ADVERTISEMENT

ಬೆಂಗಳೂರು: ಕಸದ ಲಾರಿಯಲ್ಲಿ ಶವವಿಟ್ಟು ಪರಾರಿಯಾಗಿದ್ದ ಆರೋಪಿ ಸೆರೆ

ಸಹ ಜೀವನ ನಡೆಸುತ್ತಿದ್ದ ಇಬ್ಬರ ಮಧ್ಯೆ ಗಲಾಟೆ, ಉಸಿರುಗಟ್ಟಿಸಿ ಮಹಿಳೆಯ ಕೊಲೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 15:28 IST
Last Updated 30 ಜೂನ್ 2025, 15:28 IST
ಶಂಶುದ್ದೀನ್‌ 
ಶಂಶುದ್ದೀನ್‌    

ಬೆಂಗಳೂರು: ಮಹಿಳೆಯನ್ನು ಕೊಲೆ ಮಾಡಿ ಮೃತದೇಹವನ್ನು ಮೂಟೆಯಲ್ಲಿ ಕಟ್ಟಿ ಬಿಬಿಎಂಪಿ ಕಸದ ಲಾರಿಯಲ್ಲಿಟ್ಟು ಪರಾರಿಯಾಗಿದ್ದ ಆರೋಪಿಯನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಶಂಶುದ್ದೀನ್‌ನನ್ನು (33) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಆರೋಪಿ ಬೈಕ್‌ನಲ್ಲಿ ಬಂದು ಮೃತದೇಹವನ್ನು ಲಾರಿಯಲ್ಲಿ ಎಸೆದು ಪರಾರಿ ಆಗುತ್ತಿರುವ ದೃಶ್ಯವು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಅದನ್ನು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಭಾನುವಾರ ತಡರಾತ್ರಿಯೇ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ADVERTISEMENT

ಅಸ್ಸಾಂ ಮೂಲದ ಶಂಶುದ್ದೀನ್‌ ಕೆಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಹೌಸ್‌ ಕೀಪಿಂಗ್‌ ಕಂಪನಿಯಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ. ಆತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಹೆಂಡತಿ ಹಾಗೂ ಮಕ್ಕಳು ಅಸ್ಸಾಂನಲ್ಲೇ ಇದ್ದು, ಶಂಶುದ್ದೀನ್‌ ಮಾತ್ರ ನಗರಕ್ಕೆ ಬಂದು ಕೆಲಸ ಮಾಡುತ್ತಿದ್ದ. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಶಾ ಅವರ ಪರಿಚಯವಾಗಿತ್ತು. ಆಶಾ ಅವರ ಪತಿ ಮೃತಪಟ್ಟಿದ್ದರು. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಶಂಶುದ್ದೀನ್‌ ಹಾಗೂ ಆಶಾ ಅವರ ಮಧ್ಯೆ ಸಲುಗೆ ಬೆಳೆದು ಇಬ್ಬರೂ ಪ್ರೀತಿಸುತ್ತಿದ್ದರು. ಹುಳಿಮಾವಿನಲ್ಲಿ ಬಾಡಿಗೆ ಮನೆ ಪಡೆದು ಒಂದೂವರೆ ವರ್ಷದಿಂದ ಸಹ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ:

ಆರಂಭಿಕ ದಿನಗಳಲ್ಲಿ ಇಬ್ಬರೂ ಚೆನ್ನಾಗಿಯೇ ಜೀವನ ನಡೆಸುತ್ತಿದ್ದರು. ದಿನ ಕಳೆದಂತೆ ಗಲಾಟೆ ಆರಂಭವಾಗಿತ್ತು. ಆಶಾ ಪದೇ ಪದೇ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಆರೋಪಿ ಸಂಶಯಗೊಂಡು ಆಶಾ ಅವರನ್ನು ಪ್ರಶ್ನಿಸಿದ್ದ. ಮೊಬೈಲ್‌ನಲ್ಲಿ ಮಾತನಾಡದಂತೆ ತಾಕೀತು ಮಾಡಿದ್ದ. ಇಬ್ಬರೂ ಮದ್ಯ ಸೇವಿಸಿ ಬಂದು ಗಲಾಟೆ ಮಾಡುತ್ತಿದ್ದರು. ಶನಿವಾರ ರಾತ್ರಿ ಗಲಾಟೆ ವಿಕೋಪಕ್ಕೆ ತಿರುಗಿ ಆಶಾ ಅವರನ್ನು ಆರೋಪಿ ಕೊಲೆ ಮಾಡಿದ್ದಾನೆ. ಮೃತದೇಹವನ್ನು ಬೈಕ್​​ನಲ್ಲಿ ಇಟ್ಟುಕೊಂಡು ಬಂದಿದ್ದ ಆರೋಪಿ ಅದನ್ನು ಚನ್ನಮ್ಮನಕೆರೆ ಠಾಣಾ ವ್ಯಾಪ್ತಿಯ ಸ್ಕೇಟಿಂಗ್ ಮೈದಾನದ ಬಳಿ ನಿಂತಿದ್ದ ಕಸ ಸಾಗಿಸುವ ಲಾರಿಯಲ್ಲಿ ಎಸೆದು ಪರಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ. 

ಶನಿವಾರ ರಾತ್ರಿ ಸ್ಥಳೀಯ ವ್ಯಕ್ತಿಯೊಬ್ಬರು ಕಸ ಹಾಕಲು ಬಂದಿದ್ದಾಗ ಕಸದ ಲಾರಿಯಲ್ಲಿ ಯುವತಿಯ ತಲೆ ಕೂದಲು ಕಾಣಿಸಿತ್ತು. ಅವರು ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಶವವೊಂದು ಮೂಟೆಕಟ್ಟಿ ಎಸೆದ ಸ್ಥಿತಿಯಲ್ಲಿ ಇರುವುದು ಪತ್ತೆಯಾಗಿತ್ತು. ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು, ಆರೋಪಿಗೆ ಶೋಧ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

‘ಪ್ರಕರಣ ದಾಖಲಿಸಿಕೊಂಡ ಕೆಲವೇ ತಾಸಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಶನಿವಾರ ರಾತ್ರಿ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಪರಸ್ಪರ ಹಲ್ಲೆ ಮಾಡಿಕೊಂಡಿದ್ದರು. ಆ ವೇಳೆ ಆರೋಪಿಯು, ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಕೊಲೆ ಬಳಿಕ ಆರೋಪಿಯು ಮೃತದೇಹವನ್ನು ಖಾಲಿ ಚೀಲದಲ್ಲಿ ತುಂಬಿಕೊಂಡು ಬಂದು ಕಸದ ಲಾರಿಯಲ್ಲಿ ಎಸೆದು ಪರಾರಿಯಾಗಿದ್ದ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ ಜಗಲಾಸರ್ ತಿಳಿಸಿದರು.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆದೊಯ್ದ ಪೊಲೀಸರು 
ಮಹಿಳೆಯ ಮೃತದೇಹ ಪತ್ತೆಯಾದ ಬಿಬಿಎಂಪಿ ಕಸದ ಲಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.