ADVERTISEMENT

ನಮ್ಮ ಮೆಟ್ರೊದಲ್ಲಿ ಪ್ರಯಾಣ: ಸಾರ್ವಕಾಲಿಕ ದಾಖಲೆ

ಐಪಿಎಲ್‌ ವಿಜೇತರಾದ ಆರ್‌ಸಿಬಿ ಅಭಿನಂದನೆಗೆ ಹರಿದುಬಂದಿದ್ದ ಜನಸಾಗರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 23:30 IST
Last Updated 5 ಜೂನ್ 2025, 23:30 IST
<div class="paragraphs"><p>ನಮ್ಮ ಮೆಟ್ರೊ</p></div>

ನಮ್ಮ ಮೆಟ್ರೊ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಮ್ಮ ಮೆಟ್ರೊದಲ್ಲಿ ಬುಧವಾರ 9.66 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಇದು ಒಂದು ದಿನದ ಪ್ರಯಾಣಿಕರ ಸಂಖ್ಯೆಯಲ್ಲಿನ ಸಾರ್ವಕಾಲಿಕ ದಾಖಲೆಯಾಗಿದೆ.

ADVERTISEMENT

ಐಪಿಎಲ್ ವಿಜೇತರಾದ ಆರ್‌ಸಿಬಿ ತಂಡಕ್ಕೆ ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು. ನಾಲ್ಕೂ ದಿಕ್ಕುಗಳಿಂದ ಜನರು ಮೆಟ್ರೊದಲ್ಲಿ ಬಂದಿದ್ದರು.

9,66,732 ಪ್ರಯಾಣಿಕರು ಮೆಟ್ರೊದಲ್ಲಿ ಪ್ರಯಾಣಿಸಿದ್ದರು. ಮಾರ್ಗ 1ರಲ್ಲಿ (ನೇರಳೆ) 4,78,334 ಪ್ರಯಾಣಿಕರು ಮತ್ತು ಮಾರ್ಗ 2ರಲ್ಲಿ (ಹಸಿರು) 2,84,674 ಜನರು ಪ್ರಯಾಣಿಸಿದ್ದರು. ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಇಂಟರ್‌ಚೇಂಜ್‌ ನಿಲ್ದಾಣದಲ್ಲಿ 2,03,724 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಬೆಂಗಳೂರು ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಅಧಿಕಾರಿಗಳು ತಿಳಿಸಿದ್ದಾರೆ.

2024ರ ಡಿಸೆಂಬರ್‌ 7ರಂದು 9.20 ಲಕ್ಷ ಪ್ರಯಾಣಿಕರು ಸಂಚರಿಸಿರುವುದು ಇದುವರೆಗಿನ ದಾಖಲೆಯಾಗಿತ್ತು. ಅದಕ್ಕಿಂತ ಹಿಂದೆ ಆಗಸ್ಟ್‌ 14ರಂದು 9.17 ಲಕ್ಷ ಜನರು ಪ್ರಯಾಣಿಸುವ ಮೂಲಕ ಮೊದಲ ಬಾರಿಗೆ 9 ಲಕ್ಷ ದಾಟಿತ್ತು. 2025ರ ಏಪ್ರಿಲ್‌ 17ರಂದು 9.08 ಲಕ್ಷ ಜನ ಸಂಚರಿಸಿರುವುದು ಈ ವರ್ಷದ ದಾಖಲೆಯಾಗಿತ್ತು. ಏಪ್ರಿಲ್‌ನಲ್ಲಿ ದಿನಕ್ಕೆ ಸರಾಸರಿ 7.27 ಲಕ್ಷ, ಮೇ ತಿಂಗಳಲ್ಲಿ ಸರಾಸರಿ 7.30 ಲಕ್ಷ ಜನರು ಸಂಚರಿಸಿದ್ದರು. 

ಐ‍ಪಿಎಲ್‌ 18ನೇ ಆವೃತ್ತಿಯ ಫೈನಲ್‌ ಪಂದ್ಯ ಮಂಗಳವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದ್ದರೂ ಬೆಂಗಳೂರಿನ ವಿವಿಧೆಡೆ ಪ್ರದರ್ಶನ ವೀಕ್ಷಣೆಗೆ ಬೃಹತ್‌ ಎಲ್‌ಇಡಿ ಸ್ಕ್ರೀನ್‌ಗಳನ್ನು ಹಾಕಿದ್ದರಿಂದ ಮಂಗಳವಾರವೂ ಜನಸಂಚಾರ ಹೆಚ್ಚಾಗಿತ್ತು. ಅಂದು ಮೆಟ್ರೊದಲ್ಲಿ 8.37 ಲಕ್ಷ ಮಂದಿ ಸಂಚರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.