
ಜಕ್ಕೂರು ವೈಮಾನಿಕ ತರಬೇತಿ ಶಾಲೆ
ಬೆಂಗಳೂರು: ಜಕ್ಕೂರು ವಾಯುನೆಲೆ ಪ್ರದೇಶದಲ್ಲಿ ಇರುವ ವೈಮಾನಿಕ ತರಬೇತಿ ಶಾಲೆಯನ್ನು ಮುಚ್ಚಿದರೆ ಅಥವಾ ಸ್ಥಳಾಂತರ ಮಾಡಿದರೆ, ವಾಯುನೆಲೆ ಪ್ರದೇಶದ 217 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಬೇಕಾಗುತ್ತದೆ.
ವೈಮಾನಿಕ ತರಬೇತಿ ಶಾಲೆ ಆರಂಭಿಸುವ ಉದ್ದೇಶಕ್ಕಾಗಿಯೇ ವಿಶೇಷ ಆದೇಶದ ಮೂಲಕ ಮೈಸೂರು ಮಹಾರಾಜರು ಅರಣ್ಯ ಭೂಮಿಯನ್ನು ನೀಡಿದ್ದರು. ಆ ಉದ್ದೇಶ ಬದಲಾದರೆ, ಭೂಮಿಯನ್ನು ಬೇರೆ ಯಾವುದೇ ಯೋಜನೆಗೆ ಉಪಯೋಗಿಸುವಂತಿಲ್ಲ.
ದೇಶದಲ್ಲೇ ಮೊದಲ ವೈಮಾನಿಕ ತರಬೇತಿ ಶಾಲೆಯನ್ನು ಸ್ಥಾಪಿಸುವ ಉದ್ದೇಶದಿಂದ ಅರಣ್ಯ ಭೂಮಿಯಾಗಿದ್ದ ಜಕ್ಕೂರು– ಅಲ್ಲಾಳಸಂದ್ರದ ಭೂಮಿಯನ್ನು ವಾಯುನೆಲೆಗಾಗಿ ನೀಡಲು ಮೈಸೂರು ಮಹಾರಾಜರು ವಿಶೇಷ ಆದೇಶ ಹೊರಡಿಸಿದ್ದರು.
1935ರ ಮೈಸೂರಿನ ಅರಣ್ಯ ಕಾಯ್ದೆಯಂತೆ, ಬೆಂಗಳೂರಿನ ಜಕ್ಕೂರು– ಅಲ್ಲಾಳಸಂದ್ರದ ಸರ್ವೆ ನಂಬರ್‌ಗಳಲ್ಲಿ 377 ಎಕರೆ 2 ಗುಂಟೆ ಅರಣ್ಯ ಭೂಮಿಯ ಭಾಗವಾಗಿತ್ತು. ಮೈಸೂರು ಮಹಾರಾಜರ ನಿರ್ಣಯದಂತೆ, 1940ರ ಸೆಪ್ಟೆಂಬರ್ 17ರಂದು ವಿಶೇಷ ಆದೇಶ (ಎಫ್ 1545–ಎಸ್– ಎಫ್‌ಟಿ. 58–40–2) ಹೊರಡಿಸಿ, 199 ಎಕರೆ 14 ಗುಂಟೆ ಪ್ರದೇಶವನ್ನು ಜಕ್ಕೂರು ವೈಮಾನಿಕ ತರಬೇತಿ ಶಾಲೆಗೆ ನೀಡಲಾಯಿತು.
ತದ ನಂತರ, ಇನ್ನೂ 17 ಎಕರೆಯನ್ನು ಹೆಚ್ಚುವರಿಯಾಗಿ ನೀಡಿ, 217 ಎಕರೆ ಪ್ರದೇಶದಲ್ಲಿ ಜಕ್ಕೂರು ವಾಯುನೆಲೆ ಸ್ಥಾಪಿಸಲು ಯೋಜನೆ ರೂಪಿಸಲಾಯಿತು. 1948ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಈ ಶಾಲೆಯನ್ನು
ಉದ್ಘಾಟಿಸಿದ್ದರು.
‘ಜಕ್ಕೂರು ವೈಮಾನಿಕ ತರಬೇತಿ ಶಾಲೆ ಇರುವವರೆಗೂ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಅದನ್ನು ಮುಚ್ಚಿ ಬೇರೆ ಯಾವುದೇ ರೀತಿಯ ಚಟುವಟಿಕೆ ಯನ್ನು ಅಲ್ಲಿ ನಡೆಸಿದ್ದೇ ಆದಲ್ಲಿ ಆಗ ಅರಣ್ಯ ಕಾಯ್ದೆ ಮುಂಚೂಣಿಗೆ ಬರುತ್ತದೆ. ಮಹಾರಾಜರ ಉದ್ದೇಶಕ್ಕೆ ವಿರುದ್ಧವಾಗಿ ಬೇರೆ ಚಟುವಟಿಕೆಗಳು ಆರಂಭವಾದರೆ, ಅರಣ್ಯ ಕಾಯ್ದೆಯಂತೆ ಜಕ್ಕೂರು ವಾಯುನೆಲೆ ಪ್ರದೇಶವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಳ್ಳಬಹುದು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಹಸಿರು ಪರಿಸರ ಉಳಿಯಲಿ:
‘ಬೆಂಗಳೂರಿನ ಉತ್ತರ ಭಾಗದಲ್ಲಿ ಬರೀ ಕಾಂಕ್ರೀಟ್ ನಿರ್ಮಾಣವಾಗಿದೆ. ಜಕ್ಕೂರು ವಾಯುನೆಲೆ ಪ್ರದೇಶ ‘ಶ್ವಾಸಕೋಶ’ದಂತೆ ಕಾರ್ಯನಿರ್ವಹಿಸುತ್ತಿದ್ದು, ಒಂದಷ್ಟು ಸ್ವಚ್ಛಗಾಳಿಯನ್ನು ಒದಗಿಸುತ್ತಿದೆ. ಈ ಪ್ರದೇಶದಲ್ಲೂ ಬೃಹತ್ ಕಟ್ಟಡಗಳು ನಿರ್ಮಾಣವಾದರೆ, ಹವಾಮಾನ ವೈಪರೀತ್ಯದಿಂದ ಉಷ್ಣಾಂಶವೂ ಹೆಚ್ಚಾಗುತ್ತದೆ. ಆದ್ದರಿಂದ, ಈ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಚಟುವಟಿಕೆಗಳು ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಪರಿಸರ ಕಾರ್ಯಕರ್ತರು ಆಗ್ರಹಿಸಿದರು.
ಪರವಾನಗಿ ನೀಡಲು ಕೋರಿ ಪತ್ರ
‘ಜಕ್ಕೂರು ವೈಮಾನಿಕ ತರಬೇತಿ ಶಾಲೆಗೆ ಅಗತ್ಯ ಪರವಾನಗಿ/ ಸಮ್ಮತಿ ನೀಡಿ ಎಂದು ರಾಜ್ಯ ಸರ್ಕಾರ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಗಾಗಲೇ ತುಂಬಾ ವಿಳಂಬವಾಗಿದ್ದು, ಅತಿದೊಡ್ಡ ಸಂಖ್ಯೆಯಲ್ಲಿ ಪೈಲಟ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ಕ್ರಮ ಕೈಗೊಳ್ಳಿ’ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಸಮೀರ್‌ಕುಮಾರ್ ಸಿನ್ಹಾ ಅವರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಡಿ.16ರಂದು ಪತ್ರ ಬರೆದಿದ್ದಾರೆ.
‘ಇಂಡಿಗೊ ಪ್ರಕರಣದ ನಂತರ, ದೇಶದಲ್ಲಿ ತರಬೇತಿ ಪಡೆದ ಪೈಲಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ,
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಮತ್ತು ನಾಗರಿಕ ವಿಮಾನಯಾನ ಸಚಿವಾಲಯ, ಜಕ್ಕೂರು ವೈಮಾನಿಕ ತರಬೇತಿ ಶಾಲೆಗೆ ಅಗತ್ಯ ಪರವಾನಗಿಯನ್ನು ಶೀಘ್ರವೇ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
‘ಪರವಾನಗಿ ನೀಡಲು ಸಾಧ್ಯವಿಲ್ಲದಿದ್ದರೆ ಈ ಬಗ್ಗೆ ಮಾಹಿತಿ ನೀಡಬೇಕು. ಇದರಿಂದ ರಾಜ್ಯ ಸರ್ಕಾರ, ತರಬೇತಿ ಪಡೆಯುತ್ತಿ ರುವವರಿಗೆ ಪರ್ಯಾಯ ಮಾರ್ಗವನ್ನು ಪರಿಶೀಲಿಸುತ್ತದೆ. ಬಾಕಿ ಉಳಿದಿರುವ ತರಬೇತಿಯನ್ನು ಇತರೆ ಶಾಲೆಗಳಲ್ಲಿ ಸಿಗುವಂತೆ ಮಾಡಿ, ಅವರ ವೃತ್ತಿಗೆ ಯಾವುದೇ ಅಡಚಣೆಯಾಗದಂತೆ ಕ್ರಮ ಕೈಗೊಳ್ಳುತ್ತದೆ. ಹೀಗಾಗಿ, ತಾವು ಖುದ್ದಾಗಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಪರವಾನಗಿ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿಕೊಡಬೇಕು’ ಎಂದು ಕೋರಿದ್ದಾರೆ.
ಇನ್ನೇನು ನಿರೀಕ್ಷಿಸಲು ಸಾಧ್ಯ?: ರವಿ ಕೃಷ್ಣಾರೆಡ್ಡಿ
‘ರಾಜಕಾರಣಿಗಳ ಮಾರುವೇಷದಲ್ಲಿರುವ ರಿಯಲ್ ಎಸ್ಟೇಟ್ ದಲ್ಲಾಳಿಗಳಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ? ಇವರಿಗೆ ಬೇಕಾಗಿದ್ದಲ್ಲಿ, ಮೈಸೂರು, ಹುಬ್ಬಳ್ಳಿ, ಕಲಬುರಗಿಯಲ್ಲೂ ವೈಮಾನಿಕ ತರಬೇತಿ ಶಾಲೆ ಆರಂಭಿಸಲಿ. ಆದರೆ, ಮೈಸೂರಿಗೆ ಜಕ್ಕೂರಿನ ವೈಮಾನಿಕ ಶಾಲೆಯನ್ನು ಸ್ಥಳಾಂತರಿಸಲು ಆಲೋಚಿಸಿರುವುದು ರಿಯಲ್ ಎಸ್ಟೇಟ್ ಮಾಫಿಯಾಗೆ ಅನುಕೂಲ ಮಾಡಿಕೊಡುವ ಹುನ್ನಾರವಾಗಿದೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಸಂಸ್ಥಾಪಕ ರವಿ ಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟರು.
‘ಬೆಂಗಳೂರಿನಲ್ಲಿ ಕೆಲವೇ ಕೆಲವು ವಿಶಾಲವಾದ ಸರ್ಕಾರಿ ಜಾಗಗಳು ಉಳಿದುಕೊಂಡಿವೆ. ಅವುಗಳನ್ನೂ ರಿಯಲ್ ಎಸ್ಟೇಟ್‌ಗೆ ನೀಡುವ ಮೂಲಕ, ನಗರವಾಸಿ ಗಳಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಲು ಸರ್ಕಾರ ಮುಂದಾಗಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.