ADVERTISEMENT

ಬೆಂಗಳೂರು ಸುರಂಗ ರಸ್ತೆ | ತೇಜಸ್ವಿ ಸೂರ್ಯ ಸಲಹೆ ಪರ್ಯಾಯವಲ್ಲ: ಡಿಕೆಶಿ

ನ್ಯಾಯಾಲಯವೇ ಸಮಿತಿ ರಚಿಸಿ ಪರಿಶೀಲಿಸಲಿ: ಉಪ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 23:30 IST
Last Updated 28 ಅಕ್ಟೋಬರ್ 2025, 23:30 IST
<div class="paragraphs"><p>ಡಿಕೆಶಿ,&nbsp;ತೇಜಸ್ವಿ ಸೂರ್ಯ</p></div>

ಡಿಕೆಶಿ, ತೇಜಸ್ವಿ ಸೂರ್ಯ

   

ಬೆಂಗಳೂರು: ‘ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸಂಸದ ತೇಜಸ್ವಿ ಸೂರ್ಯ ಅವರು ಕೊಟ್ಟ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ. ಆದರೂ ಅವರ ಸಲಹೆಗಳನ್ನು ಗೌರವಿಸುತ್ತೇನೆ. ಅವುಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಅವರ ಭೇಟಿ ಬಗ್ಗೆ ಸುದ್ದಿಗಾರರು ಕೇಳಿದಾಗ, ‘ತೇಜಸ್ವಿ ಸೂರ್ಯ ಅವರು ಕೆಲವು ಸಲಹೆ ನೀಡಿದ್ದಾರೆ. ಸುರಂಗ ರಸ್ತೆಯಲ್ಲಿ ಕೇವಲ ಕಾರುಗಳಿಗೆ ಅನುಕೂಲವಾಗುತ್ತದೆ. ಮೆಟ್ರೊ ಮಾರ್ಗ ಕೂಡ ವಿಸ್ತರಿಸಬೇಕು ಎಂದು ಹೇಳುತ್ತಿದ್ದಾರೆ. ಮೆಟ್ರೊ ಸೇರಿಸಲು ನಮ್ಮ ತಕರಾರು ಇಲ್ಲ. ಇದರ ಜೊತೆಗೆ ಅವರು ನೀಡಿರುವ ಇತರೆ ಸಲಹೆಗಳನ್ನು ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಇನ್ನು ಬೆಂಗಳೂರಿನಲ್ಲಿ ಖಾಸಗಿ ಬಸ್‌ಗಳು, ಸಣ್ಣ ಬಸ್‌ಗಳಿಗೆ ಅವಕಾಶ ನೀಡಿ ಎಂದು ಹೇಳುತ್ತಿದ್ದಾರೆ. ಈಗಾಗಲೇ ಬೆಂಗಳೂರು ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಖಾಸಗಿ ಬಸ್‌ಗಳಿಗೆ ಅವಕಾಶ ನೀಡಿದರೆ ಏನು ಉಪಯೋಗ ಎಂದು ಚರ್ಚೆ ಮಾಡಬೇಕಿದೆ’ ಎಂದರು.

ADVERTISEMENT

‘ಬೆಂಗಳೂರು ಮೆಟ್ರೊಪಾಲಿಟನ್‌ ಲ್ಯಾಂಡ್‌ ಟ್ರಾನ್ಸ್‌ಪೋರ್ಟ್‌ ಪ್ರಾಧಿಕಾರ (ಬಿಎಂಎಲ್‌ಟಿ) ಮಾಡಬೇಕು ಎಂದು ಅವರು ಹೇಳಿದರು. ಆಗ ನಾನು ನಿಮ್ಮ ಕಾಲದಲ್ಲಿ ಯಾಕೆ ಮಾಡಲಿಲ್ಲ ಎಂದು ಕೇಳಿದೆ. ಅದಕ್ಕೆ ಅವರು ಆಗ ಆಗಲಿಲ್ಲ ಎಂದರು. ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಎಷ್ಟು ಅನುದಾನ ಕೊಡಿಸುತ್ತೀರಿ ಎಂದು ಕೇಳಿದೆ. ನಿಮ್ಮ ಸಂಸದರೆಲ್ಲ ಬನ್ನಿ, ನಾನು ಕೂಡ ಬರುತ್ತೇನೆ. ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ಅನುದಾನಕ್ಕೆ ಒತ್ತಾಯ ಮಾಡೋಣ ಎಂದು ಹೇಳಿದೆ’ ಎಂದರು.

‘ಜನ ತಮ್ಮ ವಾಹನದಲ್ಲೇ ತಾವು, ತಮ್ಮ ಮನೆಯವರು ಪ್ರಯಾಣ ಮಾಡಬೇಕು ಎಂದು ಬಯಸುತ್ತಾರೆ. ಅವರಿಗೆ ನಿಮ್ಮ ವಾಹನ ತರಬೇಡಿ ಎಂದು ತಡೆಯಲು ಆಗುತ್ತದೆಯೇ? ಬೇಕಿದ್ದರೆ ಸಂಸದರು ತಮ್ಮ ಕ್ಷೇತ್ರದ ಜನರಿಗೆ, ನೀವು ನಿಮ್ಮ ಕಾರುಗಳನ್ನು ಮನೆಯಲ್ಲೇ ನಿಲ್ಲಿಸಿ, ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡಿ ಎಂದು ಕರೆ ನೀಡಲಿ. ಆಗ ಯಾರು ಪಾಲನೆ ಮಾಡುತ್ತಾರೆ ನೋಡೋಣ? ಕಾರಿಲ್ಲದ ಹುಡುಗನ ಮನೆಗೆ ಹೆಣ್ಣು ನೀಡಲು ಹಿಂದೇಟು ಹಾಕುತ್ತಾರೆ. ಇಂತಹ ಸಾಮಾಜಿಕ ಬಾಧ್ಯತೆಗಳ ಬಗ್ಗೆ ಸಂಸದರಿಗೆ ಅರಿವಿಲ್ಲ’ ಎಂದರು.

‘ಸುರಂಗ ರಸ್ತೆ ಬಗ್ಗೆ ಅವರು ಏನಾದರೂ ಪಿಐಎಲ್ ಹಾಕಿಕೊಳ್ಳಲಿ. ಬೇಕಿದ್ದರೆ ನ್ಯಾಯಾಲಯವೇ ಸಮಿತಿ ರಚಿಸಿ ಎಲ್ಲಾ ಸ್ಥಳಗಳನ್ನು ಪರಿಶೀಲಿಸಲಿ. ನಾನು ಅಥವಾ ನಮ್ಮ ಅಧಿಕಾರಿಗಳು ಏನಾದರೂ ತಪ್ಪು ಮಾಡಿದ್ದರೆ ತಿಳಿಸಲಿ. ಅದನ್ನು ಸರಿಪಡಿಸಿಕೊಳ್ಳಲು ಸಿದ್ಧರಿದ್ದೇವೆ’ ಎಂದು ಹೇಳಿದರು.

ಹಣ ಕೊಡುವವರು ಯಾರು?: ‘ಹಣದ ವಿಚಾರದಲ್ಲಿ ಖಾಲಿ ಟ್ರಂಕ್ ಎಂದು ಹೇಳಿದ್ದೆ. ಯಾವುದೇ ಯೋಜನೆ ಮಾಡಬೇಕಾದರೂ ಹಣ ಬೇಕು. ಕೇವಲ ಟ್ವೀಟ್, ಟೀಕೆಗಳಿಂದ ಪರಿಹಾರ ಸಿಗುವುದಿಲ್ಲ. ಪ್ರಧಾನಮಂತ್ರಿಯವರಿಂದ ಹಣ ಕೊಡಿಸಲಿ. ಸಲಹೆಗಳನ್ನು ಯಾರು ಬೇಕಾದರೂ, ಎಷ್ಟು ಬೇಕಾದರೂ ನೀಡುತ್ತಾರೆ. ಸುರಂಗ ರಸ್ತೆ ಬೇಡ ಎನ್ನುತ್ತೀರಿ, ಕಟ್ಟಡ ಕೆಡವಬಾರದು ಎನ್ನುತ್ತೀರಿ. ನಾವು ಹೆಚ್ಚು ಬಸ್ ಬಿಟ್ಟರೆ ಎಷ್ಟು ಜನ ಓಡಾಡುತ್ತಾರೆ. ಎಲ್ಲಾ ಕಡೆಗೂ ಮೆಟ್ರೊ ಕಲ್ಪಿಸಲು ಆಗುತ್ತದೆಯೇ’ ಎಂದು ಪ್ರಶ್ನಿಸಿದರು.

‘ಲಾಲ್‌ಬಾಗ್‌ನಲ್ಲಿ ಆರು ಎಕರೆ ಸ್ವಾಧೀನವಿಲ್ಲ’

‘ಸುರಂಗ ರಸ್ತೆಗೆ ಲಾಲ್‌ಬಾಗ್‌ನಲ್ಲಿ ಆರು ಎಕರೆ ಭೂಮಿಯನ್ನು ಬಳಸಿಕೊಳ್ಳುವುದಿಲ್ಲ. ಲಾಲ್‌ಬಾಗ್‌ನ ಮೂಲೆಯಲ್ಲಿ ಸುರಂಗ ರಸ್ತೆ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ನೀಡಲಾಗುವುದು. ಇಲ್ಲಿ ಬೇಡ ಎಂದರೆ, ಬೇರೆ ಎಲ್ಲಿ ಇದಕ್ಕೆ ಅವಕಾಶ ಕಲ್ಪಿಸಬಹುದು, ನೀವೇ ಸಲಹೆ ನೀಡಿ ಎಂದು ತೇಜಸ್ವಿ ಅವರನ್ನು ಕೇಳಿದೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

‘ಎಲ್ಲಾ ದೇಶಗಳಲ್ಲೂ ಟನಲ್ ರಸ್ತೆ ಬೇಡ ಎನ್ನುತ್ತಿದ್ದಾರೆ’ ಎಂದು ತೇಜಸ್ವಿ ಹೇಳಿದರು. ಅದಕ್ಕೆ ನಾನು, ನೀವು ಒಬ್ಬರು ಹೇಳಿದಂತೆ ಕೇಳಲು ಆಗುವುದಿಲ್ಲ ಎಂದು ಹೇಳಿದೆ. ಹೊರವರ್ತುಲ ರಸ್ತೆಯಲ್ಲಿ ಶೇ 70ರಷ್ಟು ಜನ ಸಾರ್ವಜನಿಕ ಸಾರಿಗೆ ಮಾಡಬೇಕು, ಸಬ್ ಅರ್ಬನ್ ರೈಲುಗಳ ಸಂಖ್ಯೆ ಹೆಚ್ಚಿಸಬೇಕು ಎಂದರು. ‘ಕೇಂದ್ರ ಸರ್ಕಾರದ ಬಳಿ ಹೋಗಿ ಹಣ ಕೇಳೋಣ. ಸೋಮಣ್ಣ ಅವರ ಜೊತೆ ಚರ್ಚೆ ಮಾಡೋಣ. ಹಣ ಕೊಟ್ಟರೆ ಮಾಡೋಣ. ಇದುವರೆಗೂ ಕೇಂದ್ರ ಸರ್ಕಾರ ಹಣ ನೀಡದ ಕಾರಣ, ಒಂದು ರೈಲನ್ನೂ ಸೇರಿಸಿಲ್ಲ. ಎಲ್ಲಕ್ಕೂ ನಮ್ಮ ಮೇಲೆ ಅವಲಂಬಿತವಾದರೆ ಹೇಗೆ? ಕೇವಲ ಸಲಹೆ ಮಾತ್ರವಲ್ಲ, ಇದಕ್ಕೆ ಪೂರಕವಾಗಿ ಹಣವನ್ನು ತನ್ನಿ ಎಂದು ಹೇಳಿದ್ದೇನೆ’ ಎಂದು ಶಿವಕುಮಾರ್‌ ತಿಳಿಸಿದರು.

ಸುಸ್ಥಿರ ಸಾರಿಗೆ ಅಗತ್ಯ: ತೇಜಸ್ವಿ ಸೂರ್ಯ

‘ಸುರಂಗ ರಸ್ತೆಯ ಬದಲು ಮೆಟ್ರೊ, ಬಿಎಂಟಿಸಿ, ಸಬ್‌–ಅರ್ಬನ್‌ ಸಂಪರ್ಕ ಜಾಲವನ್ನು ಹೆಚ್ಚಿಸಬೇಕು. ‘ಕಾರಿಗೆ ಮಾತ್ರ ಸುರಂಗ ರಸ್ತೆ’ಗಾಗಿ ಹೆಚ್ಚಿನ ಹಣ ವೆಚ್ಚ ಮಾಡುವ ಅಗತ್ಯವಿಲ್ಲ. ವಾಹನಗಳ ಬದಲಿಗೆ ಜನ ಸಂಚಾರವನ್ನು ಸುಗಮಗೊಳಿಸಬೇಕು. ಸರ್ಕಾರದ ಡಿಪಿಆರ್‌ನಂತೆಯೇ ಉದ್ದೇಶಿತ ಸುರಂಗ ರಸ್ತೆಯಲ್ಲಿ 1,800 ವಾಹನಗಳು ಒಂದು ಗಂಟೆಗೆ ಸಂಚರಿಸಬಹುದು. ಅದೇ ಮಾರ್ಗದಲ್ಲಿ ಮೆಟ್ರೊ ಸಂಪರ್ಕವಿದ್ದರೆ 69 ಸಾವಿರ ಜನರು ಪ್ರಯಾಣಿಸುತ್ತಾರೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮನವರಿಕೆ ಮಾಡಿಕೊಡ ಲಾಗಿದೆ’ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಶಿವಕುಮಾರ್‌ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಿದ ಅವರು, ‘ಸುರಂಗ ರಸ್ತೆಯಿಂದ ಯಾವುದೇ ರೀತಿಯಲ್ಲಿ ಲಾಲ್‌ಬಾಗ್‌ಗೆ ಸಮಸ್ಯೆ ಆಗುವುದಿಲ್ಲ ಎಂದು ಅವರು ಭರವಸೆ ನೀಡಿದರು. ಸುರಂಗ ರಸ್ತೆಯಿಂದ ಪರಿಸರದ ಮೇಲಷ್ಟೇ ಪರಿಣಾಮ ಬೀರುವುದಿಲ್ಲ, ಬೃಹತ್‌ ಮೊತ್ತ ವೆಚ್ಚವಾಗುವುದರಿಂದ ಅದು ಪ್ರಯೋಜನಕ್ಕೆ ಬರುವುದಿಲ್ಲ. ಇದಕ್ಕಾಗಿ ನಾವು ಅದನ್ನು ವಿರೋಧಿಸುತ್ತಿದ್ದೇವೆ ಎಂಬುದನ್ನು ಅವರಿಗೆ ತಿಳಿಸಲಾಯಿತು’ ಎಂದರು.