ಬೆಂಗಳೂರು: ಆರೋಗ್ಯ ಇಲಾಖೆ ಆಯುಕ್ತ ಶಿವಕುಮಾರ್ ಅವರೊಂದಿಗೆ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ನಡೆಸಿದ ಮಾತುಕತೆ ವಿಫಲವಾದ ಕಾರಣ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಮುಷ್ಕರ ಶುಕ್ರವಾರವೂ ಮುಂದುವರಿಯಲಿದೆ. ಮೂರು ದಿನಗಳಿಂದ ಕೊರೆಯುವ ಚಳಿಯಲ್ಲಿ ರಸ್ತೆಯಲ್ಲೇ ಮಲಗುತ್ತಿರುವುದರಿಂದ ಹಲವರಿಗೆ ಶೀತ, ಜ್ವರ, ಕೆಮ್ಮು ಕಾಣಿಸಿಕೊಂಡಿದೆ.
ಆರೋಗ್ಯ ಸೌಧದಲ್ಲಿ ಗುರುವಾರ ಮಧ್ಯಾಹ್ನ ಆರೋಗ್ಯ ಇಲಾಖೆ ಆಯುಕ್ತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಚರ್ಚಿಸಲಾಯಿತು.
‘ಬೇಡಿಕೆಗಳನ್ನು ಏಕಕಾಲಕ್ಕೆ ಈಡೇರಿಸಲು ಆಗುವುದಿಲ್ಲ. ಸಚಿವರ ಗಮನಕ್ಕೆ ತರಲಾಗುವುದು ಎಂದು ಅಧಿಕಾರಿ ತಿಳಿಸಿದರು. ಸಂಜೆವರೆಗೂ ಯಾವುದೇ ಪ್ರತಕ್ರಿಯೆ ಬಂದಿಲ್ಲ. ಹಾಗಾಗಿ ಶುಕ್ರವಾರವೂ ಮುಷ್ಕರ ಮುಂದುವರಿಯಲಿದೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮಶೇಖರ್ ಯಾದಗಿರಿ ತಿಳಿಸಿದರು.
ಸಭೆಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ಉಪಾಧ್ಯಕ್ಷರಾದ ಎಂ.ಉಮಾದೇವಿ ಹಾಗೂ ವಿವಿಧ ಜಿಲ್ಲೆಗಳ ಆಶಾ ಕಾರ್ಯಕರ್ತೆಯರಾದ ಕೌಸಲ್ಯಾ, ಗೀತಾ, ಕವಿತಾ ಮತ್ತು ನಾಗಲಕ್ಷ್ಮಿ ಪಾಲ್ಗೊಂಡಿದ್ದರು.
ಮುಷ್ಕರನಿರತ ಸ್ಥಳದಲ್ಲಿ ಅಸ್ವಸ್ಥಗೊಂಡ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಆಶಾ ಕಾರ್ಯಕರ್ತೆ ಪ್ರಭಾವತಿ ಅವರನ್ನು ಆಂಬುಲೆನ್ಸ್‌ನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
‘ರಕ್ತದೊತ್ತಡ ಕಡಿಮೆಯಾದ ಕಾರಣ ಕುಸಿದು ಬಿದ್ದಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ವೈದ್ಯರು ತಿಳಿಸಿದರು.
ಮಂಗಳವಾರದಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಅನಾರೋಗ್ಯಕ್ಕೆ ಈಡಾಗಿದ್ದಾರೆ. ಕೊರೆಯುವ ಚಳಿ, ಸುರಿಯುವ ಮಂಜು ಲೆಕ್ಕಿಸದೇ ಹೋರಾಟ ಮುಂದುವರೆಸಿದ್ದು, ರಸ್ತೆಯಲ್ಲೇ ಮಲಗುತ್ತಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿಯೇ ತಾತ್ಕಾಲಿಕ ಟೆಂಟ್ ನಿರ್ಮಿಸಿರುವ ಮೆಡಿಕಲ್ ಸರ್ವೀಸ್ ಸೆಂಟರ್ ಸಂಘಟನೆಯ ವೈದ್ಯರಾದ ಟಿ.ಎಸ್.ಸತೀಶ್ ಕುಮಾರ್, ಅಪೂರ್ವಾ, ಸೀಮಾ, ರಾಜಶೇಖರ್, ಗಂಗಾಧರ್ ಮತ್ತು ಸಿಬ್ಬಂದಿ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.
‘ಮಂಜು, ಕೊರೆವ ಚಳಿಯಲ್ಲಿ ರಸ್ತೆಯಲ್ಲಿ ಮಲಗುತ್ತಿರುವುದರಿಂದ ಮಹಿಳೆಯರು ಅನಾರೋಗ್ಯಕ್ಕೆ ಈಡಾಗಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ವೈದ್ಯೆ ಸೀಮಾ ತಿಳಿಸಿದರು.
ಮುಷ್ಕರದಲ್ಲಿ ಪಾಲ್ಗೊಂಡಿರುವ ಮಹಿಳೆಯರಿಗೆ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿದೆ.
ಸಿ.ಎಂ. ಮಧ್ಯಪ್ರವೇಶಿಸಲಿ: ನಾಗಲಕ್ಷ್ಮೀ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಆಗ್ರಹಿಸಿದರು. ತಿಂಗಳಿಗೆ ₹15 ಸಾವಿರ ಗೌರವಧನ ನೀಡುವುದು ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ₹15 ಸಾವಿರ ನೀಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸೇರಿ ವಾರ್ಷಿಕವಾಗಿ ಬೇಕಾಗುವ ಹೆಚ್ಚುವರಿ ಮೊತ್ತ ₹ 170 ಕೋಟಿ. ಹಾಲಿ ನೀಡುತ್ತಿರುವ ಗೌರವಧನ ಮತ್ತು ಪ್ರೋತ್ಸಾಹ ಧನ ಸೇರಿಸಿ ತಿಂಗಳಿಗೆ ₹ 9500 ಮುಂಗಡ ನೀಡಲಾಗುವುದು ಎಂಬ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಪ್ರಸ್ತಾವವನ್ನು ತಿರಿಸ್ಕರಿಸಲಾಗಿದೆ. ಸರ್ಕಾರ ಕೂಡಲೇ ₹ 12 ಸಾವಿರ ಗೌರವ ಧನ ನಿಗದಿಪಡಿಸಿ ಬಳಿಕ ಹಂತ ಹಂತವಾಗಿ ಮೂರು ಸಾವಿರ ರೂಪಾಯಿ ಹೆಚ್ಚಿಸಲಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮುಷ್ಕರದಿಂದಾಗಿ ಗರ್ಭಿಣಿಯರು ಬಾಣಂತಿಯರಿಗೆ ತೊಂದರೆ ಆಗುತ್ತಿದೆ. ಇದಕ್ಕೆ ಇಲಾಖೆಯೇ ಹೊಣೆ. ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ತಕ್ಕಂತೆ ವೇತನ ಸಿಗುತ್ತಿಲ್ಲ. ತಾಂತ್ರಿಕ ಸಮಸ್ಯೆಯಿಂದ ಆಶಾ ಪೋರ್ಟಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ವೈದ್ಯಕೀಯ ಪ್ರಮಾಣ ಪತ್ರ ಹಾಜರುಪಡಿಸಿದರೂ ಅನಾರೋಗ್ಯ ಪೀಡಿತರಿಗೆ ರಜೆ ದೊರೆಯುತ್ತಿಲ್ಲ. ಇಎಸ್‌ಐ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಮಂಟಪ ರಸ್ತೆಯಲ್ಲಿ ವಾಸ್ತವ್ಯ
ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಸ್ವಾತಂತ್ರ್ಯ ಉದ್ಯಾನ ಕಲ್ಯಾಣ ಮಂಟಪ ಹಾಗೂ ರಸ್ತೆಯಲ್ಲೇ ಮಲಗುತ್ತಿದ್ದಾರೆ. ಕುಡಿಯುವ ನೀರು ಶೌಚಾಲಯಕ್ಕೆ ಪರದಾಡುತ್ತಿದ್ದಾರೆ. ‘ತಾತ್ಕಾಲಿಕ ಶೌಚಾಲಯ ಹಾಗೂ ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ ಮಾಡಿದರೂ ಸಾಲುತ್ತಿಲ್ಲ. ಹಣ ನೀಡಿ ಉಪಯೋಗಿಸುವ ಶೌಚಾಲಯಗಳಲ್ಲಿ ತಾಸುಗಟ್ಟಲೇ ನಿಲ್ಲಬೇಕಾದ ಪರಿಸ್ಥಿತಿ ಇದೆ’ ಎಂದು ಮಂಡ್ಯದ ಆಶಾ ಕಾರ್ಯಕರ್ತೆಯೊಬ್ಬರು ಅಲವತ್ತುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.