ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ನಾಲ್ಕು ವಲಯಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ಶುಕ್ರವಾರ ನಡೆಸಲಾಯಿತು.
ಪೂರ್ವ ವಲಯದಲ್ಲಿ ಆಯಾ ವಿಭಾಗಗಳ ಕಾರ್ಯಪಾಲಕ ಎಂಜಿನಿಯರ್ ನೇತೃತ್ವದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಪವರ್ ವಾಶರ್ ಬಳಸಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಪೇಂಟಿಂಗ್‌ನಿಂದ ಕಾಂಪೌಂಡ್‌ಗಳನ್ನು ಸೌಂದರೀಕರಿಸಲಾಯಿತು.
ಹೆಬ್ಬಾಳ ವಿಭಾಗದಲ್ಲಿ ಆರ್.ಟಿ ನಗರದ ಅಂಚೆ ಕಚೇರಿಯಿಂದ ಬಸ್ ನಿಲುಗಡೆ ಸ್ಥಳದವರೆಗೆ, ಪುಲಕೇಶಿನಗರ ವಿಭಾಗದ ವಾರ್ಡ್ 61ರ ಎಸ್.ಕೆ. ಗಾರ್ಡನ್ ರಸ್ತೆಯಲ್ಲಿ, ಶಿವಾಜಿನಗರ ವಿಭಾಗದಲ್ಲಿ ಎಚ್‌ಕೆಪಿ ರಸ್ತೆಯಲ್ಲಿ, ಸರ್ವಜ್ಞ ನಗರ ವಿಭಾಗದಲ್ಲಿ ಬಾಣಸವಾಡಿ ಮುಖ್ಯ ರಸ್ತೆಯ ಸಿಂಧೂರ್ ಹೋಟೆಲ್‌ನಿಂದ ವೇಮಣ್ಣ ರಸ್ತೆಯವರೆಗೆ, ಶಾಂತಿನಗರ ವಿಭಾಗದ ವಾರ್ಡ್ 112ರ ಪರಮಹಂಸ ಯೋಗಾನಂದ ರಸ್ತೆಯಲ್ಲಿ ಪಾದಚಾರಿ ಪಥ ಒತ್ತುವರಿ ತೆರವು ಹಾಗೂ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಪಶ್ಚಿಮ ವಲಯದಲ್ಲಿ ರಾಜಾಜಿನಗರ ವಿಭಾಗದಲ್ಲಿ 1ನೇ ಮುಖ್ಯರಸ್ತೆ ಬಸವೇಶ್ವರ ನಗರ, ಮಹಾಲಕ್ಷ್ಮಿಪುರ ವಿಭಾಗದ ಪೈಪ್‌ಲೈನ್ ರಸ್ತೆ ಹಾಗೂ ವಾರ್ಡ್ 49ರ ನಾಗಾಪುರ, ಚಾಮರಾಜ ಪೇಟೆ ವಿಭಾಗದ ವಾರ್ಡ್ 138ರ ಚಲವಾದಿಪಾಳ್ಯದಲ್ಲಿ, ಗಾಂಧಿನಗರ ವಿಭಾಗದ ಚಿಕ್ಕಪೇಟೆಯ ಪಾರ್ಕ್ ರಸ್ತೆ, ಗೋವಿಂದರಾಜನಗರ ವಿಭಾಗದ ವಾರ್ಡ್ 139 ಮೂಡಲಪಾಳ್ಯ ಚಂದ್ರ ಲೇಔಟ್‌ನಲ್ಲಿ ಸ್ವಚ್ಛತೆ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡಲಾಯಿತು.
ರಾಜರಾಜೇಶ್ವರಿ ನಗರ ವಲಯದಲ್ಲಿ ರಾಜರಾಜೇಶ್ವರಿ ವಿಭಾಗದ ಕೆಂಪೇಗೌಡ ಡಬಲ್ ರಸ್ತೆ, ರಾಜರಾಜೇಶ್ವರಿನಗರ ಕೆಂಪೇಗೌಡ ವೃತ್ತದಿಂದ ಕನಕದಾಸ ವೃತ್ತದವರೆಗೆ ಹಾಗೂ ಕೆಂಗೇರಿ ವಿಭಾಗದ ಕೆಂಗೇರಿ ಉಪನಗರದ 1ನೇ ‘ಡಿ’ ಮುಖ್ಯರಸ್ತೆಯಿಂದ (ಹೊಯ್ಸಳ ವೃತ್ತದ ಹತ್ತಿರ) 8ನೇ ಅಡ್ಡರಸ್ತೆ, 1ನೇ ‘ಡಿ’ ಮುಖ್ಯರಸ್ತೆ (ಫುಡ್ ಪ್ಯಾಲೇಸ್ ) ಪಾದಚಾರಿ ಒತ್ತುವರಿಯನ್ನು ತೆರವು ಮಾಡಲಾಯಿತು. ಹಲವು ಅಂಗಡಿಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದು, 25 ಪ್ರಕರಣಗಳಿಂದ ಒಟ್ಟಾರೆಯಾಗಿ ₹58 ಸಾವಿರ ದಂಡ ವಸೂಲಿ ಮಾಡಲಾಯಿತು.
ದಾಸರಹಳ್ಳಿ ವಲಯದಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ಹೆಗ್ಗನಹಳ್ಳಿ ಉಪವಿಭಾಗದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.