ADVERTISEMENT

ಬೆಂಗಳೂರು ಬಂದ್ ನಾಳೆ: ಏನಿರುತ್ತೆ ? ಏನಿರಲ್ಲ ? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2023, 6:21 IST
Last Updated 25 ಸೆಪ್ಟೆಂಬರ್ 2023, 6:21 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೋರಾಟದ ಕಾವು ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದೆ.

ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನಾಳೆ (ಮಂಗಳವಾರ) ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು 90ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಘೋಷಿಸಿವೆ. ಅಂದೇ ರಾಮನಗರ ಜಿಲ್ಲೆ ಹಾಗೂ ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ ತಾಲ್ಲೂಕಿನಲ್ಲೂ ಬಂದ್‌ ನಡೆಸಲು ಸ್ಥಳೀಯ ಸಂಘಟನೆಗಳು ನಿರ್ಧರಿಸಿವೆ.

ADVERTISEMENT

ಬೆಂಗಳೂರಿನಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರ ತನಕ ಬಂದ್‌ ನಡೆಸಲು ಭಾನುವಾರ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ.

‘ಕೆಲವು ಸಂಘಟನೆಗಳು ಮಂಗಳವಾರ ಕರೆ ನೀಡಿರುವ ಬಂದ್ ವಾಪಸ್‌ ಪಡೆಯುವಂತೆ ಕೋರಿದ್ದವು. ನಾಡಿನ ಜನರು, ರೈತರ ಹಿತದೃಷ್ಟಿಯಿಂದ ಬಂದ್‌ಗೆ ಕರೆ ನೀಡಲಾಗಿದ್ದು ಬಂದ್‌ ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ. ಬಂದ್‌ ಯಶಸ್ವಿಗೊಳಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ರೈತರು ನೋವು ತಿಳಿಸುತ್ತೇವೆ’ ಎಂದು ಹೋರಾಟಗಾರರು ಹೇಳಿದ್ದಾರೆ.

ಬೆಳಿಗ್ಗೆ 11ಕ್ಕೆ ಬೆಂಗಳೂರಿನ ಪುರಭವನದಿಂದ ಪ್ರತಿಭಟನಾ ರ್‍ಯಾಲಿ ಆರಂಭವಾಗಲಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು, ಕನ್ನಡ ಸಂಘಟನೆಗಳ ಮುಖಂಡರು, ರೈತರು, ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು, ಬಿಬಿಎಂಪಿ ಕಾರ್ಮಿಕರು, ಕೆಎಸ್‌ಆರ್‌ಟಿಸಿ ಕನ್ನಡ ಕಾರ್ಮಿಕರ ಸಂಘ, ಓಲಾ–ಊಬರ್‌ ಚಾಲಕರ ಸಂಘ, ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ಕರ್ನಾಟಕ ಮರಾಠ ಮಂಡಳ, ರಾಜ್ಯ ಕಾರ್ಮಿಕ ಪರಿಷತ್‌ನ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಬಿಎಂಟಿಸಿ ಬಸ್‌ಗಳನ್ನು ರಸ್ತೆಗಿಳಿಸದಂತೆ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಫೆಡರೇಷನ್‌ ಕರೆ ನೀಡಿದ್ದು ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಆಟೊ, ಕ್ಯಾಬ್‌ ಸಂಚಾರ ಇರುವುದಿಲ್ಲ. ಕರ್ನಾಟಕ ಟೆಲಿವಿಷನ್ ಕಲಾವಿದರ ಸಂಘ ಚಿತ್ರೀಕರಣ ಬಂದ್ ಮಾಡಲು ತೀರ್ಮಾನಿಸಿದೆ.

ಏನಿರುತ್ತೆ...

* ಮೆಟ್ರೊ

* ಕೆಲವು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌

* ಆಸ್ಪತ್ರೆ, ಔಷಧದ ಅಂಗಡಿಗಳು, ಆಂಬುಲೆನ್ಸ್

* ಹಾಲು–ತರಕಾರಿ ಮಾರಾಟ

* ದಿನಪತ್ರಿಕೆಗಳು

**************

ಏನಿರುವುದಿಲ್ಲ...

* ಊಬರ್ – ಓಲಾ ಕ್ಯಾಬ್‌

* ಆಟೊರಿಕ್ಷಾ

* ಖಾಸಗಿ ಸಾರಿಗೆ

* ಚಿತ್ರಮಂದಿರ

* ಯಶವಂತಪುರ ಎಪಿಎಂಸಿ ಮಾರುಕಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.