀಕರಣ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಹೆರಿಗೆ ಆಸ್ಪತ್ರೆಗಳಲ್ಲಿ ಒಟ್ಟು 254 ಹಾಸಿಗೆಗಳು ಇದ್ದು, 240 ಹಾಸಿಗೆಗಳಿಗೆ ಆಮ್ಲಜನಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ADVERTISEMENT

ಜಗಜೀವನರಾಮನಗರದ ಹೆರಿಗೆ ಆಸ್ಪತ್ರೆಯಲ್ಲಿ 30 ಹಾಸಿಗೆ ಸಾಮರ್ಥ್ಯವಿದ್ದು, 30 ಹಾಸಿಗೆಗಳಿಗೂ ಆಮ್ಲಜನಕ ವ್ಯವಸ್ಥೆ ಮಾಡಲಾಗಿದೆ.

‘ಎಲ್ಲ ಹೆರಿಗೆ ಆಸ್ಪತ್ರೆಗಳಲ್ಲಿ ನುರಿತ ತಜ್ಞರು, ವೈದ್ಯರನ್ನು ನಿಯೋಜನೆ ಮಾಡಲಾಗಿದೆ. ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ ಕಾಲಕಾಲಕ್ಕೆ ಔಷಧಗಳನ್ನು ನೀಡಲಾಗುವುದು. ಗುಣಮುಖರಾದ ಬಳಿಕ ಮನೆಗೆ ಕಳುಹಿಸಲಾಗುವುದು’ ಎಂದು ಗೌರವ್ ಗುಪ್ತ ಹೇಳಿದರು.

ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್, ಪಶ್ಚಿಮ ವಲಯ ಆಯುಕ್ತ ಎಸ್‌. ಬಸವರಾಜ್, ಜಂಟಿ ಆಯುಕ್ತ ಸರ್ಫ್‌ರಾಜ್ ಖಾನ್, ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ. ವಿಜಯೇಂದ್ರ, ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ಡಾ. ನಿರ್ಮಲಾ ಬುಗ್ಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.