ADVERTISEMENT

54 ವಿದ್ಯುತ್‌ ಸರಬರಾಜು ಕಂಪನಿಗಳ ಪೈಕಿ 51ನೇ ರ‍್ಯಾಂಕ್‌ಗೆ ಕುಸಿದ ಬೆಸ್ಕಾಂ

ಕಳಪೆ ಕಾರ್ಯನಿರ್ವಹಣೆಗೆ ಮೈನಸ್‌ ಸಿ ರೇಟಿಂಗ್‌, ರೆಡ್‌ ಕಾರ್ಡ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 0:12 IST
Last Updated 12 ಫೆಬ್ರುವರಿ 2026, 0:12 IST
ಬೆಸ್ಕಾಂ ಲೋಗೊ
ಬೆಸ್ಕಾಂ ಲೋಗೊ   

ಬೆಂಗಳೂರು: ದೇಶದಲ್ಲಿರುವ ಒಟ್ಟು 54 ವಿದ್ಯುತ್‌ ಸರಬರಾಜು ಕಂಪನಿಗಳ ಪೈಕಿ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) 51ನೇ ರ‍್ಯಾಂಕ್‌ಗೆ ಕುಸಿದಿದೆ.

ಕೇಂದ್ರದ ಇಂಧನ ಸಚಿವಾಲಯ ದೇಶದಾದ್ಯಂತ ಮೌಲ್ಯಮಾಪನ ಮಾಡಿದ್ದು, 14ನೇ ವಾರ್ಷಿಕ ಸಮಗ್ರ ರೇಟಿಂಗ್‌ ಮತ್ತು ರ‍್ಯಾಂಕಿಂಗ್‌ ವರದಿಯನ್ನು ಈಚೆಗೆ ಬಿಡುಗಡೆ ಮಾಡಿದೆ. ಬೆಸ್ಕಾಂ ಬಹುಮಾದರಿ
ಗಳಲ್ಲಿ ಕಳಪೆ ಕಾರ್ಯನಿರ್ವಹಣೆಯಿಂದ ‘ಮೈನಸ್‌ ಸಿ ರೇಟಿಂಗ್‌ ಮತ್ತು ರೆಡ್‌ ಕಾರ್ಡ್‌’ ಪಡೆದಿದೆ.

ವರದಿಯ ಪ್ರಕಾರ, ಬೆಸ್ಕಾಂ ಒಟ್ಟಾರೆ ₹13,819 ಕೋಟಿ ನಷ್ಟ ಅನುಭವಿಸಿದ್ದು, ₹22,611 ಕೋಟಿ ಸಾಲ ಹೊಂದಿದೆ. 2025ರಲ್ಲಿ ₹5,476 ಕೋಟಿ ನಷ್ಟ ಅನುಭವಿಸಿದೆ.

ADVERTISEMENT

ಸಂಪನ್ಮೂಲ ಸಂಗ್ರಹ, ಬಿಲ್ಲಿಂಗ್‌, ಪ್ರಸರಣ ನಷ್ಟ ಸೇರಿದಂತೆ 15 ಮಾನ ದಂಡಗಳಲ್ಲಿ ಕಂಪನಿಗಳ ಕಾರ್ಯದಕ್ಷತೆ ಯನ್ನು ಮೌಲ್ಯಮಾಪನ ಮಾಡಲಾಗಿದೆ. 13ನೇ ವಾರ್ಷಿಕ ಸಮಗ್ರ ರೇಟಿಂಗ್‌ ಮತ್ತು ರ್‍ಯಾಂಕಿಂಗ್‌ನಲ್ಲಿ 40.43 ಅಂಕ ಪಡೆದು 34ನೇ ರ‍್ಯಾಂಕ್‌ ಪಡೆದಿದ್ದ ಬೆಸ್ಕಾಂ, 14ನೇ ವಾರ್ಷಿಕ ವರದಿಯಲ್ಲಿ 100ಕ್ಕೆ 12.44 ಅಂಕ ಪಡೆದಿರುವ ಬೆಸ್ಕಾಂ ಗಣನೀಯವಾಗಿ ಕುಸಿತ ಕಂಡಿದೆ. ಆಡಿಟ್‌ ವರದಿಯಲ್ಲಿ ನಕಾರಾತ್ಮಕ ಅಭಿಪ್ರಾಯ ಇರುವುದರಿಂದ ಎಚ್ಚರಿಕೆ
ನೀಡಲಾಗಿದೆ.

ಕರ್ನಾಟಕದ ಯಾವ ಎಸ್ಕಾಂಗಳೂ ಅಗ್ರ 10 ಅಥವಾ 20ರ ಒಳಗೆ ರ್‍ಯಾಂಕ್ ಪಡೆದಿಲ್ಲ. 26ನೇ ರ್‍ಯಾಂಕ್‌ ಪಡೆದಿರುವ ಮೆಸ್ಕಾಂ, ರಾಜ್ಯಕ್ಕೆ ಅಗ್ರಸ್ಥಾನದಲ್ಲಿದೆ. ಸರ್ಕಾರ ಸುಧಾರಣೆಗಳ ರೂಪುರೇಷೆ ಗಳನ್ನು ಅನುಷ್ಠಾನ ಮಾಡದಿದ್ದರೆ, ಎಸ್ಕಾಂಗಳು ಯಾವುದೇ ರೀತಿಯಲ್ಲಿ ಪ್ರಗತಿ ಕಾಣುವುದಿಲ್ಲ ಎಂದು ತಜ್ಞರು
ಅಭಿಪ್ರಾಯಪಟ್ಟಿದ್ದಾರೆ.

‘ಗುರುಚರಣ್‌ ಸಮಿತಿಯು ಸುಧಾರಣೆಗೆ ಹಲವು ಸಲಹೆಗಳನ್ನು ನೀಡಿದ್ದು, ಅವುಗಳನ್ನು ಅನುಷ್ಠಾನ
ಗೊಳಿಸುವ ಅಗತ್ಯವಿದೆ ಎಂದು ಕೆಇಆರ್‌ಸಿ ಸಲಹಾ ಸಮಿತಿಯ ಮಾಜಿ ಸದಸ್ಯ ಎಂ.ಜಿ. ಪ್ರಭಾಕರ್‌ ಹೇಳಿದರು.

‘ಕೆಲವು ಸಮಸ್ಯೆಗಳನ್ನು ಗುರುತಿಸಲಾಗಿದೆ. ಅವುಗಳನ್ನು ಬಗೆಹರಿಸಿ, ಕಾರ್ಯದಕ್ಷತೆಯನ್ನು
ಉತ್ತಮಗೊಳಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಇಂಧನ ಇಲಾಖೆಯ ಅಧಿಕಾರಿಗಳು ಹೇಳಿದರು.

‘ಕೆಲವು ಸಮಸ್ಯೆಗಳು ಇರುವುದನ್ನು ಆಡಿಟ್‌ ಮೂಲಕ ತಿಳಿದುಕೊಂಡಿದ್ಧೇವೆ. ಅವುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಇನ್ನೊಂದೆಡೆ, ನಮ್ಮ ಕಾರ್ಯದಕ್ಷತೆ ತೃಪ್ತಿಕರವಾಗಿದೆ. ನಮ್ಮ ಆದಾಯದ ಪ್ರಗತಿ ಆರೋಗ್ಯಕರವಾಗಿದೆ’ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ
ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.