ADVERTISEMENT

ಬೆಂಗಳೂರಿನ SBIಗೆ ₹8 ಕೋಟಿ ವಂಚಿಸಿ 20 ವರ್ಷ ತಲೆಮರೆಸಿಕೊಂಡಿದ್ದ ಲೇಡಿ CBI ಬಲೆಗೆ

ಅತ್ಯಾಧುನಿಕ ಇಮೇಜ್ ಸರ್ಚ್ ಅನಾಲಿಟಿಕ್ಸ್ ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ಸಿಬಿಐ ಪೊಲೀಸರ ರೋಚಕ ಕಾರ್ಯಾಚರಣೆ.

ಪಿಟಿಐ
Published 19 ಜುಲೈ 2025, 7:08 IST
Last Updated 19 ಜುಲೈ 2025, 7:08 IST
<div class="paragraphs"><p>AI ಚಿತ್ರ</p></div>

AI ಚಿತ್ರ

   

ನವದೆಹಲಿ: ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯೊಂದರಿಂದ ₹8 ಕೋಟಿ ಹಣವನ್ನು ಸಾಲ ಪಡೆದು, ಆ ಬ್ಯಾಂಕ್‌ಗೆ ವಂಚನೆ ಮಾಡಿ ಬರೋಬ್ಬರಿ 20 ವರ್ಷ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಕೊನೆಗೂ ಸಿಬಿಐ ಪತ್ತೆ ಹಚ್ಚಿ ಬಂಧಿಸಿದೆ.

ಮಣಿ ಎಂ. ಶೇಖರ್ (48) ಬಂಧಿತ ಮಹಿಳೆ. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ, ಘೋಷಿತ ಅ‍ಪರಾಧಿಯಾಗಿದ್ದ ಮಣಿ ಅವರನ್ನು ಇತ್ತೀಚೆಗೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ಜುಲೈ 12ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ADVERTISEMENT

2003 ರಿಂದ 2005ರ ಅವಧಿಯಲ್ಲಿ ಮಣಿ ಹಾಗೂ ಅವರ ಪತಿ ಎನ್ನಲಾದ ಶೇಖರ್ ಗೃಹ ಉದ್ಯಮದ ಹೆಸರು ಹೇಳಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಎಸ್‌ಬಿಐ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಅವರು ಸಾಲ ಪಡೆದ ಬಳಿಕ ಇದು ವಂಚನೆ ಎಂದು ಬ್ಯಾಂಕ್‌ಗೆ ಮನದಟ್ಟಾಗಿತ್ತು. ನಂತರ ಮಣಿ, ಶೇಖರ್ ಹಾಗೂ ಇತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಸಿಬಿಐ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ 2005ರಲ್ಲಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಒಂದು ದಿನ ವಿಚಾರಣೆಗೆ ಬಂದಿದ್ದ ಶೇಖರ್ ಹಾಗೂ ಮಣಿ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡಿದ್ದರು. ನಂತರ ಈ ಇಬ್ಬರನ್ನೂ ಸಿಬಿಐ ನ್ಯಾಯಾಲಯ ‘ಅಪರಾಧಿಗಳು’ ಎಂದು ಘೋಷಣೆ ಮಾಡಿತ್ತು.

ಅಂದಿನಿಂದ ಮಣಿ ಹಾಗೂ ಶೇಖರ್‌ಗಾಗಿ ಪರಿ ಪರಿಯಾಗಿ ಹುಡುಕಾಡಿದ್ದ ಸಿಬಿಐ ಪೊಲೀಸರು ಒಂದು ಸಣ್ಣ ಸುಳಿವೂ ಸಿಗದೇ ನಿರಾಶರಾಗಿದ್ದರು. ಅವರ ಬಗ್ಗೆ ಸುಳಿವಿತ್ತವರಿಗೆ ₹1 ಲಕ್ಷ ಬಹುಮಾನವನ್ನೂ ಘೋಷಣೆ ಮಾಡಿದ್ದರು. ಆದರೂ ಸಿಕ್ಕಿರಲಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಸಿಬಿಐ ತನ್ನಲ್ಲಿ ದಾಖಲಾದ ಪ್ರಕರಣಗಳ ತನಿಖೆಗಳ ಸಹಾಯಕ್ಕಾಗಿ ಅತ್ಯಾಧುನಿಕ ಇಮೇಜ್ ಸರ್ಚ್ ಅನಾಲಿಟಿಕ್ಸ್ ಸಾಫ್ಟ್‌ವೇರ್ ಅನ್ನು ಬಳಸಿಕೊಳ್ಳುವುದಕ್ಕೆ ಶುರು ಮಾಡಿತ್ತು. ಇದೇ ಸಾಫ್ಟ್‌ವೇರ್ ಬಳಸಿ ಪೊಲೀಸರು ಮಣಿ ಹಾಗೂ ಶೇಖರ್ ಅವರ ಹಳೆಯ ಇಮೇಜ್‌ಗಳನ್ನು ಇಟ್ಟುಕೊಂಡು ಇಂಟರ್‌ನೆಟ್‌ನಲ್ಲಿ ಹುಡುಕಾಟಕ್ಕೆ ಇಳಿದಿದ್ದರು. ಆಗ ಕಡೆಗೂ ಸಿಬಿಐ ಪ್ರಯತ್ನ ಫಲಿಸಿಯೇ ಬಿಟ್ಟಿತು.

ಇಮೇಜ್ ಸರ್ಚ್ ತಂತ್ರಜ್ಞಾನ ಕೊಟ್ಟ ಶೇ 90 ರಷ್ಟು ಸಾಮ್ಯತೆಯ ಸುಳಿವು ಆಧರಿಸಿ ಸಿಬಿಐ ಪೊಲೀಸರು ಪತ್ತೆ ಕಾರ್ಯಾಚರಣೆಗೆ ಇಳಿದರು. ಇಂಧೋರ್‌ನ ಪ್ರದೇಶವೊಂದರಲ್ಲಿ ಮಣಿ ಅವರು ಹಳೆಯ ಹೆಸರು, ಗುರುತುಗಳನ್ನು ಮರೆಮಾಚಿ ಸುಖಮಯವಾಗಿ ಜೀವನ ಮಾಡುತ್ತಿದ್ದರು. ಅಲ್ಲಿಂದ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ ಎಂದು ಸಿಬಿಐ ವಕ್ತಾರರು ಹೇಳಿದ್ದಾರೆ.

ಮಣಿ ಹಾಗೂ ಶೇಖರ್ ಪರಾರಿಯಾದ ನಂತರ ತಮ್ಮ ಹೆಸರಿನ, ಗುರುತಿನ ಎಲ್ಲ ದಾಖಲೆಗಳನ್ನು ಸರ್ವನಾಶ ಮಾಡಿ ಯಾರಿಗೂ ಸಂದೇಹ ಬರದಂತೆ ಹೊಸ ದಾಖಲೆಗಳ ಜೊತೆ ಇಂಧೋರ್‌ನಲ್ಲಿ ವಾಸಿಸುತ್ತಿದ್ದರು. ಇಂಧೋರ್‌ನಲ್ಲಿ ಕೃಷ್ಣಕುಮಾರ್ ಗುಪ್ತಾ (ಶೇಖರ್) ಗೀತಾ ಕೃಷ್ಣಕುಮಾರ್ ಗುಪ್ತಾ (ಮಣಿ) ಎಂದು ಇಬ್ಬರೂ ಹೆಸರು ಬದಲಿಸಿಕೊಂಡು ರಿಯಲ್ ಎಸ್ಟೇಟ್ ಹಾಗೂ ಇತರ ಕೆಲಸಗಳನ್ನು ಮಾಡುತ್ತಾ ಜೀವನ ಮಾಡುತ್ತಿದ್ದರು ಎಂದು ವಿವರಿಸಿದ್ದಾರೆ.

2008 ರಲ್ಲಿ ಶೇಖರ್ ಅನಾರೋಗ್ಯದಿಂದ ತೀರಿಕೊಂಡ ಎಂದು ಮಣಿ ತಿಳಿಸಿರುವುದಾಗಿ ವಕ್ತಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.