ADVERTISEMENT

ಬೆಂಗಳೂರು: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ನಿಂದ ಸೈಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 7:29 IST
Last Updated 7 ಜುಲೈ 2021, 7:29 IST
ಬೆಂಗಳೂರಿನಲ್ಲಿ ಕಾಂಗ್ರೆಸ್ ಸೈಕಲ್ ಜಾಥಾ
ಬೆಂಗಳೂರಿನಲ್ಲಿ ಕಾಂಗ್ರೆಸ್ ಸೈಕಲ್ ಜಾಥಾ   

ಬೆಂಗಳೂರು: ತೈಲ ಏರಿಕೆ ವಿರೋಧಿಸಿ ಕಾಂಗ್ರೆಸ್​ ಹಮ್ಮಿಕೊಂಡಿರುವ ಬೃಹತ್​​ ಸೈಕಲ್​ ರ‍್ಯಾಲಿ ಕೆಪಿಸಿಸಿ ಕಚೇರಿ ಮುಂಭಾಗದಿಂದ ಬುಧವಾರ ಬೆಳಿಗ್ಗೆ ಆರಂಭಗೊಂಡಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮತ್ತು ಸಲೀಂ ಅಹ್ಮದ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸೈಕಲ್‌ ಏರಿ ಜಾಥಾದಲ್ಲಿ ಭಾಗವಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಮುಖವಾಡ ಧರಿಸಿದ ವ್ಯಕ್ತಿ ಸೈಕಲ್ ತುಳಿದದ್ದು ಗಮನ ಸೆಳೆಯಿತು. ಇನ್ನೊಂದೆಡೆ ಕುದುರೆ ಟಾಂಗಾ ಮೆರವಣಿಗೆಯಲ್ಲಿ ಕಂಡು ಬಂತು. ಸಾಕಷ್ಟು ಸಂಖ್ಯೆಯಲ್ಲಿ ಯುವಕರು ಹಾಗೂ ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್​​ನಲ್ಲಿ ಜಾಥಾ ನಡೆಯಿತು.

ಸೈಕಲ್ ಜಾಥಾಗೆ ಚಾಲನೆ ನೀಡುವುದಕ್ಕೂ ಮೊದಲು ರಾಮಲಿಂಗಾರೆಡ್ಡಿ ಮತ್ತು ಸಲೀಂ ಅಹ್ಮದ್ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನಗತ್ಯವಾಗಿ ಬೆಲೆ ಏರಿಕೆ ಮಾಡುತ್ತಿವೆ. ಎರಡೂ ಸರ್ಕಾರಿಗಳು ಜನ ವಿರೋಧಿ ಆಗಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ರಸ್ತೆಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಹಳೆ ಊದಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಬೆಂಗಳೂರು ನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೈಕಲ್ ಜಾಥಾ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಿಂದ ಕ್ವೀನ್ಸ್‌ ರಸ್ತೆಯ ಮೂಲಕ ಸೈಕಲ್‌ನಲ್ಲಿ ಸಾಗಿದ ಕಾರ್ಯಕರ್ತರನ್ನು ಇಂಡಿಯನ್ ಎಕ್ಸ್​ಪ್ರೆಸ್​ ವೃತ್ತದ ಬಳಿ ಪೊಲೀಸರು ತಡೆದರು. ಆದರೆ, ಕಾಂಗ್ರೆಸ್ ನಾಯಕರು ಕ್ವೀನ್ಸ್ ರಸ್ತೆಯಿಂದ ಕಾರ್ಪೊರೇಷನ್ ವೃತ್ತದವರೆಗೂ ಸೈಕಲ್ ಜಾಥಾ ನಡೆಸಲು ಅವಕಾಶ ನೀಡುವಂತೆ ಪಟ್ಟು ಹಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.