ADVERTISEMENT

ಬೆಂಗಳೂರು | ಮಾರಕಾಸ್ತ್ರ ಝಳಪಿಸಿ ವ್ಹೀಲಿ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 23:30 IST
Last Updated 19 ಮಾರ್ಚ್ 2025, 23:30 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಮಾರಕಾಸ್ತ್ರ ಝಳಪಿಸಿಕೊಂಡು ದ್ವಿಚಕ್ರ ವಾಹನದಲ್ಲಿ ವ್ಹೀಲಿ ಮಾಡಿದ್ದ ಇಬ್ಬರು ಆರೋಪಿಗಳನ್ನು ನಗರದ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಮಹೇಶ್ (19) ಹಾಗೂ ಮಂಜುನಾಥ್ (19) ಬಂಧಿತ ಆರೋಪಿಗಳು. ಮಾರ್ಚ್ 15ರಂದು ಹೊರ ವರ್ತುಲ ರಸ್ತೆಯ ಚೌಡೇಶ್ವರಿನಗರ ಬಸ್ ನಿಲ್ದಾಣದ ಬಳಿ ಮಾರಕಾಸ್ತ್ರವನ್ನು ರಸ್ತೆಗೆ ಉಜ್ಜುತ್ತಾ, ಸ್ಕೂಟರ್‌ನಲ್ಲಿ ವ್ಹೀಲಿ ಮಾಡುತ್ತ ಸಾಗಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇಬ್ಬರೂ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಗಳು ತಮ್ಮ ಬಡಾವಣೆಯಲ್ಲಿ ಭಯ ಸೃಷ್ಟಿಸುವ ಉದ್ದೇಶದಿಂದ ಕೃತ್ಯ ಎಸಗಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ. ಕೃತ್ಯ ನಡೆದ ಸ್ಥಳ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಆ ಠಾಣೆಯಲ್ಲಿ ಶಸ್ತ್ರಾಸ್ತ್ರ‌ಕಾಯ್ದೆಗಳಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯೇಕ ಪ್ರಕರಣವೊಂದರಲ್ಲಿ, ರಾಜಾನುಕುಂಟೆ-ಕಾಕೋಳು ರಸ್ತೆಯಲ್ಲಿ ಬೈಕ್ ವ್ಹೀಲಿ ಮಾಡಿದವರ ವಿರುದ್ಧ ರಾಜಾನುಕುಂಟೆ ಪೊಲೀಸರು ಪ್ರಕರಣ ದಾಖಲಿಸಿ, ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿ, ನಾಲ್ವರನ್ನು ಬಂಧಿಸಿದ್ದರು.

ಪೋಷಕರ ವಿರುದ್ಧ ಕ್ರಮ

ಮತ್ತೊಂದು ಪ್ರಕರಣದಲ್ಲಿ ಅಪ್ರಾಪ್ತರು ವ್ಹೀಲಿ ಮಾಡಲು ಬಳಸಿದ್ದ ಬೈಕ್ ಮಾಲೀಕರಾದ ಅವರ ಪೋಷಕರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ ಎಂದು ಕಾಮಾಕ್ಷಿ ಪಾಳ್ಯ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಅಪ್ರಾಪ್ತರಿಗೆ ಮೋಟಾರು ವಾಹನ ಕಾಯ್ದೆ ಅಡಿ 25 ವರ್ಷವಾಗುವವರೆಗೂ ಚಾಲನಾ ಪರವಾನಗಿ ನೀಡದಂತೆ, ಮಾಹಿತಿಯೊಂದಿಗೆ ‌ಪ್ರಾದೇಶಿಕ ಸಾರಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಪ್ರಕರಣದಲ್ಲಿ ಅಪ್ರಾಪ್ತರ ಪೋಷಕರು, ವಾಹನ ಮಾಲೀಕರಿಗೆ ₹ 25 ಸಾವಿರವರೆಗೆ ದಂಡ ವಿಧಿಸಲಾಗುತ್ತಿದ್ದು, ಹೆಚ್ಚುವರಿಯಾಗಿ ಆರೋಪ ಪಟ್ಟಿ ಸಿದ್ದಪಡಿಸಿದರೆ ಮೂರು ವರ್ಷದವರೆಗೆ ಕಠಿಣ ಕಾರಾಗೃಹ ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿವರೆಗೂ ದಂಡ ಹಾಗೂ ಎರಡನ್ನೂ ವಿಧಿಸುವ ಅಧಿಕಾರ ನ್ಯಾಯಾಲಯಕ್ಕೆ ಇದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.