ಬೆಂಗಳೂರು: ‘ದುಬೈನಲ್ಲಿ ಶನಿವಾರದಿಂದಲೂ ಆತಂಕದ ವಾತಾವರಣವಿದೆ. ಹಗಲೆಲ್ಲಾ ಸಹಜವಾಗಿದ್ದರೆ, ರಾತ್ರಿ ವೇಳೆ ಬಂದರು, ವಿಮಾನ ನಿಲ್ದಾಣ ಸಹಿತ ನಿಗದಿತ ತಾಣಗಳ ಮೇಲೆ ದಾಳಿಯಾಗುತ್ತಿದೆ. ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ನಾವು ಸುರಕ್ಷಿತವಾಗಿದ್ದೇವೆ. ಪ್ರವಾಸಕ್ಕೆ ಬಂದಿರುವ ಕನ್ನಡಿಗರ ಸುರಕ್ಷತೆ ಕಡೆಗೂ ಗಮನ ನೀಡುತ್ತಿದ್ದೇವೆ’
ಮೈಸೂರು ಮೂಲದವರಾದರೂ 25 ವರ್ಷಗಳಿಂದ ಅಲ್ಲಿಯೇ ನೆಲೆಸಿ ಕಟ್ಟಡ ನಿರ್ಮಾಣ ಉದ್ಯಮಿಯಾಗಿರುವ, ದುಬೈ ಕನ್ನಡಿಗರ ಕೂಟದ ಅಧ್ಯಕ್ಷ ಎಂ.ಕೆ.ಅರುಣ್‌ಕುಮಾರ್ ಅವರು ಅಲ್ಲಿನ ಚಿತ್ರಣವನ್ನು ಬಿಡಿಸಿಟ್ಟರು.
ದುಬೈನಿಂದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ಅವರು, ‘ಇರಾನ್ ಮೇಲೆ ಅಮೆರಿಕ ದಾಳಿ ತೀವ್ರಗೊಂಡ ನಂತರ ಇಲ್ಲಿಯೂ ದಾಳಿಗಳು ಶುರುವಾಗಿವೆ. ಶನಿವಾರ ರಾತ್ರಿ ಊಟಕ್ಕೆ ಹೋಗಿದ್ದಾಗ ಏಕಾಏಕಿ ದಾಳಿಗಳಾದವು. ವಿಷಯ ತಿಳಿದು ಭಯವೂ ಆಯಿತು. ಅದರಲ್ಲೂ ಅಮೆರಿಕದ ಸೇನಾ ನೆಲೆಗೆ ಸಹಕಾರ ನೀಡುತ್ತಿರುವ ಅಸಮಾಧಾನ ಇರಾನ್‌ಗೆ ಇರುವುದರಿಂದ ಮೊದಲ ಬಾರಿಗೆ ಇಲ್ಲಿ ದಾಳಿಯಾಗುತ್ತಿದ್ದು, ಮೊದಲ ದಿನ ರಾತ್ರಿ ಕತ್ತಲಲ್ಲಿ ಜೆಟ್‌ಗಳ ಹಾರಾಟ, ಕ್ಷಿಪಣಿ ಉಡಾಯಿಸುವುದನ್ನು ನೋಡಿದ್ದರಿಂದಲೂ ಭಯ ಹೆಚ್ಚಿತು. ಸೀಮಿತ ಪ್ರದೇಶ ಗುರಿಯಾಗಿಸಿ ದಾಳಿಯಾಗುತ್ತಿರುವ ಮಾಹಿತಿ ತಿಳಿದಿದ್ದರಿಂದ ಜನ ವಸತಿ ಪ್ರದೇಶದಲ್ಲಿ ಆತಂಕವಿಲ್ಲ’ ಎಂದರು.
‘ಇಲ್ಲಿ 2 ಲಕ್ಷಕ್ಕೂ ಅಧಿಕ ಕನ್ನಡಿಗರು ನೆಲೆಸಿದ್ದಾರೆ. ವಿವಿಧ ಕನ್ನಡ ಕೂಟಗಳು ಇಲ್ಲಿವೆ. ನಾವು 20 ವರ್ಷಗಳಿಂದಲೂ ಸಕ್ರಿಯವಾಗಿದ್ದೇವೆ. ಹಿಂದೆ ಕೋವಿಡ್ ಸಂಕಷ್ಟ, ಪ್ರವಾಹ ಸಂದರ್ಭದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು. ಆದರೆ ಯುದ್ದದ ವಾತಾವರಣ ವಿಭಿನ್ನವಾಗಿರುವುದರಿಂದ ಎಚ್ಚರಿಕೆ ವಹಿಸುತ್ತಿದ್ದು, ವಾಟ್ಸ್ ಆಪ್ ಗುಂಪು ರಚಿಸಿ ಸಂವಹನ ನಡೆಸುತ್ತಿದ್ದೇವೆ. ಸರ್ಕಾರದಿಂದ ಬರುತ್ತಿರುವ ಸೂಚನೆಗಳನ್ನು ರವಾನಿಸುತ್ತಿದ್ದೇವೆ. ಎಲ್ಲರೂ ಸುರಕ್ಷಿತರಾಗಿದ್ದಾರೆ. ಕುಟುಂಬದವರೊಂದಿಗೂ ಮಾತನಾಡಿದ್ದೇವೆ’ ಎಂದು ಹೇಳಿದರು.
‘ದುಬೈ ಸ್ಥಳೀಯ ಆಡಳಿತವೂ ಸಹಾಯವಾಣಿ ಆರಂಭಿಸಿ ಎಲ್ಲಾ ಮುನ್ನೆಚ್ಚರಿಕೆ ಕೈಗೊಂಡಿದೆ. ಭಾರತೀಯ ರಾಯಭಾರ ಕಚೇರಿ ಮೂಲಕವೂ ಸಹಾಯವಾಣಿ, ಇ ಮೇಲ್ ಐಡಿ ನೀಡಿ ಸಂಪರ್ಕಕ್ಕೆ ಸೂಚಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.
‘ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಡಾ.ಆರತಿ ಕೃಷ್ಣ ಹಿಂದಿನಿಂದಲೂ ಸಂಪರ್ಕದಲ್ಲಿದ್ದಾರೆ. ಎಲ್ಲ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ. ನೇರವಾಗಿ ಅಲ್ಲದೇ, ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕಿಸುವ ಕನ್ನಡಿಗರ ಹಿತರಕ್ಷಣೆಗೆ ಒತ್ತು ನೀಡುತ್ತಿದ್ದೇವೆ’ ಎಂದು ಅರುಣ್‌ಕುಮಾರ್ ತಿಳಿಸಿದರು.
‘ಹಲವಾರು ಕನ್ನಡಿಗರು ಇಲ್ಲಿಗೆ ಪ್ರವಾಸ ಬಂದಿದ್ದಾರೆ. ಅವರು ಹೊಟೇಲ್‌ಗಳಲ್ಲಿ ತಂಗಿದ್ದು, ಕೆಲವರನ್ನು ಖುದ್ದು ಭೇಟಿ ಮಾಡಿ ಬಂದಿದ್ದೇವೆ. ಇತರೆ ಒಕ್ಕೂಟದವರು ಭೇಟಿ ಮಾಡಿ ಅವರಿಗೆ ಆತ್ಮವಿಶ್ವಾಸ ತುಂಬುತ್ತಿದ್ದಾರೆ. ವಿಮಾನ ಸಂಚಾರ ಸ್ಥಗಿತಗೊಂಡಿದೆ. ಹೊರಗಡೆ ಗುಂಪಾಗಿ ಹೋಗದಂತೆ ಸೂಚನೆ ನೀಡುತ್ತಿರುವುದರಿಂದ ಪ್ರವಾಸಿಗರೂ ಹೊಟೇಲ್‌ನಲ್ಲಿಯೇ ಉಳಿದಿದ್ದಾರೆ’ ಎಂದು
ದುಬೈನಲ್ಲಿ ನೆಲೆಸಿರುವ ಕನ್ನಡಿಗರ ಜತೆಗೆ ಪ್ರವಾಸಕ್ಕೆ ಬಂದಿರುವವರೂ ಆತಂಕ ಪಡುವ ಅಗತ್ಯವಿಲ್ಲ. ದುಬೈ ಸುರಕ್ಷಿತ ಸ್ಥಳವಾಗಿರುವುದರಿಂದ ಆತಂಕ ಬೇಡ. ನಾವು ನಿಮ್ಮೊಂದಿಗೆ ಇದ್ದೇವೆ– ಎಂ.ಕೆ.ಅರುಣ್‌ಕುಮಾರ್, ಅಧ್ಯಕ್ಷ ದುಬೈ ಕನ್ನಡಿಗರ ಕೂಟ
ಇಲ್ಲಿಗೆ ಕರೆ ಮಾಡಿ
ದುಬೈನಲ್ಲಿ ಸಿಲುಕಿರುವ ಕನ್ನಡಿಗರು ಹಾಗೂ ಅಲ್ಲಿ ನೆಲೆಸಿರುವವರು ಕರ್ನಾಟಕದಲ್ಲಿರುವ ಅವರ ಸಂಬಂಧಿಕರ ನೆರವಿಗೆ ಈ ನಂಬರ್‌ಗೆ ಕರೆಮಾಡಬಹುದು.
+971 56 9916774 +971 52 929 7799 +971 543090571 ಟೋಲ್ ಫ್ರೀ ನಂಬರ್: 80046342
ನೋಂದಣಿಗೆ: https://www.cgidubai.gov.in/register/
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.