ಬೆಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಪಾದಚಾರಿ ಮಾರ್ಗದ ಮೇಲೆ ವಾಹನ ಚಾಲನೆ ಮಾಡುವವರ ಚಾಲನಾ ಪರವಾನಗಿ (ಡಿ.ಎಲ್) ಅಮಾನತುಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಸಂಚಾರ ನಿಯಮಗಳ ಕುರಿತು ಜಾಗೃತಿ ಹಾಗೂ ವಿಶೇಷ ಕಾರ್ಯಾಚರಣೆ ಕೈಗೊಂಡರೂ ನಿಯಮ ಉಲ್ಲಂಘಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲಿಯೂ ಸಂಚಾರ ದಟ್ಟಣೆ ವೇಳೆ ಪಾದಚಾರಿ ಮಾರ್ಗದ ಮೇಲೆ ದ್ವಿಚಕ್ರ ವಾಹನ ಓಡಿಸುವವರ ವಿರುದ್ಧ ಸಂಚಾರ ವಿಭಾಗದ ಪೊಲೀಸರು ದಂಡ ವಿಧಿಸುತ್ತಲೇ ಇದ್ದಾರೆ. ಆದರೆ, ದಂಡಕ್ಕೂ ಬಗ್ಗದ ವಾಹನ ಸವಾರರ ವಿರುದ್ಧ ಡಿ.ಎಲ್ ಅಮಾನತು ಅಸ್ತ್ರ ಪ್ರಯೋಗಿಸಲು ಸಂಚಾರ ವಿಭಾಗದ ಪೊಲೀಸರು ನಿರ್ಧರಿಸಿದ್ದಾರೆ.
ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ, ಮೊದಲ ಬಾರಿಗೆ ಡಿ.ಎಲ್ ಅಮಾನತು ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
‘ಪಾದಚಾರಿ ಮಾರ್ಗದ ಮೇಲೆ ವಾಹನ ಚಲಾಯಿಸುವವರಿಗೆ ದಂಡ ವಿಧಿಸಲಾಗುತ್ತಿತ್ತು. ಆದರೆ, ನೂತನ ನಿಯಮದ ಪ್ರಕಾರ ಇನ್ಮುಂದೆ ಪಾದಚಾರಿ ಮಾರ್ಗದ ಮೇಲೆ ವಾಹನ ಚಲಾಯಿಸಿದರೆ ಮೊದಲ ಬಾರಿಗೆ ದಂಡ ವಿಧಿಸಲಾಗುತ್ತದೆ. ಮತ್ತೆ ನಿಯಮ ಉಲ್ಲಂಘಿಸಿದರೆ ಅಂಥವರ ಚಾಲನಾ ಪರವಾನಗಿ ಅಮಾನತುಗೊಳಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗುವುದು’ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.