ADVERTISEMENT

ಆರೋಗ್ಯ ಕಡೆಗಣನೆ; ತಡವಾಗಿ ಮಹಿಳೆಯರಲ್ಲಿ ಕ್ಯಾನ್ಸರ್ ಪತ್ತೆ: ಅಪೋಲೊ ವೈದ್ಯರ ಕಳವಳ

‘ಎಂಡ್-ಒ ಚೆಕ್’ ರೋಗ ನಿರ್ಣಯ ಕಾರ್ಯಕ್ರಮದಲ್ಲಿ ಅಪೋಲೊ ಆಸ್ಪತ್ರೆ ವೈದ್ಯರ ಕಳವಳ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 14:08 IST
Last Updated 30 ಜುಲೈ 2025, 14:08 IST
<div class="paragraphs"><p>ವೈದ್ಯರು</p></div>

ವೈದ್ಯರು

   

ಬೆಂಗಳೂರು: ‘ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಮುಖ್ಯ. ಆದರೆ, ಮಹಿಳೆಯರು ತಮ್ಮ ಆರೋಗ್ಯವನ್ನು ಕಡೆಗಣಿಸುತ್ತಿದ್ದು, ಕ್ಯಾನ್ಸರ್‌ ಪೀಡಿತ ಮಹಿಳೆಯರಲ್ಲಿ ಹೆಚ್ಚಿನವರು ರೋಗ ಉಲ್ಬಣಗೊಂಡ ಬಳಿಕ ಆಸ್ಪತ್ರೆಗೆ ಬರುತ್ತಾರೆ’ ಎಂದು ಅಪೋಲೊ ಆಸ್ಪತ್ರೆಯ ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದರು. 

ಬುಧವಾರ ಇಲ್ಲಿ ಆಸ್ಪತ್ರೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಎಂಡ್-ಒ ಚೆಕ್’ ರೋಗ ನಿರ್ಣಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಡಿ 45 ವರ್ಷ ಹಾಗೂ ಮೇಲ್ಪಟ್ಟ ಮಹಿಳೆಯರಲ್ಲಿ ಗರ್ಭಾಶಯ ಕ್ಯಾನ್ಸರ್ ಮತ್ತು ಅಂಡಾಶಯ ಕ್ಯಾನ್ಸರ್ ಪತ್ತೆಗೆ ಆದ್ಯತೆ ನೀಡಲಾಗಿದೆ. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಯ ಉದ್ದೇಶ ಹೊಂದಿರುವ ಈ ಕಾರ್ಯಕ್ರಮವು, ವೈದ್ಯಕೀಯ ತಪಾಸಣೆ, ರೋಗ ನಿರ್ಣಯ ಹಾಗೂ ವೈದ್ಯರ ಸಮಾಲೋಚನೆ ಒಳಗೊಂಡಿದೆ. 

ADVERTISEMENT

ಮಹಿಳೆಯರಲ್ಲಿ ಕ್ಯಾನ್ಸರ್ ಪ್ರಕರಣಗಳ ಏರಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಆಸ್ಪತ್ರೆಯ ಕ್ಯಾನ್ಸರ್ ತಜ್ಞೆ ಡಾ. ರಾಣಿ ಭಟ್, ‘ಬದಲಾದ ಜೀವನಶೈಲಿ, ಪಾಶ್ಚಾತ್ಯ ಆಹಾರ ಪದ್ಧತಿ, ಸ್ಥೂಲಕಾಯ, ಮಧುಮೇಹ, ತಡವಾಗಿ ಋತುಬಂಧ ಸೇರಿ ವಿವಿಧ ಕಾರಣಗಳಿಂದ ಮಹಿಳೆಯರಲ್ಲಿ ಗರ್ಭಾಶಯ ಕ್ಯಾನ್ಸರ್ ಮತ್ತು ಅಂಡಾಶಯ ಕ್ಯಾನ್ಸರ್ ಪ್ರಕರಣಗಳು ಏರಿಕೆಯಾಗುತ್ತಿವೆ. ರೋಗವನ್ನು ಶೀಘ್ರ ಪತ್ತೆ ಮಾಡಿ, ಸಕಾಲದಲ್ಲಿ ಚಿಕಿತ್ಸೆ ಒದಗಿಸಿದರೆ ಸುಲಭವಾಗಿ ವಾಸಿ ಮಾಡಬಹುದಾಗಿದೆ. ಆದ್ದರಿಂದ ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ನಿರ್ಣಾಯಕವಾಗಿದೆ. ರೋಗ ನಿರ್ಣಯ ವಿಳಂಬವಾದಲ್ಲಿ ಬದುಕುಳಿಯುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ’ ಎಂದು ಹೇಳಿದರು.

ಆಸ್ಪತ್ರೆಯ ಹಿರಿಯ ಸಲಹೆಗಾರ್ತಿ ಡಾ. ಅರುಣಾ ಆರ್. ಪಾಟೀಲ, ‘ಮಹಿಳೆಯರಲ್ಲಿ ಕ್ಯಾನ್ಸರ್ ಪತ್ತೆ ಮಾಡುವಲ್ಲಿ ವಿಕಿರಣ ವಿಜ್ಞಾನ ಪ್ರಮುಖ ಪಾತ್ರವಹಿಸುತ್ತದೆ. ಆಸ್ಪತ್ರೆಯ ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ, ‘ಎಂಡ್-ಒ ಚೆಕ್’ ಕಾರ್ಯಕ್ರಮದಡಿ ಮಹಿಳೆಯರಲ್ಲಿ ಕ್ಯಾನ್ಸರ್ ಪತ್ತೆಗೆ ಪರೀಕ್ಷೆ ನಡೆಸಲಾಗುತ್ತದೆ’ ಎಂದರು. 

ಅಪೋಲೊ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ದಿನೇಶ್ ಮಾಧವನ್, ‘ಆರಂಭಿಕ ಹಂತದಲ್ಲಿಯೇ ರೋಗ ನಿರ್ಣಯ ಮಾಡಿದಲ್ಲಿ ಚಿಕಿತ್ಸಾ ವೆಚ್ಚ ಕಡಿಮೆ ಆಗುವ ಜತೆಗೆ, ರೋಗಿಯೂ ಬೇಗ ಚೇತರಿಸಿಕೊಳ್ಳುತ್ತಾರೆ. ಆದ್ದರಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ವಿವರಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.