ADVERTISEMENT

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ‘ಡಿ ಬಾಸ್‌’ ಘೋಷಣೆಗೆ ಸಿ.ಎಂ ಪೆಚ್ಚು!

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 23:15 IST
Last Updated 3 ಮಾರ್ಚ್ 2022, 23:15 IST
Chief Minister Basavaraj Bommai addressing at the inauguration of 13th Bengaluru international film festival at the GKVK in Bengaluru on Thursday. DH Photo by BK Janardhan
Chief Minister Basavaraj Bommai addressing at the inauguration of 13th Bengaluru international film festival at the GKVK in Bengaluru on Thursday. DH Photo by BK Janardhan   

ಬೆಂಗಳೂರು: ಚಿತ್ರಾಭಿಮಾನ, ಅಭಿಮಾನಿಗಳ ಜೈಕಾರ, ರಾಜಕೀಯ ಮೇಳ, ಬೇಡಿಕೆಗಳ ಪಟ್ಟಿ ಮತ್ತು ಭರವಸೆಗಳ ಮಹಾಪೂರಗಳ ನಡುವೆ 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗುರುವಾರ ಚಾಲನೆ ಸಿಕ್ಕಿತು.

ಕೃಷಿ ವಿಶ್ವವಿದ್ಯಾಲಯದ ಡಾ.ಬಾಬು ರಾಜೇಂದ್ರ ಪ್ರಸಾದ್‌ ಸಮ್ಮೇಳನ ಸಭಾಂಗಣದಲ್ಲಿ ಸಂಜೆ 4.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸುಮಾರು ಒಂದು ಗಂಟೆಯಷ್ಟು ತಡವಾಗಿ ಆರಂಭವಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಷಣ ಆರಂಭಿಸಿದ ಕೆಲ ಕ್ಷಣಗಳಲ್ಲಿ ನಟ ದರ್ಶನ್‌ ಬಂದರು.

ಆ ವೇಳೆಗೆ ಸಭಾಂಗಣದಲ್ಲಿದ್ದ ಅಭಿಮಾನಿಗಳೆಲ್ಲಾ ‘ಡಿ ಬಾಸ್‌... ಡಿ ಬಾಸ್‌...’ ಎಂದು ಜೈಕಾರ ಹಾಕಲಾರಂಭಿಸಿದರು. ದರ್ಶನ್‌ ವೇದಿಕೆಯಲ್ಲಿ ಕುಳಿತರೂ ಕೂಗು ಕಡಿಮೆಯಾಗಲಿಲ್ಲ. ಪೆಚ್ಚಾದ ಮುಖ್ಯಮಂತ್ರಿ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್‌ ತಮ್ಮ ಆಸನದಲ್ಲಿ ಕುಳಿತರು.

ADVERTISEMENT

ಬಳಿಕ, ಮೈಕ್‌ ಬಳಿ ತೆರಳಿದ ದರ್ಶನ್‌, ‘ಕರ್ನಾಟಕದ ಮುಖ್ಯಮಂತ್ರಿ ನಮ್ಮೆಲ್ಲರಿಗಿಂತ ದೊಡ್ಡವರು. ಅವರು ಮಾತನಾಡುವಾಗ ಮರ್ಯಾದೆ ಕೊಡಬೇಕು. ಎಲ್ಲರೂ ಸುಮ್ಮನಿರಬೇಕು’ ಎಂದು ಅಭಿಮಾನಿಗಳಿಗೆ ಸೂಚಿಸಿದರು. ಆ ಬಳಿಕ ಮುಖ್ಯಮಂತ್ರಿ ಮಾತು ಮುಂದುವರಿಸಿದರು.

‘ದರ್ಶನ್‌ ನಮ್ಮ ಹುಡುಗ. ನಿಮಗಿಂತ ನನಗೆ ಆತನ ಬಗ್ಗೆ ಚೆನ್ನಾಗಿ ಗೊತ್ತು. ಅವನಿಗಿರುವ ವನ್ಯಜೀವಿಗಳ ಮೇಲಿನ ಕಾಳಜಿ, ಅವನ
ವನ್ಯಜೀವಿ ಛಾಯಾಗ್ರಹಣ ನನಗೆ ತುಂಬಾ ಇಷ್ಟ’ ಎಂದು ಮುಖ್ಯಮಂತ್ರಿ ಹೇಳಿದರು.

ಸಚಿವ ಮುನಿರತ್ನ ಮಾತನಾಡಿ, ‘ರಾಜ್ಯ ಬಜೆಟ್‌ನಲ್ಲಿಚಿತ್ರೋದ್ಯಮಕ್ಕೆ ಎಂದೂ ಮರೆಯಲಾಗದ ಕೊಡುಗೆ ಸಿಗಲಿದೆ’ ಎಂದು ಹೇಳಿದರು.

ಕಾರ್ಯಕ್ರಮ ನಡೆಯುವ ವೇಳೆ ಸಭಾಂಗಣದಲ್ಲಿ ಒಂದು ಗುಂಪು ಸಿ.ಎಂಗೆ ಜೈ ಎನ್ನುತ್ತಲೂ, ಇನ್ನೊಂದು ಗುಂಪು ವಿಷ್ಣುವರ್ಧನ್‌ಗೆ ಜೈಕಾರ ಹಾಕುತ್ತಲೂ ಮತ್ತೊಂದು ಗುಂಪು ಡಿ... ಬಾಸ್‌ ಎಂದು ಕೂಗುತ್ತಲೂ ಪೈಪೋಟಿಗಿಳಿದಿದ್ದವು. ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಪ್ರಸ್ತಾಪ ಬಂದಾಗಲಂತೂ ಗೌರವಪೂರ್ಣವಾದ ನೀರವ ಮೌನ ಸಭಾಂಗಣದಲ್ಲಿ ಆವರಿಸುತ್ತಿತ್ತು.

ಸಭಾಂಗಣದ ಹೊರಗೆ ಜಗ್ಗಲಿಗೆ ಮೇಳ, ಬೇಡರ ಕುಣಿತ, ಗೊರವರ ಕುಣಿತ, ಯಕ್ಷಗಾನದ ವೇಷಗಳು ಕಲಾ ಪ್ರದರ್ಶನದ ಮೂಲಕ
ಗಣ್ಯರನ್ನು ಸ್ವಾಗತಿಸಿದವು. ಸಭಾ ಕಾರ್ಯಕ್ರಮದ ಬಳಿಕ ಕನ್ನಡದ ಸೂಪರ್‌ಹಿಟ್ ಹಾಡುಗಳಿಗೆ ಕಲಾವಿದರು ಹೆಜ್ಜೆ ಹಾಕಿದರು. ವೇದಿಕೆಯ ತೆರೆಯ ಮೇಲೆ ಆಯಾ ಚಿತ್ರಗಳ ದೃಶ್ಯ, ವರ್ಣವೈಭವ ಮೂಡಿತು. ಪ್ರತಿ ಹಾಡಿನಲ್ಲಿ ತಮ್ಮ ನೆಚ್ಚಿನ ನಟ ನಟಿಯರನ್ನು ಕಂಡಷ್ಟೇ ಪುಳಕಗೊಂಡ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.