
ಬೆಂಗಳೂರು: ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್ ಏಜೆನ್ಸಿ ವಾಹನ ಅಡ್ಡಗಟ್ಟಿ ₹7.11 ಕೋಟಿ ದರೋಡೆ ಮಾಡಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಮಹಿಳೆ ಸೇರಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶಂಕಿತರ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.
ಹಣ ಸಾಗಣೆಗೆ ಬಳಕೆ ಮಾಡಿದ್ದ ಇನ್ನೊವಾ ಕಾರನ್ನು ತಿರುಪತಿಯಲ್ಲಿ ಜಪ್ತಿ ಮಾಡಲಾಗಿದೆ. ಆದರೆ, ಕಾರಿನಲ್ಲಿ ಹಣ ಸಿಕ್ಕಿಲ್ಲ. ಉಳಿದ ಆರೋಪಿಗಳು ಹಣದ ಜತೆಗೆ ಪರಾರಿ ಆಗಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಕರಣದ ತನಿಖೆಗೆ ಸಿಸಿಬಿ ಹಾಗೂ ದಕ್ಷಿಣ ಉಪ ವಿಭಾಗದ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿದ್ದು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಪ್ರಕರಣದ ತನಿಖೆ ತೀವ್ರಗೊಂಡಿದೆ.
‘ಸಿಎಂಎಸ್ ಏಜೆನ್ಸಿಯ ವಾಹನದಲ್ಲಿದ್ದ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದಾಗ ದರೋಡೆಕೋರರು ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂಬುದಾಗಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಆಧರಿಸಿ ಆಂಧ್ರಪ್ರದೇಶದಲ್ಲಿ ಗುರುವಾರ ಕಾರ್ಯಾಚರಣೆ ನಡೆಸಲಾಯಿತು. ವಶಕ್ಕೆ ಪಡೆದವರ ಪೈಕಿ, ಇಬ್ಬರು ಬೆಂಗಳೂರಿನ ಕಲ್ಯಾಣನಗರದವರು ಎಂಬುದು ಗೊತ್ತಾಗಿದೆ. ಇವರ ಹಿಂದೆ ದೊಡ್ಡ ತಂಡವಿರುವ ಶಂಕೆಯಿದ್ದು ಚಿತ್ತೂರು ಪೊಲೀಸರ ನೆರವು ಪಡೆದು ಪ್ರಕರಣದ ಸೂತ್ರಧಾರ ಸೇರಿ ಉಳಿದವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಹಲವು ಲಾಡ್ಜ್‌ಗಳನ್ನು ಪರಿಶೀಲನೆ ನಡೆಸಲಾಗಿದೆ’ ಎಂದು ಮೂಲಗಳು ಹೇಳಿವೆ.
‘ಡೇರಿ ವೃತ್ತದ ಮೇಲ್ಸೇತುವೆ ವಾಹನ ಕರೆದೊಯ್ದು, ಇನ್ನೊವಾ ಕಾರಿಗೆ ಹಣವನ್ನು ತುಂಬಿಸಿಕೊಂಡಿದ್ದರು. ಬಳಿಕ ಮಾರ್ಗದ ಮಧ್ಯೆ ಸಿಎಂಎಸ್ ಸಿಬ್ಬಂದಿ ಕೆಳಗೆ ಇಳಿಸಿ ಹೊಸಕೋಟೆ ಮಾರ್ಗವಾಗಿ ತೆರಳಿರುವುದು ಪತ್ತೆಯಾಗಿದೆ. ಮಾರ್ಗ ಮಧ್ಯೆ ವ್ಯಾಗನರ್ ಹಾಗೂ ಜೆನ್ ಕಾರಿಗೆ ಹಣ ತುಂಬಿಸಿಕೊಂಡು ಹೋಗಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಕಾರು ತೆರಳಿರುವ ಮಾರ್ಗದಲ್ಲಿರುವ 100 ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾದ ಒಂದು ಸಾವಿರಕ್ಕೂ ಹೆಚ್ಚು ದೃಶ್ಯಾವಳಿ ಪರಿಶೀಲನೆ ನಡೆಸಲಾಗಿದೆ. ಬೆಂಗಳೂರಿನ ಕಲ್ಯಾಣ ನಗರ ಸುತ್ತಮುತ್ತಲಿನ ತಂಡವೇ ದರೋಡೆ ನಡೆಸಿರುವುದು ಇದುವರೆಗೂ ನಡೆದ ತನಿಖೆಯಿಂದ ಗೊತ್ತಾಗಿದೆ. ಹೊರ ರಾಜ್ಯದ ಕೆಲವರು ಶಾಮೀಲಾಗಿರುವ ಸುಳಿವು ಸಹ ಸಿಕ್ಕಿದೆ. ಸಿಎಂಎಸ್ ವಾಹನ ಚಾಲಕ ಹಾಗೂ ಭದ್ರತಾ ಸಿಬ್ಬಂದಿಯ ಪಾತ್ರದ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಮತ್ತೆ ನಂಬರ್ ಪ್ಲೇಟ್ ಬದಲಾವಣೆ: ಬೆಂಗಳೂರಿನಲ್ಲಿ ಸಂಚರಿಸುವಾಗ ಸ್ವಿಫ್ಟ್ ಕಾರಿನ ನಕಲಿ ನಂಬರ್ ಪ್ಲೇಟ್ ಬಳಸಿದ್ದ ದರೋಡೆಕೋರರು, ಕರ್ನಾಟಕದ ಗಡಿ ದಾಟುತ್ತಿದ್ದಂತೆ ಇನ್ನೊವಾಗೆ ಉತ್ತರಪ್ರದೇಶದ ನೋಂದಣಿಯ ನಂಬರ್ ಪ್ಲೇಟ್ ಅಳವಡಿಸಿದ್ದರು.
ದರೋಡೆಗೆ ವೆಬ್ ಸರಣಿ ಪ್ರೇರಣೆ?:
ದರೋಡೆಗೆ ಸಂಬಂಧಿಸಿದ ವೆಬ್ ಸರಣಿಗಳನ್ನು ವೀಕ್ಷಿಸಿ ಪ್ರೇರಣೆ ಪಡೆದು ₹7.11 ಕೋಟಿ ದೋಚಿರುವ ಬಗ್ಗೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ.
ಒಟಿಟಿ ಹಾಗೂ ಯೂ–ಟ್ಯೂಬ್‌ನಲ್ಲಿ ಹಣ ಕಳವಿಗೆ ಸಂಬಂಧಿಸಿದ ವಿಡಿಯೊಗಳನ್ನು ಗಮನಿಸಿ ಆರೋಪಿಗಳು ಯೋಜನೆ ರೂಪಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಜೈಲಿನಿಂದಲೇ ದರೋಡೆಗೆ ಸಂಚು ರೂಪಿಸಿರುವ ಬಗ್ಗೆ ಅನುಮಾನ ವ್ಯಕ್ತವಾದ ಕಾರಣ ತನಿಖಾ ತಂಡ ಪರಪ್ಪನ ಅಗ್ರಹಾರ ಜೈಲಿಗೂ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ದರೋಡೆ ತಂಡ ಹಾಗೂ ಜೈಲಿನಲ್ಲಿರುವ ಆರೋಪಿಗಳಿಗೂ ಸಂಪರ್ಕ ಇದೆಯೇ ಎಂಬ ಆಯಾಮದಲ್ಲಿ ವಿಚಾರಣೆ ನಡೆದಿದೆ.
ಪ್ರಕರಣ ಸಂಬಂಧ ಈವರೆಗೂ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬ್ಯಾಂಕ್ ಮತ್ತು ಸಿಎಂಎಸ್ ಸಿಬ್ಬಂದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಬೈಕ್‌ನಲ್ಲಿದ್ದವರು ಯಾರು?
ಜೆ.ಪಿ. ನಗರದ ಸಾರಕ್ಕಿ ಮುಖ್ಯರಸ್ತೆಯ ಐಟಿಐ ಲೇಔಟ್‌ನಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಕರೆನ್ಸಿ ಚೆಸ್ಟ್‌ನಲ್ಲಿ ನಗದು ತುಂಬಿಸಿಕೊಂಡು ಸಿಎಂಎಸ್ ಏಜೆನ್ಸಿ ವಾಹನ ಹೊರಟಿತ್ತು. ಅಲ್ಲಿಗೆ ಇನ್ನೊವಾ ಬಂದಿರುವುದು ಕಂಡುಬಂದಿಲ್ಲ. ಆದರೆ ಬೈಕ್‌ನಲ್ಲಿ ನಾಲ್ವರು ಬಂದು ಅನುಮಾನಾಸ್ಪದವಾಗಿ ಓಡಾಟ ನಡೆಸಿರುವುದು ಪತ್ತೆಯಾಗಿದೆ. ಬೈಕ್‌ನಲ್ಲಿ ಬಂದಿದ್ದವರು ನೀಡಿದ ಮಾಹಿತಿ ಆಧರಿಸಿ ದರೋಡೆಕೋರರು ಇನ್ನೊವಾದಲ್ಲಿ ಹಣ ತುಂಬಿದ ವಾಹನ ಹಿಂಬಾಲಿಸಿದ್ದಾರೆ ಎಂಬುದು ತನಿಖೆಯಿಂದ ಪತ್ತೆಯಾಗಿದೆ.
ಹಣ ತುಂಬಿಸಿಕೊಂಡ ಅರ್ಧಗಂಟೆಯಲ್ಲಿ ದರೋಡೆ
ಜೆ.ಪಿ. ನಗರದ ಸಾರಕ್ಕಿ ಮುಖ್ಯರಸ್ತೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಕರೆನ್ಸಿ ಕೇಂದ್ರದಿಂದ ₹7.11 ಕೋಟಿ ಹಣ ತುಂಬಿಸಿಕೊಂಡು ನಗರದ ವಿವಿಧ ಎಟಿಎಂಗಳಿಗೆ ಹಾಕಲು ಬುಧವಾರ ಬೆಳಿಗ್ಗೆ 11.54ಕ್ಕೆ ವಾಹನ ಹೊರಟಿತ್ತು. ವಾಹನವನ್ನು ಮಧ್ಯಾಹ್ನ 12.21ರ ಸುಮಾರಿಗೆ ಅಶೋಕ ಪಿಲ್ಲರ್ ಬಳಿ ದರೋಡೆಕೋರರು ತಡೆದಿದ್ದರು. ಮಧ್ಯಾಹ್ನ 12.36ಕ್ಕೆ ಡೇರಿ ವೃತ್ತದ ಮೇಲ್ಸೇತುವೆಗೆ ಕೊಂಡೊಯ್ದು ವಾಹನ ನಿಲ್ಲಿಸಿ ಹಣ ದೋಚಿ ಪರಾರಿ ಆಗಿದ್ದರು. ಈ ಸಂಬಂಧ ಸಿಎಂಎಸ್ ಏಜೆನ್ಸಿ ವ್ಯವಸ್ಥಾಪಕ ವಿನೋದ್ ಚಂದ್ರಾಧರ್ ಅವರು ನೀಡಿದ ದೂರಿನ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆಕೋರರ ಸಂಚು ಹೇಗಿತ್ತು?
* ಸಿಎಂಎಸ್ ಏಜೆನ್ಸಿ ವಾಹನದಲ್ಲಿದ್ದ ನಾಲ್ವರ ಮೊಬೈಲ್ ಕಸಿದುಕೊಂಡಿದ್ದ ಆರೋಪಿಗಳು
* ಚಾಲಕ ಬಿನೋದ್ ಕುಮಾರ್‌ಗೆ ಪಿಸ್ತೂಲ್ ತೋರಿಸಿ ಕೃತ್ಯ
* ಇನ್ನೊವಾ ಕಾರಿನಲ್ಲೇ ಸಿಎಂಎಸ್ ಸಿಬ್ಬಂದಿ ಕರೆದೊಯ್ದು ಬೇರೆ ಬೇರೆ ಸ್ಥಳಗಳಲ್ಲಿ ಇಳಿಸಿ ಹೋಗಿದ್ದಾರೆ
* ಸಿ.ಸಿ.ಟಿ.ವಿ ಕ್ಯಾಮೆರಾಗಳಿಲ್ಲದ ಸ್ಥಳಗಳನ್ನು ಗುರುತಿಸಿ ಕೃತ್ಯ
* ನ.17ರಿಂದಲೂ ಹಣ ತುಂಬಿದ ವಾಹನ ಸಾಗುವ ರಸ್ತೆಯಲ್ಲಿ ಸಂಚರಿಸಿ ಸಂಚು ರೂಪಿಸಿರುವ ಶಂಕೆ
* ಸಿದ್ದಾಪುರ ರಸ್ತೆಯಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸಿಎಂಎಸ್ ವಾಹನದ ಹಿಂದೆಯೇ ಇನ್ನೊವಾ ಸಾಗುತ್ತಿರುವ ದೃಶ್ಯ ಸೆರೆ
‘ನನ್ನ ಕಾರಿನ ನಂಬರ್ ಯಾಕೆ ಬಳಸಿದ್ರು ಗೊತ್ತಿಲ್ಲ’
ಇಂದಿರಾನಗರದ ಗಂಗಾಧರ್ ಅವರ ಮಾರುತಿ ಸ್ವಿಫ್ಟ್ ಕಾರಿನ ನೋಂದಣಿ ಸಂಖ್ಯೆಯನ್ನು ಹಣ ದರೋಡೆಗೆ ಬಳಸಿದ್ದ ಇನ್ನೊವಾ ಕಾರಿಗೆ ದರೋಡೆಕೋರರು ಬಳಸಿರುವುದು ಗೊತ್ತಾಗಿದೆ. ‘ನನಗೆ ವಯಸ್ಸಾದ ಕಾರಣ ಕಾರನ್ನು ಹೆಚ್ಚಾಗಿ ಬಳಸುವುದಿಲ್ಲ. ಸಂಚಾರ ವಿಭಾಗದ ಇನ್‌ಸ್ಪೆಕ್ಟರ್ ಮನೆಗೆ ಬಂದು ನಿಮ್ಮ ಕಾರಿನ ನಂಬರ್ ಪ್ಲೇಟ್ ದುರುಪಯೋಗವಾಗಿದೆ ಎಂದಷ್ಟೇ ಹೇಳಿದರು. ಟಿ.ವಿ. ನೋಡಿದಾಗಲೇ ನಿಜ ಸಂಗತಿ ಗೊತ್ತಾಯಿತು’ ಎಂದು ಗಂಗಾಧರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.