ADVERTISEMENT

ಜಕ್ಕೂರು | ಹಸಿರು ನೆಲೆಯಾಗಿಯೇ ಉಳಿಯಲಿ: ತಜ್ಞರು, ಪರಿಸರ ಕಾರ್ಯಕರ್ತರ ಒತ್ತಾಸೆ

ತರಬೇತಿ ಶಾಲೆ, ಸ್ವಚ್ಛಗಾಳಿ ನೀಡುವ ಪ್ರದೇಶವಾಗಿ ಸಂರಕ್ಷಿಸಿ: ಪರಿಸರ ಕಾರ್ಯಕರ್ತರ ಆಗ್ರಹ

ಆರ್. ಮಂಜುನಾಥ್
Published 18 ಡಿಸೆಂಬರ್ 2025, 0:30 IST
Last Updated 18 ಡಿಸೆಂಬರ್ 2025, 0:30 IST
ಜಕ್ಕೂರು ವಾಯುನೆಲೆ
ಜಕ್ಕೂರು ವಾಯುನೆಲೆ   

ಬೆಂಗಳೂರು: ಮೈಸೂರು ಮಹಾರಾಜರು ವಿಧಿಸಿದ್ದ ಷರತ್ತನ್ನು ಪಾಲಿಸುವ ಮೂಲಕ ಜಕ್ಕೂರಿನಲ್ಲಿರುವ ವೈಮಾನಿಕ ತರಬೇತಿ ಶಾಲೆ ಹಾಗೂ ಜಕ್ಕೂರು ವಾಯುನೆಲೆಯನ್ನು ಉಳಿಸಿಕೊಳ್ಳಬೇಕು. ಅಲ್ಲದೆ ನಗರಕ್ಕೆ ಅತ್ಯಗತ್ಯವಾಗಿರುವ ‘ಹಸಿರು ನೆಲೆಯನ್ನಾಗಿ’ ಸಂರಕ್ಷಿಸಲು ಸರ್ಕಾರ ಮುಂದಾಗಬೇಕು ಎಂಬುದು ತಜ್ಞರು, ಪರಿಸರ ಕಾರ್ಯಕರ್ತರ ಒತ್ತಾಸೆಯಾಗಿದೆ.

ಬೃಹತ್‌ ಕಟ್ಟಡಗಳ ಕಾಂಕ್ರೀಟ್ ಕಾಡಾಗುತ್ತಿರುವ ಬೆಂಗಳೂರು ನಗರದ ಉತ್ತರ ಭಾಗದಲ್ಲಿ ಇರುವ ಜಕ್ಕೂರು ವಾಯುನೆಲೆ, ಹೆಲಿಕಾಪ್ಟರ್‌ ಹಾಗೂ ಸಣ್ಣ ವಿಮಾನಗಳ ಹಾರಾಟದ ತಾಣವಾಗಿರದೆ, ನಗರದ ಶ್ವಾಸಕೋಶದಂತೆ ಇದೆ. 75 ವರ್ಷಗಳ ಇತಿಹಾಸ ಇರುವ 218 ಎಕರೆಯ ಈ ಜಾಗದ ಬಗ್ಗೆ ಸರ್ಕಾರ ವಾಣಿಜ್ಯ ಉದ್ದೇಶದಿಂದ ಆಲೋಚಿಸದೆ, ಪರಿಸರ ಕಾಳಜಿಯಿಂದ ನೋಡಬೇಕು. ಇದು ನಗರಕ್ಕೆ ಅತ್ಯಮೂಲ್ಯ ಹಸಿರು– ಪಾರಂಪರಿಕ ತಾಣವಾಗಲಿದೆ ಎಂಬುದು ಪರಿಸರ ಕಾರ್ಯಕರ್ತರ ಅಭಿಪ್ರಾಯ.

1948ರಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿ ಆರಂಭವಾದ ವಾಯುನೆಲೆ, ನಾಗರಿಕ ವಿಮಾನಯಾನ ಇತಿಹಾಸದ ಆರಂಭಕ್ಕೆ ಸಾಕ್ಷಿಯಾಗಿದೆ. ಐತಿಹಾಸಿಕ ಮಹತ್ವವುಳ್ಳ ಜಾಗವನ್ನು ರಕ್ಷಿಸುವುದು ಸಾಂಸ್ಕೃತಿಕ ಜವಾಬ್ದಾರಿಯಾಗಿದೆ. ಜಕ್ಕೂರು ಕೆರೆಯೂ ಸಮೀಪದಲ್ಲೇ ಇರುವುದರಿಂದ ಈ ಪ್ರದೇಶದಲ್ಲಿ ನೂರಾರು ಜಾತಿಯ ಹಕ್ಕಿಗಳಿಗೆ, ಸಣ್ಣಪುಟ್ಟ ಪ್ರಾಣಿಗಳಿಗೆ ಮತ್ತು ವೈವಿಧ್ಯಮಯ ಸಸ್ಯರಾಶಿಗೆ ಆಸರೆಯಾಗಿದೆ. ನಗರದ ತಾಪಮಾನ ಏರುತ್ತಿರುವ ಈ ದಿನಗಳಲ್ಲಿ, ಇಂತಹ ವಿಶಾಲವಾದ ಮುಕ್ತ ಪ್ರದೇಶಗಳು ಹವಾನಿಯಂತ್ರಕಗಳಂತೆ ಕೆಲಸ ಮಾಡುತ್ತವೆ. ಇದನ್ನು ಅಭಿವೃದ್ಧಿಯ ಹೆಸರಿನಲ್ಲಿ ಕಟ್ಟಡಗಳನ್ನಾಗಿ ಪರಿವರ್ತಿಸಿದರೆ, ಅಂತರ್ಜಲ ಮರುಪೂರಣಕ್ಕೆ ದೊಡ್ಡ ಹೊಡೆತ ಬೀಳುತ್ತದೆ ಮತ್ತು ನಗರದ ಪರಿಸರ ಸಮತೋಲನ ಏರುಪೇರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಜಕ್ಕೂರು ವಾಯು ನೆಲೆಯನ್ನು ‘ಲಿವಿಂಗ್ ಮ್ಯೂಸಿಯಂ’ ಅಥವಾ ‘ಹೆರಿಟೇಜ್ ಗಾರ್ಡನ್’ ಮಾದರಿಯಲ್ಲಿ ಅಭಿವೃದ್ಧಿಪಡಿಸಿದರೆ, ವಿಮಾನಯಾನದ ಇತಿಹಾಸವನ್ನು ಸಾರುವ ವಸ್ತುಸಂಗ್ರಹಾಲಯ, ಸಾರ್ವಜನಿಕರಿಗೆ ವಿಶಾಲವಾದ ಉದ್ಯಾನ ಮತ್ತು ಪರಿಸರ ಸ್ನೇಹಿ ನಡಿಗೆ ಪಥಗಳನ್ನು ನಿರ್ಮಿಸಬಹುದಾಗಿದೆ ಎಂದಿದ್ದಾರೆ.

‘ಅಭಿವೃದ್ಧಿ ಎಂದರೆ ಕೇವಲ ಎತ್ತರದ ಕಟ್ಟಡಗಳಲ್ಲ, ಬದಲಿಗೆ ನಮ್ಮ ಇತಿಹಾಸ ಮತ್ತು ಹಸಿರನ್ನು ಉಳಿಸಿಕೊಳ್ಳುವುದೂ ಆಗಿದೆ. ಜಕ್ಕೂರು ವಾಯುನೆಲೆಯನ್ನು ಕಾಂಕ್ರೀಟ್ ಆಕ್ರಮಣದಿಂದ ರಕ್ಷಿಸಿ, ಅದನ್ನು ಮುಂದಿನ ಪೀಳಿಗೆಗಾಗಿ ಹಸಿರು ಮತ್ತು ಪಾರಂಪರಿಕ ತಾಣವನ್ನಾಗಿ ಉಳಿಸಿಕೊಳ್ಳಬೇಕು. ಪರಿಸರವನ್ನು ರಕ್ಷಿಸಿಕೊಳ್ಳಬೇಕೆಂಬ ದೃಷ್ಟಿಯಲ್ಲಿ ಸರ್ಕಾರ ಆಲೋಚಿಸಬೇಕು. ಬೃಹತ್‌ ಕಟ್ಟಡಗಳನ್ನು ನಿರ್ಮಿಸಲು, ಕ್ರೀಡಾ ಸಂಕೀರ್ಣಗಳಿಗೆ ಬೇರೆಡೆ ಅವಕಾಶ ಮಾಡಿಕೊಡಬಹುದು. ಆದರೆ, ಇಂತಹ ಐತಿಹಾಸಿಕ ಸ್ಥಳವನ್ನು ಕಟ್ಟಡಗಳಿಗಾಗಿ ಬಲಿ ಕೊಡಬಾರದು’ ಎಂದು ಪರಿಸರಕ್ಕಾಗಿ ನಾವು ಸಂಘಟನೆಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಹೇಳಿದರು.

ಖಾಸಗಿ ವಿಮಾನ ಸಂಸ್ಥೆಗಳು ಇಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಲಘು ವಿಮಾನಗಳ ಹಾರಾಟ ಇಲ್ಲಿದೆ. ಹೆಲಿಕಾಪ್ಟರ್‌ಗಳ ಹಾರಾಟಕ್ಕೂ ಇದೇ ಪ್ರಮುಖ ತಾಣ. ಹೀಗಾಗಿ, ಲಘು ವಿಮಾನ, ಹೆಲಿಕಾಪ್ಟರ್‌ಗಳ ಹಾರಾಟಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಬೇಕು. ಏರ್‌ ಆಂಬುಲೆನ್ಸ್‌ ತಾಣವನ್ನಾಗಿಯೂ ಇದನ್ನು ಅಭಿವೃದ್ಧಿಗೊಳಿಸಬಹುದು ಎಂಬ ಸಲಹೆಗಳನ್ನೂ ತಜ್ಞರು ನೀಡಿದ್ದಾರೆ.

ಗಿರವಿ ಇಡಬೇಡಿ: ಕ್ಯಾಪ್ಟನ್‌ ಗೋಪಿನಾಥ್‌

‘ಜಕ್ಕೂರು ವಾಯುನೆಲೆ ಪಾರಂಪರಿಕವಾದ ತಾಣ. ಮಹಾರಾಜರು ದೂರದೃಷ್ಟಿಯಿಂದ ಈ ಜಾಗವನ್ನು ಕೊಟ್ಟಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಇದನ್ನು ರಿಯಲ್‌ ಎಸ್ಟೇಟ್‌ನವರಿಗೆ ಗಿರವಿ ಇಡಬಾರದು’ ಎಂದು  ಕ್ಯಾಪ್ಟನ್ ಗೋಪಿನಾಥ್ ಅಭಿಪ್ರಾಯಪಟ್ಟರು.  ‘ವೈಮಾನಿಕ ತರಬೇತಿ ಶಾಲೆಯನ್ನು ಸ್ಥಳಾಂತರ ಮಾಡುವ ಸಂಬಂಧ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಇದನ್ನು ಸ್ಥಳಾಂತರ ಮಾಡಬಾರದು. ತರಬೇತಿ ಶಾಲೆಯನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು. ‘ರನ್‌ವೇ ಅನ್ನು ವಿಸ್ತರಿಸಿ ಇದನ್ನು ಅಭಿವೃದ್ಧಿಪಡಿಸಿದರೆ ಇಲ್ಲಿಂದಲೇ ಸಣ್ಣ ವಿಮಾನಗಳ ಸಂಚಾರಕ್ಕೆ ಅನುಕೂಲವಾಗಲಿದೆ. ಸರ್ಕಾರ ರಿಯಲ್‌ ಎಸ್ಟೇಟ್‌ ಲಾಬಿಗೆ ಮಣಿಯದೆ ಈ ಜಾಗವನ್ನು ಉಳಿಸಿಕೊಳ್ಳಬೇಕು’ ಎಂಬುದು ಅವರ ಆಗ್ರಹ.

ರನ್‌ವೇ ವಿಸ್ತರಣೆಯ ಭರವಸೆ ನೀಡಿದ್ದ ಸಿದ್ದರಾಮಯ್ಯ

ಜಕ್ಕೂರು ವಾಯುನೆಲೆಯ ರನ್ ವೇ ವಿಸ್ತರಿಸಲು ಮತ್ತು ಜಾಗವನ್ನು ಸಂಪೂರ್ಣವಾಗಿ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು ಇರುವ ಅವಕಾಶಗಳ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್‌ನಲ್ಲಿ ತಿಳಿಸಿದ್ದರು. ವೈಮಾನಿಕ ತರಬೇತಿ ಶಾಲೆ ಮತ್ತು ವಾಯುನೆಲೆ ಅಭಿವೃದ್ಧಿ ಸಂಬಂಧ ಮುಖ್ಯ ಕಾರ್ಯದರ್ಶಿ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ವೈಮಾನಿಕ ತರಬೇತಿ ಶಾಲೆ ನಡೆಸುವಂತೆ ಕೋರ್ಟ್‌ ಆದೇಶ ಇದೆ. ಇದರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದೂ ಸಿದ್ದರಾಮಯ್ಯ ಹೇಳಿದ್ದರು. ಆದರೆ ನಂತರದ ಬೆಳವಣಿಗೆಗಳಲ್ಲಿ ತರಬೇತಿ ಶಾಲೆಯನ್ನು ಸ್ಥಳಾಂತರಿಸಿ ವಾಯುನೆಲೆಯನ್ನೇ ಮುಚ್ಚಲು ಅಧಿಕಾರಿಗಳು ಪ್ರಸ್ತಾವ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.