ಪೊಲೀಸ್ – ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ತನಿಖೆಗೆ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ಹಿಂದೆ ಸರಿಯಲು ಐಪಿಎಸ್ ಅಧಿಕಾರಿ ಸೌಮ್ಯಲತಾ ಹಾಗೂ ಮತ್ತೊಬ್ಬ ಐಪಿಎಸ್‌ಯೇತರ ಅಧಿಕಾರಿ ನಿರ್ಧರಿಸಿದ್ದಾರೆ.
ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ, ರಾಜ್ಯ ಮಹಿಳಾ ಆಯೋಗವು ಜುಲೈ 14ರಂದು ಸರ್ಕಾರಕ್ಕೆ ಪತ್ರ ಬರೆದಿತ್ತು. ಅಲ್ಲದೇ ವ್ಯಕ್ತಿಯೊಬ್ಬರು ನ್ಯಾಯಾಧೀಶರ ಎದುರು ದಾಖಲಿಸಿದ್ದ ಹೇಳಿಕೆಯಲ್ಲಿನ ಆರೋಪಗಳ ಕುರಿತು ತನಿಖೆ ನಡೆಸುವಂತೆ ವಕೀಲರು, ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದರು. ಅದನ್ನು ಆಧರಿಸಿ ಸರ್ಕಾರವು ಜುಲೈ 20ರಂದು ಎಸ್ಐಟಿ ರಚಿಸಿ, ತನಿಖೆಗೆ ಆದೇಶಿಸಿತ್ತು.
ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್.ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಸದಸ್ಯರಾಗಿದ್ದರು. ಈ ತಂಡಕ್ಕೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಇನ್‌ಸ್ಪೆಕ್ಟರ್‌ಗಳು, ಸಬ್‌ಇನ್‌ಸ್ಪೆಕ್ಟರ್‌ಗಳು, ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ಗಳನ್ನು ಒಳಗೊಂಡ 20 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರು ಜುಲೈ 22ರಂದು ಆದೇಶಿಸಿದ್ದರು.
‘ಸೌಮ್ಯಲತಾ ಅವರು ಎಸ್‍ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರಿಗೆ ಪತ್ರ ಬರೆದಿದ್ದು, ವೈಯಕ್ತಿಕ ಕಾರಣಕ್ಕೆ ವಿಶೇಷ ತನಿಖಾ ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ. ಆದ್ದರಿಂದ, ತಮ್ಮನ್ನು ತಂಡದಿಂದ ಕೈಬಿಡಬೇಕೆಂದು ಮನವಿ ಮಾಡಿದ್ದರು’ ಎಂದು ಮೂಲಗಳು ತಿಳಿಸಿವೆ.
‘ತನಿಖೆಯ ರೂಪರೇಷೆಗಳ ಕುರಿತು ಸಿಐಡಿ ಕಚೇರಿಯಲ್ಲಿ ನಡೆದಿದ್ದ ಎಸ್‍ಐಟಿ ಸಭೆಗೂ ಸೌಮ್ಯಲತಾ ಅವರು ಗೈರಾಗಿದ್ದರು. ಅವರ ಮನವಿಯನ್ನು ಪುರಸ್ಕರಿಸಿರುವ ಪ್ರಣವ್ ಮೊಹಾಂತಿ, ತಂಡದಿಂದ ಸೌಮ್ಯಲತಾ ಅವರ ಹೆಸರನ್ನು ಕೈಬಿಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ’ ಎಂದು ಗೊತ್ತಾಗಿದೆ.
‘ಜುಲೈ 22ರಂದು ನಿಯೋಜಿಸಿದ್ದ 20 ಅಧಿಕಾರಿಗಳ ಪೈಕಿ, ಐಪಿಎಸ್‌ಯೇತರ ಅಧಿಕಾರಿಯೊಬ್ಬರು ತಂಡದಿಂದ ಕೈಬಿಡುವಂತೆ ಪತ್ರ ಬರೆದಿದ್ದಾರೆ’ ಎಂದು ಮೂಲಗಳು ಹೇಳಿವೆ.
ಹೊಸಬರ ನೇಮಕ ಸಾಧ್ಯತೆ: ‘ಈ ವಿಚಾರವನ್ನು ತನಿಖಾ ತಂಡದ ಮುಖ್ಯಸ್ಥರು, ಸರ್ಕಾರದ ಗಮನಕ್ಕೆ ತಂದಿದ್ದಾರೆ. ಅವರಿಬ್ಬರ ಜಾಗಕ್ಕೆ ಹೊಸ ಅಧಿಕಾರಿಗಳ ನೇಮಕ ಮಾಡುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.
‘ಪತ್ರ ಬರೆದಿರುವುದಾಗಿ ಗೊತ್ತಾಗಿದೆ’
‘ಅಧಿಕೃತವಾಗಿ ಅವರು ನನಗೆ ಮಾಹಿತಿ ನೀಡಿಲ್ಲ. ಆದರೆ, ತನಿಖಾ ತಂಡ ದಿಂದ ಹೊರಗುಳಿಯುವುದಾಗಿ ಪತ್ರ ಬರೆದಿದ್ದಾರೆ ಎಂಬುದು ಗೊತ್ತಾಗಿದೆ. ವೈಯಕ್ತಿಕ ಕಾರಣ ಇದೆ. ಹಾಗಾಗಿ, ತಂಡದಿಂದ ಹೊರಗುಳಿಯುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಒಂದು ವೇಳೆ ಆ ರೀತಿಯಿದ್ದರೆ ಪರಿಶೀಲಿಸಲಾಗುವುದು’ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.