ADVERTISEMENT

ಬೆಂಗಳೂರು | ತಗ್ಗದ ದಟ್ಟಣೆ: ಸವಾರರು ಹೈರಾಣ

ರೆಸಿಡೆನ್ಸಿ, ಜೆ.ಸಿ.ರಸ್ತೆಯಲ್ಲಿ ಪ್ರಯಾಣ ಪ್ರಯಾಸಕರ

ವರುಣ ಹೆಗಡೆ
Published 19 ಜನವರಿ 2026, 0:30 IST
Last Updated 19 ಜನವರಿ 2026, 0:30 IST
ರೆಸಿಡೆನ್ಸಿ ರಸ್ತೆಯಲ್ಲಿನ ಸಂಚಾರ ದಟ್ಟಣೆ
ಪ್ರಜಾವಾಣಿ ಚಿತ್ರಗಳು; ಪ್ರಶಾಂತ್ ಎಚ್.ಜಿ.
ರೆಸಿಡೆನ್ಸಿ ರಸ್ತೆಯಲ್ಲಿನ ಸಂಚಾರ ದಟ್ಟಣೆ ಪ್ರಜಾವಾಣಿ ಚಿತ್ರಗಳು; ಪ್ರಶಾಂತ್ ಎಚ್.ಜಿ.   

ಬೆಂಗಳೂರು: ನಗರದ ಪ್ರಮುಖ ಸಂಪರ್ಕ ಕೊಂಡಿಯಾದ ರೆಸಿಡೆನ್ಸಿ ರಸ್ತೆ ಹಾಗೂ ಜೆ.ಸಿ. ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಾಮಾನ್ಯವಾಗಿದ್ದು, ರಸ್ತೆಗಳ ಉದ್ದಕ್ಕೂ ವಾಹನಗಳನ್ನು ಪಾರ್ಕಿಂಗ್‌ ಮಾಡಲಾಗುತ್ತಿದೆ. ಇದರಿಂದ ದಟ್ಟಣೆ ಹೆಚ್ಚಿ, ವಾಹನ ಸವಾರರು ಹೈರಾಣಾಗುತ್ತಿದ್ದಾರೆ. 

ರೆಸಿಡೆನ್ಸಿ ರಸ್ತೆಯಲ್ಲಿ ದಿನದ ಬಹುತೇಕ ಎಲ್ಲ ಅವಧಿಯಲ್ಲಿ ದಟ್ಟಣೆಯ ಬಿಸಿ ತಟ್ಟುತ್ತಿದೆ. ಇದಕ್ಕೆ ಪ್ರಮುಖ ಕಾರಣ ರಸ್ತೆಯ ಅಕ್ಕಪಕ್ಕದಲ್ಲಿರುವ ಶಾಲಾ–ಕಾಲೇಜುಗಳ ವಾಹನಗಳು. ಬೆಳಿಗ್ಗೆ 7.30ರಿಂದ 11 ಗಂಟೆವರೆಗೆ, ಮಧ್ಯಾಹ್ನ 2ರಿಂದ 4 ಗಂಟೆಯವರೆಗೆ ಹಾಗೂ ಸಂಜೆ 6 ಗಂಟೆಯ ಬಳಿಕ ವಿಪರೀತ ದಟ್ಟಣೆ ಉಂಟಾಗುತ್ತಿದೆ. ಈ ವೇಳೆ ವಾಹನಗಳು ಆಮೆ ವೇಗದಲ್ಲಿ ಸಂಚರಿಸುತ್ತವೆ. 

ಮಿಷನ್ ರಸ್ತೆ, ಕೆಂಗಲ್ ಹನುಮಂತಯ್ಯ ರಸ್ತೆ (ಡಬಲ್ ರೋಡ್‌) ಹಾಗೂ ರಾಜಾರಾಮ್ ಮೋಹನ್ ರಾಯ್ ರಸ್ತೆಯಲ್ಲಿ ಬರುವ ವಾಹನಗಳು ರೆಸಿಡೆನ್ಸಿ ರಸ್ತೆಯನ್ನು ಸೇರಿಕೊಳ್ಳಲಿವೆ. ಇದರಿಂದ ಪ್ರತಿನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಜನಾರ್ದನ್ ಟವರ್ ಬಹುಮಹಡಿ ಕಟ್ಟಡ, ದಿ ಚಾನ್ಸೆರಿ ಪೆವಿಲಿಯನ್, ದಿ ರಿಟ್ಜ್ ಕಾರ್ಲ್‌ಟನ್ ಹೋಟೆಲ್‌, ಪ್ರೆಸ್ಟೀಜ್ ಡಾಟ್ ಕಾಮ್ ಬಹುಮಹಡಿ ಕಟ್ಟಡ ಸೇರಿ ಹಲವು ಪ್ರಮುಖ ಕಟ್ಟಡಗಳು ಈ ರಸ್ತೆಯಲ್ಲಿವೆ. ಹೀಗಾಗಿ ಶಾಲಾ–ಕಾಲೇಜುಗಳಿಗೆ ರಜೆ ಇರುವ ದಿನಗಳಲ್ಲಿಯೂ ಬೆಳಿಗ್ಗೆ ಮತ್ತು ಸಂಜೆ ಅವಧಿಯಲ್ಲಿ ದಟ್ಟಣೆ ಸಾಮಾನ್ಯವಾಗಿದೆ.

ADVERTISEMENT

‘ಪ್ರಜಾವಾಣಿ’ ಪ್ರತಿನಿಧಿಯು ಜೆ.ಸಿ.ರಸ್ತೆ, ಲಾಲ್‌ಬಾಗ್ ಮುಖ್ಯರಸ್ತೆ, ಕೆಂಗಲ್ ಹನುಮಂತಯ್ಯ ರಸ್ತೆ (ಡಬಲ್ ರೋಡ್), ಮಿಷನ್ ರಸ್ತೆ, ರೆಸಿಡೆನ್ಸಿ ರಸ್ತೆ ಜತೆಗೆ ಸುತ್ತಮುತ್ತಲಿನ ರಸ್ತೆಯಲ್ಲಿ ಸಾಗಿದಾಗ, ದಟ್ಟಣೆಯ ದರ್ಶನದ ಜತೆಗೆ ಆಮೆವೇಗದ ಸಂಚಾರ ಅನುಭವಕ್ಕೆ ಬಂದಿತು. ರೆಸಿಡೆನ್ಸಿ ರಸ್ತೆಯಲ್ಲಿ ಆಶೀರ್ವಾದಂ ಜಂಕ್ಷನ್‌ನಿಂದ ಬ್ರಿಗೇಡ್ ರಸ್ತೆಯ ಜಂಕ್ಷನ್‌ವರೆಗೆ ವೈಟ್‌ಟಾಪಿಂಗ್ ಕಾಮಗಾರಿ ನಡೆದಿದ್ದರೂ ಈ ರಸ್ತೆಯಲ್ಲಿ ದಟ್ಟಣೆ ನಿವಾರಣೆಯಾಗಿಲ್ಲ.  

ಸಮಸ್ಯೆಗಿಲ್ಲ ಪರಿಹಾರ: ರೆಸಿಡೆನ್ಸಿ ರಸ್ತೆಯ ಸುತ್ತಮುತ್ತ ಬಿಷಪ್ ಕಾಟನ್ ಬಾಲಕರ ಹಾಗೂ ಬಾಲಕಿಯರ ಶಾಲೆ, ನ್ಯಾಷನಲ್ ಪಬ್ಲಿಕ್ ಶಾಲೆ, ಸೇಂಟ್ ಜೋಸೆಫ್ ಇಂಡಿಯನ್ ಪ್ರೌಢಶಾಲೆ, ಬಾಲ್ಡ್‌ವಿನ್ ಇಂಟರ್‌ನ್ಯಾಷನಲ್ ಸೇರಿ ಸುಮಾರು 50 ಶಾಲಾ ಕಾಲೇಜುಗಳಿವೆ. ಇವು ಆರಂಭವಾಗುವ ಹಾಗೂ ಮುಗಿಯುವ ವೇಳೆ ರಸ್ತೆಯಲ್ಲೆ ಕಿಲೋ ಮೀಟರ್‌ಗಟ್ಟಲೆ ವಾಹನಗಳು ನಿಂತಲ್ಲೇ ನಿಂತಿರುತ್ತವೆ. ಆ ಅವಧಿಯಲ್ಲಿ ಪ್ರಯಾಣ ದುಸ್ತರವಾಗಿದೆ. ಸಂಚಾರ ದಟ್ಟಣೆ ಕಾರಣ ಕೆಲ ದ್ವಿಚಕ್ರ ವಾಹನ ಸವಾರರು ಪಾದಚಾರಿ ಮಾರ್ಗಗಳ ಮೇಲೆಯೂ ವಾಹನ ಓಡಿಸುತ್ತಾರೆ. 

‘ರೆಸಿಡೆನ್ಸಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರವೇ ಇಲ್ಲದಂತಾಗಿದೆ. ಶಾಲೆ ಆರಂಭ ಹಾಗೂ ಮುಗಿಯುವ ಸಮಯದಲ್ಲಿ ಸಾಕಷ್ಟು ದಟ್ಟಣೆ ಉಂಟಾಗುತ್ತಿದೆ. ಈ ಸಮಸ್ಯೆ ಹಲವು ವರ್ಷಗಳಿಂದ ಇದೆ. ಇದು ಬಗೆಹರಿಯದ ಸಮಸ್ಯೆಯಾಗಿದ್ದು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ದೂರುತ್ತಾರೆ ವಾಹನಸವಾರರು. 

‘ಹಳೆ ವಿಮಾನ ನಿಲ್ದಾಣ ರಸ್ತೆ, ವೈಟ್‌ಫೀಲ್ಡ್‌ ಸೇರಿ ವಿವಿಧೆಡೆ ತೆರಳಲು ರೆಸಿಡೆನ್ಸಿ ರಸ್ತೆಯನ್ನು ವಾಹನ ಸವಾರರು ಬಳಸುತ್ತಾರೆ. ಶಾಲೆಗಳ ವಾಹನಗಳು ಅಧಿಕ ಸಂಖ್ಯೆಯಲ್ಲಿ ಬರುತ್ತವೆ. ಕಚೇರಿ ಸೇರಿ ವಿವಿಧ ಕಾರ್ಯನಿಮಿತ್ತ ತೆರಳುವವರು ಕಾರುಗಳನ್ನು ಹೆಚ್ಚಾಗಿ ಬಳಸುತ್ತಿದ್ದು, ಸಾರ್ವಜನಿಕ ಸಾರಿಗೆ ಬಳಕೆ ಕಡಿಮೆಯಾಗಿದೆ. ಇದರಿಂದಾಗಿ ಸಹಜವಾಗಿ ದಟ್ಟಣೆ ಹೆಚ್ಚಿರುತ್ತದೆ. ವಾಹನ ಸವಾರರು ಸೂಕ್ತವಾಗಿ ನಮಗೆ ಸ್ಪಂದಿಸಿದಲ್ಲಿ ತಕ್ಕಮಟ್ಟಿಗೆ ದಟ್ಟಣೆ ನಿವಾರಣೆ ಸಾಧ್ಯ’ ಎನ್ನುತ್ತಾರೆ ಸಂಚಾರ ಪೊಲೀಸರು. 

ಜೆ.ಸಿ.ರಸ್ತೆಯಲ್ಲಿ ಬಿಡಿ ಭಾಗಗಳನ್ನು ಅಳವಡಿಸಿಕೊಳ್ಳಲು ನಿಂತಿರುವ ಕಾರುಗಳು

ಸುಗಮ ಸಂಚಾರಕ್ಕೆ ಅಡ್ಡಿ

ನಗರದ ಹೃದಯ ಭಾಗದಲ್ಲಿರುವ ಜೆ.ಸಿ. ರಸ್ತೆಗೆ ವೈಟ್‌ ಟಾಪಿಂಗ್‌ ಮಾಡಲಾಗಿದೆ. ಇದರಿಂದಾಗಿ ರಸ್ತೆಯ ಚಿತ್ರಣ ಬದಲಾಗಿದೆ. ಕಳೆದೊಂದು ವರ್ಷದಿಂದ ಈ ರಸ್ತೆಯ ಕಾಮಗಾರಿಯಿಂದ ವಾಹನ ಸವಾರರು ಹೈರಾಣಗೊಂಡಿದ್ದರು. ಈಗ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರೂ ದಟ್ಟಣೆ ನಿವಾರಣೆಯಾಗಿಲ್ಲ. ಇದಕ್ಕೆ ಕಾರಣ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ‌ ಪಾರ್ಕಿಂಗ್. ಮಿನರ್ವ ವೃತ್ತದಿಂದ ಭಾರತ್ ಜಂಕ್ಷನ್‌ವರಗೆ ಎಡಭಾಗದಲ್ಲಿ ವಾಹನಗಳ ಬಿಡಿ ಭಾಗದ ಮಳಿಗೆಗಳಿದ್ದು ಕಾರುಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಎಲ್ಲ ರೀತಿಯ ಬಿಡಿ ಭಾಗಗಳನ್ನು ಅಳವಡಿಸಲಾಗುತ್ತದೆ. ಇದರಿಂದಾಗಿ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸುವ ಜತೆಗೆ ಮಳಿಗೆಗಳ ಪ್ರತಿನಿಧಿಗಳು ನಡು ರಸ್ತೆಯಲ್ಲಿ ನಿಲ್ಲುತ್ತಿದ್ದಾರೆ. ಇದು ಅಪಘಾತಕ್ಕೆ ಅವಕಾಶ ಮಾಡಿಕೊಡುತ್ತಿದೆ. ಚಾಮರಾಜಪೇಟೆ ಬಸವನಗುಡಿ ಕಡೆಯಿಂದ ಬರುವವರು ಲಾಲ್‌ಬಾಗ್‌ ಫೋರ್ಟ್‌ ರಸ್ತೆ ಮೂಲಕ ಬಂದು ಜೆ.ಸಿ. ರಸ್ತೆ ತಲುಪುತ್ತಾರೆ. ಅದೇ ರೀತಿ ಜೆ.ಪಿ. ನಗರ ಜಯನಗರ ವಿ.ವಿ ಪುರ ಭಾಗದಿಂದ ಬರುವವರು ಡಯಾಗನಲ್ ರಸ್ತೆ ಹಾಗೂ ಆರ್‌.ವಿ ರಸ್ತೆ ಮೂಲಕ ಬಂದು ಜೆ.ಸಿ. ರಸ್ತೆ ಸೇರುತ್ತಾರೆ. ಎಚ್.ಸಿ. ಜವರಾಯ ವೃತ್ತದ ಕಡೆಯಿಂದ ಬರುವವರು ಲಾಲ್‌ಬಾಗ್‌ ಫೋರ್ಟ್‌ ರಸ್ತೆ ಮೂಲಕ ಜೆ.ಸಿ. ರಸ್ತೆ ತಲುಪುತ್ತಾರೆ. ಇದರಿಂದಾಗಿ ನಾಲ್ಕು ರಸ್ತೆಗಳಲ್ಲಿ ಬರುವ ವಾಹನಗಳು ಒಂದೇ ರಸ್ತೆಯನ್ನು ಸೇರಿ ದಟ್ಟಣೆ ಹೆಚ್ಚಾಗುತ್ತಿದೆ.

ಪಾದಚಾರಿ ಮಾರ್ಗ ಕಣ್ಮರೆ

ಜೆ.ಸಿ.ರಸ್ತೆಯಲ್ಲಿ ವಾಹನಗಳ ಬಿಡಿ ಭಾಗಗಳ ಮಳಿಗೆಗಳ ಜತೆಗೆ ಗೃಹೋಪಯೋಗಿ ವಸ್ತುಗಳ ಮಳಿಗೆ ಆಸ್ಪತ್ರೆ ರಂಗಮಂದಿರ ಬ್ಯಾಂಕ್‌ಗಳ ಶಾಖೆ ಹಾಗೂ ವಿವಿಧ ವಾಣಿಜ್ಯ ಮಳಿಗೆಗಳಿವೆ. ಟಾರ್ಪಾಲ್‌ ಮ್ಯಾಟ್‌ಗಳ ಮಾರಾಟ ಮಳಿಗೆಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಪಾದಚಾರಿ ಮಾರ್ಗದಲ್ಲಿಯೇ ವಾಹನಗಳನ್ನು ನಿಲ್ಲಿಸುವ ಜತೆಗೆ ಅಲ್ಲಿಯೇ ವಿವಿಧ ವಸ್ತುಗಳನ್ನು ಇಡಲಾಗುತ್ತಿದೆ. ಇದರಿಂದಾಗಿ ಪಾದಚಾರಿಗಳು ರಸ್ತೆಯಲ್ಲಿ ಸಾಗಬೇಕಾಗಿದೆ. ಜೆ.ಸಿ.ರಸ್ತೆಗೆ ಹೊಂದಿಕೊಂಡಿರುವ ವಿನೋಬಾ ನಗರದ 1ನೇ ಅಡ್ಡರಸ್ತೆಯಲ್ಲಿ ಆಪ್ಟಿಕಲ್ ಫೈಬರ್‌ ಕೇಬಲ್ (ಒಎಫ್‌ಸಿ) ಅಳವಡಿಕೆ ಸಂಬಂಧ ಅಗೆದು ಮುಚ್ಚಲಾಗಿದೆ. ರಸ್ತೆಯ ಒಂದು ಭಾಗದಲ್ಲಿ ಡಾಂಬರ್ ಸಂಪೂರ್ಣ ಕಣ್ಮರೆಯಾಗಿದ್ದು ಇಲ್ಲಿ ಪ್ರಯಾಣ ಕಷ್ಟಸಾಧ್ಯವಾಗಿದೆ. ಈ ರಸ್ತೆ ಲಾಲ್‌ಬಾಗ್‌ ಮುಖ್ಯರಸ್ತೆಗೆ ಸಂಪರ್ಕ ಸಾಧಿಸಲಿದೆ. ನಯನ ರಂಗಮಂದಿರ ಜೈನ್‌ ವಿಶ್ವವಿದ್ಯಾಲಯಕ್ಕೆ ಇದೇ ರಸ್ತೆಯಲ್ಲಿ ಸಾಗಬೇಕಿದೆ.

ಪರಿಹಾರ ಏನು?

‘ರೆಸಿಡೆನ್ಸಿ ರಸ್ತೆಯಲ್ಲಿ ಶಾಲಾ ವಾಹನ ಹಾಗೂ ಪೋಷಕರ ವಾಹನಗಳು ಶಾಲೆಗಳ ಆವರಣಕ್ಕೆ ತೆರಳುವಂತಾಗಬೇಕು. ಖಾಸಗಿ ವಾಹನಗಳ ಬದಲು ಶಾಲಾ ಬಸ್‌ಗಳಲ್ಲಿ ಮಕ್ಕಳನ್ನು ಕಳುಹಿಸಬೇಕು. ಮೆಯೋಹಾಲ್‌ವರೆಗೂ ಮೇಲ್ಸೇತುವೆ ನಿರ್ಮಿಸಿದಲ್ಲಿ ದಟ್ಟಣೆ ನಿವಾರಣೆ ಸಾಧ್ಯ. ಶಾಲೆಗಳ ಸಮಯ ಬೇರೆ ಬೇರೆ ಇರಬೇಕು’ ಎಂದು ಸಂಚಾರ ಪೊಲೀಸರು ತಿಳಿಸಿದರು.  ‘ಜೆ.ಸಿ. ರಸ್ತೆಯಲ್ಲಿ ಸಂಚಾರ ದಟ್ಟಣೆ ನಿವಾರಣೆಯಾಗಲು ಮಿನರ್ವ ವೃತ್ತದಿಂದ ಹಡ್ಸನ್‌ ವೃತ್ತದವರೆಗೆ ಮೇಲ್ಸೇತುವೆ ನಿರ್ಮಿಸಬೇಕು. ಮೇಲ್ಸೇತುವೆ ನಿರ್ಮಾಣವಾದರೆ ಕೇವಲ 5 ನಿಮಿಷಗಳಲ್ಲಿ ಸಾಗಬಹುದಾಗಿದೆ’ ಎನ್ನುತ್ತಾರೆ ಸಂಚಾರ ಪೊಲೀಸರು.

ಎಲ್ಲೆಲ್ಲಿ ಅಧಿಕ ದಟ್ಟಣೆ?

*ಮಿನರ್ವ ವೃತ್ತ

*ಭಾರತ್ ಜಂಕ್ಷನ್‌

*ಬಿ.ಎನ್. ಗರುಡಾಚಾರ್ ವೃತ್ತ

*ಸೇಂಟ್‌ ಮಾರ್ಕ್ಸ್ ರಸ್ತೆ ಜಂಕ್ಷನ್

*ಆಶೀರ್ವಾದಂ ಜಂಕ್ಷನ್

*ಬ್ರಿಗೇಡ್ ಜಂಕ್ಷನ್

*ಡಬಲ್ ರಸ್ತೆ ಜಂಕ್ಷನ್

*ಶಾಂತಿನಗರ ಜಂಕ್ಷನ್

*ಕೆ.ಎಚ್. ವೃತ್ತ

ನಗರದ ಸಂಚಾರ ದಟ್ಟಣೆಗೆ ಪರಿಹಾರವೇ ಇಲ್ಲದಂತಾಗಿದೆ. ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಅದರ ಪರಿಣಾಮ ಎದುರಿಸುತ್ತಿದ್ದೇವೆ
–ಮ್ಯಾಥ್ಯೂಸ್, ಖಾಸಗಿ ವಿವಿ ಪ್ರಾಧ್ಯಾಪಕ
ದಟ್ಟಣೆ ನಿವಾರಣೆಗೆ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ರಸ್ತೆಯ ಅಕ್ಕಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವವರಿಗೆ ಸೂಕ್ತ ಎಚ್ಚರಿಕೆ ನೀಡಿ ದಂಡ ಹಾಕಬೇಕು. ಕಾಮಗಾರಿಗಳನ್ನು ವೇಗವಾಗಿ ಮುಗಿಸಬೇಕು
–ಶಶಿ, ಖಾಸಗಿ ಸಂಸ್ಥೆ ಉದ್ಯೋಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.