ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಎಸ್‌ಯುಸಿಐನ ಸದಸ್ಯರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಅವಕಾಶ ನೀಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯೂನಿಸ್ಟ್‌ನ (ಎಸ್‌ಯುಸಿಐ) ಸದಸ್ಯರು ಬುಧವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಎಸ್‌ಯುಸಿಐ ಕಮ್ಯೂನಿಸ್ಟ್ ಪಕ್ಷದ ಪೊಲಿಟ್ ಬ್ಯೂರೊ ಸದಸ್ಯ ಕೆ. ರಾಧಾಕೃಷ್ಣ ಮಾತನಾಡಿ, ‘ದುಡಿಯುವ ಜನರಿಗೆ ಶಾಂತಿಯುತ ಬದುಕುವ ಅವಕಾಶ ನೀಡಬೇಕು. ಇಸ್ರೇಲ್ ಪ್ಯಾಲೆಸ್ಟೀನ್, ರಷ್ಯಾ–ಉಕ್ರೇನ್‌ನಂತಹ ಯುದ್ಧಗಳಿಗೆ ಬಂಡವಾಳಗಾರರ ಮಾರುಕಟ್ಟೆಯ ದಾಹವೇ ಕಾರಣ. ದೇಶದ ಜನರ ಜೀವನ ಸಂಕಟಮಯವಾಗಿದೆ. ಆದರೆ, ಸರ್ಕಾರಗಳು ಅದಾನಿ, ಅಂಬಾನಿಯಂತಹ ಶ್ರೀಮಂತರಿಗೆ ಅನುಕೂಲವಾಗುವ ಕಾರ್ಪೊರೇಟ್ ಪರ ನೀತಿಗಳನ್ನು ರೂಪಿಸುತ್ತಿವೆ’ ಎಂದು ಆರೋಪಿಸಿದರು.
‘ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಒದಗಿಸಬೇಕು. ಉದ್ಯೋಗ ಖಾತ್ರಿ ಕೂಲಿಯ ದಿನಗಳನ್ನು ಹೆಚ್ಚಿಸಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಉದ್ಯೋಗಾವಕಾಶ ನೀಡುವುದು ಹಾಗೂ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು. ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರಿಗೆ ಕಾರ್ಮಿಕರ ಸ್ಥಾನಮಾನ ನೀಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಸ್‌ಯುಸಿಐ ಕಮ್ಯೂನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಸದಸ್ಯೆ ಕೆ. ಉಮಾ, ರಾಜ್ಯ ಸೆಕ್ರೆಟೇರಿಯೆಟ್ ಸದಸ್ಯ ರಾಮಾಜಿಂನಪ್ಪ, ಕೆ. ಸೋಮಶೇಖರ್, ಎಂ. ಶಶಿಧರ್, ಎಂ.ಎನ್. ಶ್ರೀರಾಮ್, ಟಿ.ಎಸ್. ಸುನಿತ್ ಕುಮಾರ್, ಬಿ.ಆರ್. ಅಪರ್ಣ, ವಿ.ಎನ್. ರಾಜಶೇಖರ್, ಬಿ. ರವಿ, ವಿಜ್ಞಾನಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.