ADVERTISEMENT

ಬಿಬಿಎಂಪಿ ಕಾಯ್ದೆ| ಕೆರೆ ಕಾಲುವೆ ಸಂರಕ್ಷಣೆ- ಕಾಯ್ದೆಯಲ್ಲಿ ಹಲ್ಲಿಲ್ಲ!

ಬಿಬಿಎಂಪಿ ಕಾಯ್ದೆ– ಬಡಕಲು ಬಿಂಬ–2

ಪ್ರವೀಣ ಕುಮಾರ್ ಪಿ.ವಿ.
Published 12 ಫೆಬ್ರುವರಿ 2021, 19:58 IST
Last Updated 12 ಫೆಬ್ರುವರಿ 2021, 19:58 IST
   

ಬೆಂಗಳೂರು: ನಗರದ ಕೆರೆ ಕಟ್ಟೆ, ಕಾಲುವೆಗಳೂ ಸೇರಿದಂತೆ ಸಮಗ್ರ ಪರಿಸರ ಸಂರಕ್ಷಣೆ ಕುರಿತು ತೋರಿರುವ ಅನಾದರದಿಂದಾಗಿಯೇ ಬಿಬಿಎಂಪಿ ಅಧಿಕಾರಿಗಳು ಪದೇ ಪದೇ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲುವ ಪ್ರಮೇಯಗಳು ಪದೇ ಪದೇ ಸೃಷ್ಟಿಯಾಗಿವೆ. ಇವು ಮರುಕಳಿಸುವುದನ್ನು ತಡೆಯಲು ನಗರದಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಅಂಶಗಳನ್ನು ಬಿಬಿಎಂಪಿ ಕಾಯ್ದೆಯಲ್ಲೇ ವಿಸ್ತೃತವಾಗಿ ಅಳವಡಿಸಿಕೊಳ್ಳಬೇಕಿತ್ತು ಎನ್ನುತ್ತಾರೆ ನಗರ ಯೋಜನಾ ತಜ್ಞರು.

ಪರಿಸರ ಸಂರಕ್ಷಣೆಗಳಿಗೆ ಸಂಬಂಧಿ ಸಿದ ಅನೇಕ ಕಾಯ್ದೆಗಳು ಅಸ್ತಿತ್ವದಲ್ಲೇನೋ ಇವೆ. ಅವುಗಳ ಕಟ್ಟುನಿಟ್ಟಿನ ಅನುಷ್ಠಾನದಲ್ಲಿ ವಿಫಲವಾದ ಕಾರಣಕ್ಕೆ ಹಾಗೂ ಕೆರೆಗಳ ಮತ್ತು ರಾಜಕಾಲುವೆಗಳನ್ನು ಸಂರಕ್ಷಿಸುವಲ್ಲಿ ತೋರಿರುವ ಅಸಡ್ಡೆಗೆ ಬಿಬಿಎಂಪಿ ಅನೇಕ ಸಲ ಭಾರಿ ಬೆಲೆಯನ್ನೂ ತೆತ್ತಿದೆ.

ಪಾಲಿಕೆ ವ್ಯಾಪ್ತಿಯ ಕೆರೆಗಳ ಹಾಗೂ ರಾಜಕಾಲುವೆಗಳ ಒತ್ತುವರಿ ಮತ್ತು ಅವುಗಳ ಮೀಸಲು ಪ್ರದೇಶಗಳನ್ನು ಅನ್ಯ ಉದ್ದೇಶಗಳಿಗೆ ಬಳಸುವುದು ಅವ್ಯಾಹತವಾಗಿ ನಡೆಯುತ್ತಲೇ ಇವೆ. ನಗರ ಭವಿಷ್ಯದ ದೃಷ್ಟಿಯಿಂದ ಇವುಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ಹಾಗೂ ಹೈಕೋರ್ಟ್‌ ನೇಮಿಸಿದ ನ್ಯಾ.ಎನ್‌.ಕೆ.ಪಾಟೀಲ ಸಮಿತಿಯಂತಹ ಅನೇಕ ಸಮಿತಿಗಳು ವರದಿಗಳನ್ನು ನೀಡಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಜಲಮೂಲಗಳ ಸಂರಕ್ಷಣೆಗೆ ಇರುವ ಸಮಸ್ಯೆಗಳನ್ನು ಪತ್ತೆ ಹಚ್ಚಿ ಅವುಗಳನ್ನು ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಅನೇಕ ಶಿಫಾರಸುಗಳನ್ನು ಮಾಡಿವೆ. ಪಾಲಿಕೆ ಸಭೆಗಳಲ್ಲಿ, ವಿಧಾನಮಂಡಲ ಅಧಿವೇಶನ
ಗಳಲ್ಲಿ ಪದೇ ಪದೇ ಚರ್ಚೆಗಳಾಗುತ್ತವೆ. ಅಂತಹ ಪ್ರಮುಖ ಸಮಿತಿಗಳ ಶಿಫಾರಸುಗಳಲ್ಲಿದ್ದ ಪ್ರಮುಖ ಅಂಶಗಳನ್ನೇ ಕಾಯ್ದೆಯಲ್ಲಿ ಅಳವಡಿಸಿಕೊಳ್ಳದಿದ್ದರೆ ಹೇಗೆ ಎಂಬುದು ತಜ್ಞರ ಪ್ರಶ್ನೆ.

ADVERTISEMENT

ಬಿಬಿಎಂಪಿ ಆಡಳಿತ ಯಂತ್ರದ ವಿವಿಧ ಸ್ತರಗಳ ಅಧಿಕಾರಿಗಳಿಗೆ ಅ‌ವುಗಳ ಆಳವಾದ ಜ್ಞಾನ ಇರುವುದಿಲ್ಲ. ನಗರದ ಕೆರೆ ಕಟ್ಟೆಗಳು, ರಾಜಕಾಲುವೆಗಳ ಸಂರಕ್ಷಣೆಗೆ ಮಹತ್ವವಾದ ಅಂಶಗಳನ್ನು ಬಿಬಿಎಂಪಿ ಕಾಯ್ದೆಯಲ್ಲೇ ಅಳವಡಿಸುವುದಕ್ಕೆ ಸದವಕಾಶ ಒದಗಿ ಬಂದಿತ್ತು, ಅದನ್ನು ಬಳಸಿಕೊಳ್ಳುವಲ್ಲಿ ಈ ಕಾಯ್ದೆಯನ್ನು ರೂಪಿಸಿದವರು ವಿಫಲರಾಗಿದ್ದಾರೆ ಎನ್ನುತ್ತಾರೆ ಅವರು.

‘ಪರಿಸರ ಸಂರಕ್ಷಣೆಗಾಗಿ, ಕೆರೆ ಕಟ್ಟೆ, ರಾಜಕಾಲುವೆಗಳ ಮೀಸಲು ಪ್ರದೇಶಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳುವ ಸಲುವಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆರೇಳು ವರ್ಷಗಳಲ್ಲಿ ಅನೇಕ ನಿರ್ದೇಶನಗಳನ್ನು ನೀಡಿದೆ. ಇವುಗಳಿಗೆ ಪೂರಕವಾದ ಅಂಶಗಳನ್ನು ಕಾಯ್ದೆಯಲ್ಲೇ ಅಳವಡಿಸಿಕೊಂಡು ಪರಿಸರ ಸಂರಕ್ಷಣಾ ಕಾರ್ಯಕ್ಕೆ ಇನ್ನಷ್ಟು ಬಲತುಂಬುವ ಅಗತ್ಯವಿದೆ. ಕೆರೆ ಕಟ್ಟೆ, ರಾಜಕಾಲುವೆಗಳ ಮೀಸಲು ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಕಾಯ್ದೆಯೇ ಅಸ್ತ್ರವಾಗುವಂತಾಗಬೇಕು’ ಎಂದು ಸೆಂಟರ್‌ ಫಾರ್‌ ಅರ್ಬನ್‌ ಗವರ್ನನ್ಸ್‌ ಆ್ಯಂಡ್ ಪಾಲಿಸಿ ರಿಸರ್ಚ್‌ ಸಂಸ್ಥೆಯ ನಿರ್ದೇಶಕ ಸಿ.ಆರ್‌.ರವೀಂದ್ರ ಅಭಿಪ್ರಾಯಪಡುತ್ತಾರೆ.

‘ಕೇಂದ್ರ ಸರ್ಕಾರವು 1986ರ ಪರಿಸರ ಸಂರಕ್ಷಣಾ ಕಾಯ್ದೆಯ ಆಶಯ ಗಳಿಗೆ ಅನುಗುಣವಾಗಿ 2017ರಲ್ಲಿ ಜೌಗುಪ್ರದೇಶ ಸಂರಕ್ಷಣೆ ಮತ್ತು ನಿರ್ವಹಣೆ ನಿಯಮಗಳನ್ನು ರೂಪಿಸಿದೆ. ಅಂತಹ ಅಂಶಗಳನ್ನೇ ಬಿಬಿಎಂಪಿ ಕಾಯ್ದೆಯಲ್ಲೂ ಅಳವಡಿಸಿಕೊಳ್ಳುತ್ತಿದ್ದರೆ ಈ ನಿಯಮಗಳ ಅನುಷ್ಠಾನಕ್ಕೆ ಇನ್ನಷ್ಟು ಬಲ ಬರುತ್ತಿತ್ತು’ ಎಂದು ಅವರು ಉದಾಹರಣೆ ನೀಡಿದರು.

ಪರಿಸರ ಮೂಲಸೌಕರ್ಯ ಯೋಜನೆಯ ಕೊರತೆ: ‘ಪರಿಸರ ಸಂರಕ್ಷಣೆಗೆ ಬಿಬಿಎಂಪಿ ಕೈಗೊಳ್ಳಬೇಕಾದ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನಗಳನ್ನು ಕಾಯ್ದೆಯಲ್ಲೇ ಅಳವಡಿಸಿದ್ದರೆ ಇನ್ನಷ್ಟು ಬಲ ಬರುತ್ತದೆ. ಇಂತಹ ಯೋಜನಾ ಘಟಕಗಳ ಮೀಸಲು ಪ್ರದೇಶಗಳ ನಿರ್ವಹಣೆ ಹಾಗೂ ಈ ಘಟಕಗಳ ಕಾರ್ಯನಿರ್ವಹಣೆಯಿಂದ ಪರಿಸರದ ಮೇಲಾಗುವ ಪರಿಣಾಮ ಕಡಿಮೆ ಮಾಡಲು ಇದರಿಂದ ಸಹಾಯ ವಾಗುತ್ತದೆ’ ಎನ್ನುತ್ತಾರೆ ಸಂಸ್ಥೆಯ ಇನ್ನೊಬ್ಬ ನಿರ್ದೇಶಕ ಪಿ.ಜಿ.ಶೆಣೈ.

‘ಎಲ್ಲ ಬಹು ಅಂತಸ್ತು ಕಟ್ಟಡ ಯೋಜನೆಗಳು ಸುತ್ತಮುತ್ತಲ ಪರಿಸರದೊಂದಿಗೆ ಹೊಂದಿಕೊಂಡು ರೂಪುಗೊಳ್ಳಬೇಕು. ಇವುಗಳಿಂದ ಪರಿಸರದ ಮೇಲಾಗುವ ಪ್ರತಿಕೂಲ ಪರಿಣಾಮಗಳ ನಿಯಂತ್ರಣಕ್ಕೆ ಪರಿಸರ ನಿರ್ವಹಣಾ ಯೋಜನೆಯನ್ನು ಹಾಗೂ ನಿಯಂತ್ರಣ ನಿಯಮಾವಳಿಗಳನ್ನು ಡೆವಲಪರ್‌ಗಳು ಕಡ್ಡಾಯವಾಗಿ ಜಾರಿಗೊಳಿಸುವ ಬದ್ಧತೆಯನ್ನು ಕಾಯ್ದೆಯಲ್ಲೇ ಸ್ಪಷ್ಟಪಡಿಸಬೇಕು. ಇದಕ್ಕೆ ಪೂರಕವಾದ ಬೈಲಾ ರೂಪಿಸಲು ಚೌಕಟ್ಟುಗಳನ್ನು ಹಾಕಿಕೊಳ್ಳಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.