ಬೆಂಗಳೂರು: ನಗರದಲ್ಲಿರುವ ಕೆರೆಗಳ ಬಗ್ಗೆ ನಾಗರಿಕರು, ಮಕ್ಕಳಿಗೆ ಅರಿವು ಮೂಡಿಸುವುದು, ಅವುಗಳ ರಕ್ಷಣೆಯಲ್ಲಿ ಸಮುದಾಯಗಳ ಜವಾಬ್ದಾರಿಯನ್ನು ಸ್ಥಳೀಯರಿಗೆ ತಿಳಿಸುವ ಉದ್ದೇಶದಿಂದ ‘ಕೆರೆ ಕನೆಕ್ಟ್ ಹಬ್ಬ– 2025’ ಪ್ರಾರಂಭಗೊಂಡಿದೆ.
ಕೆರೆಗಳ ಪ್ರಾಮುಖ್ಯದ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸಲಾಗುತ್ತದೆ. ನೀರಿನ ಭದ್ರತೆ, ಪ್ರವಾಹದಿಂದಾಗುವ ಸಮಸ್ಯೆ ಹಾಗೂ ಇತರೆ ಸವಾಲುಗಳನ್ನು ಎದುರಿಸುವ ಕುರಿತು ಜಾಗ್ರತೆ ಮೂಡಿಸುವ ಜೊತೆಗೆ ಪರಿಹಾರ ಒದಗಿಸುವ ಉದ್ದೇಶವನ್ನೂ ‘ಕೆರೆ ಕನೆಕ್ಟ್ ಹಬ್ಬ’ ಹೊಂದಿದೆ.
ಕ್ಷಿಪ್ರ ನಗರೀಕರಣದಿಂದ ಜಲಸಂಪನ್ಮೂಲಗಳೊಂದಿಗಿನ ಸುಸ್ಥಿರ ಜೀವನ ಕಡಿತವಾಗಿದೆ. ಅಂತಹ ಸಂಪರ್ಕವನ್ನು ಮರುಸೃಷ್ಟಿಸಲು ‘ಕೆರೆ ಕನೆಕ್ಟ್ ಹಬ್ಬ’ ಆಚರಿಸಲಾಗುತ್ತಿದೆ. ತಜ್ಞರು ಜೀವವೈವಿಧ್ಯದ ಬಗ್ಗೆ ಮಾಹಿತಿ ಒದಗಿಸಲಿದ್ದಾರೆ. ಕೆರೆಗಳ ಸುತ್ತಮುತ್ತಲಿನ ನಿವಾಸಿಗಳು, ಕೆರೆ ರಕ್ಷಣೆಯಲ್ಲಿ ತೊಡಗಿರುವ ಸಂಘಗಳನ್ನು ಒಟ್ಟುಗೂಡಿಸಿ, ಶಾಲಾ ಮಕ್ಕಳನ್ನು ಸೇರಿಸಿಕೊಂಡು ಜಲಮೂಲ ರಕ್ಷಣೆಯಲ್ಲಿ ಅವರವರ ಪಾತ್ರಗಳನ್ನು ವಿವರಿಸಲಾಗುತ್ತದೆ.
‘ಕೆರೆ ಕನೆಕ್ಟ್ ಹಬ್ಬ’ವನ್ನು ನಗರದ ಹಲವು ಕೆರೆಗಳಲ್ಲಿ ಇಂಡಿಯಾ ಕೇರ್ ಫೌಂಡೇಷನ್ ಆಯೋಜಿಸುತ್ತಿದ್ದು, ಫ್ರೆಂಡ್ಸ್ ಆಫ್ ಲೇಕ್ ಜೊತೆಗೆ ಹಲವು ಕಾರ್ಪೊರೇಟ್ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಕೈಜೋಡಿಸಿವೆ. ಕೆರೆಗಳಲ್ಲಿ ಹಬ್ಬ ಆಚರಿಸಲು ಬಿಬಿಎಂಪಿಯಿಂದ ಅನುಮತಿ ಪಡೆದುಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಅನುಮತಿ: ಕೆರೆಯ ಪರಿಸರಕ್ಕೆ ಧಕ್ಕೆ ಉಂಟಾಗದಂತೆ, ಜನಜಾಗೃತಿ ಮೂಡಿಸುವ ಕೆಲಸ ಮಾಡಲು ‘ಕೆರೆ ಕನೆಕ್ಟ್ ಹಬ್ಬ’ಕ್ಕೆ ಅನುಮತಿ ನೀಡಲಾಗಿದೆ. ಪ್ರತಿಯೊಂದು ಕೆರೆಯಲ್ಲಿ ಹಬ್ಬ ಆಚರಿಸುವ ಸಂದರ್ಭದಲ್ಲಿ ಪ್ರತ್ಯೇಕ ಅನುಮತಿ ಪಡೆಯುತ್ತಿದ್ದಾರೆ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಹರಿದಾಸ್ ತಿಳಿಸಿದರು.
ನೀರು ಹರಿಯದ ಕೆರೆಗೆ ಗಂಗಾ–ಕಾವೇರಿ ಆರತಿ!
ಮಾಗಡಿ ರಸ್ತೆ ಸಮೀಪವಿರುವ ಶ್ರೀಗಂಧದ ಕಾವಲ್ ಕೆರೆಯನ್ನು ಬಿಬಿಎಂಪಿ ವತಿಯಿಂದ ₹22.4 ಕೋಟಿ ವೆಚ್ಚದಲ್ಲಿ ಎರಡು ವರ್ಷಗಳ ಹಿಂದೆ ಅಭಿವೃದ್ಧಿ ಮಾಡಲಾಗಿದೆ. ಈ ಕೆರೆಯಲ್ಲಿ ಇಂದು ಒಂದು ಹನಿ ನೀರೂ ಇಲ್ಲ. ಇಂತಹ ಕೆರೆಯಲ್ಲಿ ‘ಕೆರೆ ಕನೆಕ್ಟ್ ಹಬ್ಬ’ದಲ್ಲಿ ಗಂಗಾ–ಕಾವೇರಿ ಆರತಿ ಏರ್ಪಡಿಸಲಾಗಿದೆ. ‘ಶುಭ್ರ ಬೆಂಗಳೂರು’ ಯೋಜನೆಯಡಿ ಬಿಬಿಎಂಪಿ ವತಿಯಿಂದ ಶ್ರೀಗಂಧದ ಕಾವಲ್ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದ್ದು ಹಿಂದಿದ್ದ ಕಾಲುವೆ ಮಾರ್ಗವನ್ನು ಬದಲಿಸಲಾಗಿದೆ. ಈಗಿರುವ ಒಂದು ಒಳಹರಿವಿನಿಂದ ನೀರು ಬರುವುದಿಲ್ಲ. ಹೀಗಾಗಿ ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಾಗಿದ್ದರೂ ಈ ಕೆರೆಯಲ್ಲಿ ಒಂದೆರಡು ಅಡಿ ನೀರೂ ತುಂಬುತ್ತಿಲ್ಲ. ಅವೈಜ್ಞಾನಿಕವಾಗಿ ಅಭಿವೃದ್ಧಿಯಾಗಿರುವ ಶ್ರೀಗಂಧದ ಕಾವಲ್ ಕೆರೆ ‘ಹೈಟೆಕ್ ಪಾರ್ಕ್’ನಂತಾಗಿದ್ದು ಒಳಹರಿವಿಲ್ಲದ್ದರಿಂದ ಕೆರೆ ಅಸ್ತಿತ್ವ ಕಳೆದುಕೊಂಡಿದೆ.
‘ಕೆರೆ ತಮ್ಮದೆನ್ನುವ ಭಾವನೆ ಬರಲಿ’
‘ಶ್ರೀಗಂಧದ ಕಾವಲ್ ಕೆರೆ’ ಇಲ್ಲಿದೆ ಎಂಬುದೇ ಸುತ್ತಮುತ್ತಲಿನ ನಿವಾಸಿಗಳಿಗೇ ಗೊತ್ತಿಲ್ಲ. ಸುತ್ತಮುತ್ತಲಿರುವ ಶಾಲೆಗಳ ಮಕ್ಕಳಿಗೂ ಕೆರೆಯ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಸ್ಥಳೀಯರು ಮಕ್ಕಳಿಗೆ ಕೆರೆ ತಮ್ಮದೆಂಬ ಭಾವನೆ ಬರಬೇಕು. ಅದನ್ನು ರಕ್ಷಿಸಿಕೊಳ್ಳಬೇಕು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಜವಾಬ್ದಾರಿ ಮೂಡಬೇಕು. ಆದ್ದರಿಂದ ‘ಕೆರೆ ಕನೆಕ್ಟ್ ಹಬ್ಬ’ವನ್ನು ಶ್ರೀಗಂಧದ ಕಾವಲ್ ಕೆರೆಯಲ್ಲಿ ಮಾರ್ಚ್ 15ರ ಶನಿವಾರದಂದು ಆಯೋಜಿಸಲಾಗಿದೆ. ಬೆಳಿಗ್ಗೆ 7ರಿಂದ ರಾತ್ರಿಯವರೆಗೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮುಂದಿನ ಮಳೆಗಾಲದಲ್ಲಾದರೂ ಕೆರೆ ಪೂರ್ಣ ತುಂಬಲಿ ಎಂದು ಆರತಿ ಮಾಡಲಿದ್ದೇವೆ. ಉಸಿರು ಹಾಗೂ ಟೀಮ್ ಸ್ಪಾಟ್‌ಲೈಟ್ ಸಂಸ್ಥೆಗಳು ಕಾರ್ಯಕ್ರಮ ನಿರ್ವಹಣೆ ಮಾಡಲಿವೆ’ ಎಂದು ಉಸಿರು ಸಂಸ್ಥೆಯ ಶೋಭಾ ಭಟ್ ತಿಳಿಸಿದರು.
ಹಬ್ಬದಲ್ಲಿ ಏನೇನಿದೆ?
ಕೆರೆ ಜೀವವೈವಿಧ್ಯ ನಡಿಗೆ
ಮಕ್ಕಳ ಚಿತ್ರಕಲಾ ಸ್ಪರ್ಧೆ
ಸಭಾ ಕಾರ್ಯಕ್ರಮ
ತಜ್ಞರಿಂದ ಮಾಹಿತಿ, ಚರ್ಚೆ
ತೋಟದಿಂದ ಊಟ ಕಾರ್ಯಾಗಾರ
ಗ್ರಾಮೀಣ ಆಟಗಳು
ಸಾಂಸ್ಕೃತಿಕ ಕಾರ್ಯಕ್ರಮ
ದೀಪೋತ್ಸವ, ಗಂಗಾ–ಕಾವೇರಿ ಆರತಿ
ಹಳೆ ಬಟ್ಟೆ, ಹಳೆ ಪಾದರಕ್ಷೆಗಳ ಸಂಗ್ರಹ
ಹಳೆ ಬಟ್ಟೆ ತಂದರೆ, ಉಚಿತವಾಗಿ ಚೀಲ ಹೊಲಿಸಿಕೊಳ್ಳುವ ಕೊಡುಗೆ
ಸುಸ್ಥಿರತೆಯ ಅರಿವಿನ ಬಗ್ಗೆ ಪ್ರದರ್ಶನಾ ಮಳಿಗೆಗಳು
(ಮಾರ್ಚ್ 15ರ ಶನಿವಾರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.