ADVERTISEMENT

ಜಿಕೆವಿಕೆ ಆವರಣದಲ್ಲಿ ರೈತ ಸಂತೆ ಆಯೋಜನೆ: ಮೌಲ್ಯವರ್ಧಿತ ಉತ್ಪನ್ನಗಳ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 14:19 IST
Last Updated 23 ಆಗಸ್ಟ್ 2025, 14:19 IST
ಜಿಕೆವಿಕೆ ಆವರಣದಲ್ಲಿ ಶನಿವಾರ ನಡೆದ ರೈತ ಸಂತೆಯಲ್ಲಿ ಸಾರ್ವಜನಿಕರು ತರಕಾರಿ ಖರೀದಿಸಿದರು
ಜಿಕೆವಿಕೆ ಆವರಣದಲ್ಲಿ ಶನಿವಾರ ನಡೆದ ರೈತ ಸಂತೆಯಲ್ಲಿ ಸಾರ್ವಜನಿಕರು ತರಕಾರಿ ಖರೀದಿಸಿದರು   

ಬೆಂಗಳೂರು: ನುಗ್ಗೆ ಸೊಪ್ಪಿನ ಚಟ್ನಿಪುಡಿ, ಹಲಸು, ಮಾವು ಮತ್ತು ಬೆಟ್ಟದ ನೆಲ್ಲಿ ಜಾಮ್, ಹಲಸಿನ ಉಪ್ಪಿನಕಾಯಿ, ಆಲಂಕಾರಿಕ ಮೀನುಗಳು ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳು ರೈತ ಸಂತೆಯಲ್ಲಿ ಸಾರ್ವಜನಿಕರನ್ನು ಸೆಳೆದವು. 

ಜಿಕೆವಿಕೆ ಆವರಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಶನಿವಾರ ಆಯೋಜಿಸಿದ್ದ ರೈತ ಸಂತೆಯಲ್ಲಿ, ಹೂವು, ಹಣ್ಣು, ತೆಂಗಿನಕಾಯಿ, ತರಕಾರಿಗಳ ಮಾರಾಟ ಜೋರಾಗಿತ್ತು. ಮಾಲೂರಿನ ‘ಅಮೃತ್ ಆಹಾರ ಉತ್ಪನ್ನಗಳು’ ಎಂಬ ಸ್ವಸಹಾಯ ಸಂಘದ ಚರಿ ಮಿಲೆಟ್‌ ಮಾಲ್ಟ್‌ ಎಂಬ ಉತ್ಪನ್ನ ಗ್ರಾಹಕರ ಗಮನ ಸೆಳೆಯಿತು.  

ಕೊಯ್ಲೋತ್ತರ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಯೋಜನೆಯ ಅಡಿಯಲ್ಲಿ ಸಿರಿಧಾನ್ಯಗಳಿಂದ ಹರಳು ಮಾಡುವ ಯಂತ್ರ, ಮುಸುಕಿನ ಜೋಳದ ತೆನೆಗಳಿಂದ ಕಾಳು ಬಿಡಿಸುವ ಯಂತ್ರ ಮತ್ತು ಹರಳು ಹೊಟ್ಟು ತೆಗೆಯುವ ಯಂತ್ರಗಳು ಗ್ರಾಹಕರ ಆಕರ್ಷಣೆಯಾಗಿದ್ದವು. ಮಕ್ಕಳು ಎತ್ತಿನ ಬಂಡಿಯ ಸವಾರಿ ಮಾಡಿದರು. ಸಂತೆಯ ಅಂಗಳದಲ್ಲಿ ವಿವಿಧ ಜಾನುವಾರುಗಳು ಗಮನ ಸೆಳೆದವು.

ADVERTISEMENT

ಬೆಂಗಳೂರು ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಬಿತ್ತನೆ ಬೀಜಗಳು, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಸಾವಯವ ಉತ್ಪನ್ನಗಳು, ವಿವಿಧ ಸಸ್ಯಾಭಿವೃದ್ಧಿ ಸಾಮಗ್ರಿಗಳು, ಪ್ರಮುಖವಾಗಿ ತೋಟಗಾರಿಕಾ ಬೆಳೆಗಳಾದ ಹಣ್ಣುಗಳಾದ ಮಾವು, ನೇರಳೆ, ಹಲಸು, ಸುಗಂಧ ಮತ್ತು ಔಷಧೀಯ ಸಸ್ಯಗಳು, ಜೈವಿಕ ಗೊಬ್ಬರಗಳು ಕೃಷಿ ಯಂತ್ರೋಪಕರಣಗಳ ಖರೀದಿಗೆ ಅವಕಾಶ ನೀಡಲಾಗಿತ್ತು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ್ ಅವರು ರೈತ ಸಂತೆಯನ್ನು ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.