ADVERTISEMENT

ಬೇಸಿಗೆ ಬಂದರೂ ಆರಂಭ ಆಗದ ಕೊಳವೆ ಬಾವಿ ದುರಸ್ತಿ: ಜಲಮಂಡಳಿ ವಿಳಂಬ ನೀತಿಗೆ ಅಸಮಾಧಾನ

ಉಮೇಶ ಭಟ್ಟ ಪಿ.ಎಚ್.
Published 22 ಫೆಬ್ರುವರಿ 2026, 23:38 IST
Last Updated 22 ಫೆಬ್ರುವರಿ 2026, 23:38 IST
ಬೆಂಗಳೂರು ಜಲಮಂಡಳಿ ಲೋಗೋ
ಬೆಂಗಳೂರು ಜಲಮಂಡಳಿ ಲೋಗೋ   

ಬೆಂಗಳೂರು: ಬೇಸಿಗೆ ಶುರುವಾಗುತ್ತಿದ್ದು ಕೆಲವು ಭಾಗಗಳಲ್ಲಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಕೊಳವೆಬಾವಿಗಳ ದುರಸ್ತಿಗೆ ಮುಂದಾಗಿಲ್ಲ ಎನ್ನುವ ಅಸಮಾಧಾನ ವ್ಯಕ್ತವಾಗಿದೆ.

ಕಾವೇರಿ 5ನೇ ಹಂತದ ಯೋಜನೆ ಜಾರಿಯಾದ ನಂತರ ನಗರಕ್ಕೆ ಸರಬರಾಜು ಆಗುವ ನೀರಿನ ಪ್ರಮಾಣ ಹೆಚ್ಚಾಗಿದೆ. ಆದರೂ ಕೊಳವೆಬಾವಿಗಳ ಮೇಲಿನ ಅವಲಂಬನೆ ತಗ್ಗಿಲ್ಲ. ಮಳೆಗಾಲದಲ್ಲಿ ಅಂತರ್ಜಲ ಮಟ್ಟ ವೃದ್ದಿಯಾಗಲಿದ್ದು ಆ ನಂತರ ನಾಲ್ಕೈದು ತಿಂಗಳು ಕೊಳವೆಬಾವಿಗಳ ನೀರಿನ ಅಗತ್ಯ ಬೀಳುವುದಿಲ್ಲ. ಆದರೆ, ಬೇಸಿಗೆ ಬಂದಾಗ ಕೊಳವೆಬಾವಿಗಳ ನೀರಿನ ಮೇಲೆ ಅವಲಂಬನೆ ಆಗುವವರ ಸಂಖ್ಯೆ ಅಧಿಕವಾಗಿದೆ.

ನಗರದ ಹಳೆಯ ಪ್ರದೇಶಗಳೂ ಸೇರಿದಂತೆ ಕೆಲವು ಭಾಗಗಳಲ್ಲಿ ಬೇಸಿಗೆ ವೇಳೆ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈಗಿನಿಂದಲೇ ಕೊಳವೆ ಬಾವಿಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವ ಚಟುವಟಿಕೆ ಆರಂಭಿಸಬೇಕು. ಬೇಸಿಗೆಗೂ ಮುನ್ನವೇ ಆಗಬೇಕಾಗಿದ್ದ ದುರಸ್ತಿ ಕಾರ್ಯಗಳ ವಿಳಂಬದಿಂದ ತೊಂದರೆಯಾಗಬಹುದು ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ನಗರದಲ್ಲಿ 15,761 ಸಾರ್ವಜನಿಕ ಕೊಳವೆ ಬಾವಿಗಳಿದ್ದು, ಇದರಲ್ಲಿ 14,940 ನಿರ್ವಹಣೆಯಲ್ಲಿವೆ. ಇವುಗಳಲ್ಲಿ ಬೇಸಿಗೆ ವೇಳೆ 3,000 ಕೊಳವೆಬಾವಿಗಳು ಸಂಪೂರ್ಣ ಬತ್ತುತ್ತವೆ. ಶೇಕಡ 50ರಷ್ಟರಲ್ಲಿ ಮಾತ್ರ ಅಂತರ್ಜಲದ ಕಾರಣದಿಂದ ನೀರಿನ ಲಭ್ಯತೆ ಇರಲಿದೆ. 

ಜಲಮಂಡಳಿ ಇವುಗಳ ನಿರ್ವಹಣೆಯ ಮೇಲುಸ್ತುವಾರಿ ವಹಿಸುತ್ತದೆ. ಮಳೆಗಾಲದಲ್ಲಿ ಇವುಗಳ ಅಗತ್ಯತೆ ಹೆಚ್ಚು ಬರುವುದಿಲ್ಲ. ಬೇಸಿಗೆ ವೇಳೆ ಕೊಳವೆಬಾವಿಗಳಿಂದಲೇ ಸುಮಾರು 500 ಎಂಎಲ್‌ಡಿ ನೀರನ್ನು ಪಡೆದು ಸರಬರಾಜು ಮಾಡಲಾಗುತ್ತದೆ.

ಖಾಸಗಿ ವ್ಯಾಪ್ತಿಯಲ್ಲಿ 4 ಲಕ್ಷಕ್ಕೂ ಅಧಿಕ ಕೊಳವೆಬಾವಿಗಳಿದ್ದು, ಅಗತ್ಯ ಬಿದ್ದಾಗ ಈ ಕೊಳವೆಬಾವಿಗಳಿಂದಲೂ 950 ಎಂಎಲ್‌ಡಿ ನೀರನ್ನು ಹಿಂದಿನ ವರ್ಷಗಳಲ್ಲಿ ಬಳಸಲಾಗಿದೆ. 2025ರಲ್ಲಿ ಉತ್ತಮ ಮಳೆಯಾಗಿದ್ದರಿಂದ ಕೊಳವೆಬಾವಿ ನೀರಿಗೆ ಹೆಚ್ಚಿನ ಬೇಡಿಕೆ  ಇರಲಿಲ್ಲ. ಈ ವರ್ಷ ಎಷ್ಟು ಬೇಕಾಗಬಹುದು ಎನ್ನುವ ಅಂದಾಜು ಮಾಡಲಾಗುತ್ತಿದೆ.

‘ಜಲಮಂಡಳಿ ವ್ಯಾಪ್ತಿಯಲ್ಲಿ ಕೊಳವೆಬಾವಿಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ದುರಸ್ತಿಯೂ ನಿಯಮಿತವಾಗಿ ಆಗಬೇಕು. ಬೇಸಿಗೆ ವೇಳೆಯಲ್ಲಿ ಮಾತ್ರ ಇತ್ತ ಕಡೆ ಗಮನ ಹರಿಸಿ ಉಳಿದ ಎಂಟು ತಿಂಗಳು ಇವುಗಳನ್ನು ಮರೆಯುವುದೇ ಹೆಚ್ಚು. ಬೇಸಿಗೆ ಬಿಟ್ಟು ಉಳಿದ ಕಾಲದಲ್ಲೂ ಸಮಸ್ಯೆಯಾದರೆ ಕೊಳವೆಬಾವಿಯೇ ಆಸರೆ ಎನ್ನುವುದನ್ನು ಜಲಮಂಡಳಿ ಮರೆಯಬಾರದು’ ಎಂದು ಸಾರ್ವಜನಿಕರು ಹೇಳುತ್ತಾರೆ.

ಎರಡು ವರ್ಷದ ಹಿಂದೆ ದುರಸ್ತಿ: 

ಎರಡು ವರ್ಷದ ಹಿಂದೆ ಬೇಸಿಗೆಯಲ್ಲಿ ತೊಂದರೆ ಉಂಟಾಗಿದ್ದರಿಂದ, ಆಗ ಸಾರ್ವಜನಿಕ ಕೊಳವೆಬಾವಿಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡಲಾಗಿತ್ತು. ಇದರಲ್ಲಿ ಕೆಲವು ಹಾಳಾಗಿವೆ. ನಿರ್ವಹಣೆ ಇಲ್ಲದ ಕಾರಣ, ಕೆಲವೊಂದು ಬಳಕೆಯಾಗುತ್ತಿಲ್ಲ. 

‘ಹಾಳಾಗಿರುವ ಕೊಳವೆ ಬಾವಿಗಳ ಕುರಿತು ಆಗಾಗ ದೂರುಗಳು ಬರುತ್ತಿರುತ್ತವೆ. ಬೇಸಿಗೆ ವೇಳೆ ಬೇಡಿಕೆ ಬರುತ್ತಿರುವುದರಿಂದ ದುರಸ್ತಿ ಮಾಡಲಾಗುತ್ತದೆ. ಫೆಬ್ರುವರಿಯಲ್ಲಿ ಬೇಡಿಕೆ ಆಧರಿಸಿ ದುರಸ್ತಿ ಕೈಗೊಳ್ಳುತ್ತೇವೆ. ಮುಂದಿನ ವರ್ಷ ಸಾಮೂಹಿಕವಾಗಿ ದುರಸ್ತಿ ಮಾಡುವ ಯೋಜನೆ ಇದೆ’ ಎಂದು ಜಲಮಂಡಳಿಯ ಕೊಳವೆಬಾವಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಈ ಬಾರಿ ಕೊಳವೆಬಾವಿ ಕೊರೆಸಲು ಯಾವುದೇ ಅಡ್ಡಿಯಿಲ್ಲ. ಜಲಮಂಡಳಿಗೆ ಅರ್ಜಿ ನೀಡಬೇಕು. ಪೊಲೀಸ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆದ ನಂತರ ಕೊಳವೆ ಬಾವಿ ಕೊರೆಸಬಹುದು. ಈ ವರ್ಷ ನಿಷೇಧದ ಬಗ್ಗೆ ಯಾವುದೇ ಸೂಚನೆಯಿಲ್ಲ. ಮಾರ್ಚ್‌ನಲ್ಲಿ ನೀರಿನ ಬೇಡಿಕೆ ಆಧರಿಸಿ ನಿರ್ಧಾರ ಕೈಗೊಳ್ಳಬಹುದು’ ಎನ್ನುತ್ತವೆ ಜಲಮಂಡಳಿ ಮೂಲಗಳು.

ಬೆಂಗಳೂರಿನಲ್ಲಿ ಸಾರ್ವಜನಿಕ ಕೊಳವೆಬಾವಿ ದುರಸ್ತಿಗೆ ಒತ್ತಾಯ ಹೆಚ್ಚಿದೆ( ಸಾಂದರ್ಭಿಕ ಚಿತ್ರ)
ದೂರುಗಳ ಪ್ರಮಾಣ ಹೆಚ್ಚಳ
ಬೇಸಿಗೆಗೆ ಸಿದ್ದತೆ ಮಾಡಿಕೊಳ್ಳುವ ಮುನ್ನ ಹಿರಿಯ ಅಧಿಕಾರಿಗಳ ಹಂತದಲ್ಲಿ ಪೂರ್ವಭಾವಿ ತಯಾರಿ ಶುರುವಾಗಿದೆ. ಫೆಬ್ರುವರಿಯಿಂದ ಮೇ ಅಂತ್ಯದವರೆಗೂ ಬೇಸಿಗೆ ವಾತಾವರಣ ಇದ್ದರೂ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ನೀರಿನ ಬೇಡಿಕೆ ದೂರುಗಳ ಪ್ರಮಾಣವೂ ‌ಹೆಚ್ಚಿರಲಿದೆ. ಜಲಮಂಡಳಿ ವ್ಯಾಪ್ತಿಯ ಉಪ ವಿಭಾಗಗಳು ಹಾಗೂ ಸೇವಾ ಠಾಣೆಗಳ ವ್ಯಾಪ್ತಿಯಲ್ಲಿ ಹಿಂದಿನ ಬೇಸಿಗೆ ವೇಳೆ ಕೈಗೊಂಡ ಕ್ರಮಗಳು ಈ ಬಾರಿ ಸಮಸ್ಯೆ ಎದುರಾಗಬಹುದಾದ ಪ್ರದೇಶಗಳು ಇದನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಸಿದ್ದಪಡಿಸಲು ಸೂಚನೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.