ADVERTISEMENT

Bhumika Club | ವನಿತೆಯರ ಸಮ್ಮಿಲನ: ‘ಜುಂಬಾ’ ಡಾನ್ಸ್ ಸಂಭ್ರಮ

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಹಮ್ಮಿಕೊಂಡಿದ್ದ ‘ಭೂಮಿಕಾ ಕ್ಲಬ್’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 0:30 IST
Last Updated 21 ಡಿಸೆಂಬರ್ 2025, 0:30 IST
<div class="paragraphs"><p>ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಜುಂಬಾ ಡಾನ್ಸ್ ಮಾಡಿದರು </p></div>

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಜುಂಬಾ ಡಾನ್ಸ್ ಮಾಡಿದರು

   

ಪ್ರಜಾವಾಣಿ ಚಿತ್ರಗಳು: ಎಂ.ಎಸ್.ಮಂಜುನಾಥ್

ಬೆಂಗಳೂರು: ಎಲ್ಲವನ್ನೂ ಮರೆತು ಚಲನಚಿತ್ರ ಗೀತೆಗಳಿಗೆ ‘ಜುಂಬಾ ಡಾನ್ಸ್‌’ ಮಾಡಿದ ವಿವಿಧ ವಯೋಮಾನದ ಮಹಿಳೆಯರು, ಇಂಪಾದ ಗೀತೆಗಳು ಮತ್ತು ಆರೋಗ್ಯ ಸಲಹೆಗಳಿಗೆ ಕಿವಿಯಾಗುವ ಜತೆಗೆ ಅಚ್ಚರಿ ಬಹುಮಾನಗಳನ್ನೂ ಗೆದ್ದು ಸಂಭ್ರಮಿಸಿದರು. 

ADVERTISEMENT

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಮಹಿಳೆಯರಿಗಾಗಿ ಸ್ಥಾಪಿಸಿರುವ ‘ಭೂಮಿಕಾ ಕ್ಲಬ್’ ವೇದಿಕೆಯ 33ನೇ ಆವೃತ್ತಿಯ ವಿಶೇಷ ಕಾರ್ಯಕ್ರಮ ಇಂದಿರಾನಗರ ಕ್ಲಬ್‌ನಲ್ಲಿ ನಡೆಯಿತು. ಕ್ರಿಸ್‌ಮಸ್ ಪ್ರಯುಕ್ತ ‘ಫ್ರೀಡಂ ಹೆಲ್ತಿ ಕುಕ್ಕಿಂಗ್ ಆಯಿಲ್’ ಮತ್ತು ಮಣಿಪಾಲ್ ಆಸ್ಪತ್ರೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಇಂಪಾದ ಚಿತ್ರಗೀತೆಗಳು, ಭರತನಾಟ್ಯ, ಪಾಶ್ಚಾತ್ಯ ನೃತ್ಯ, ಘಮಘಮಿಸುವ ಕೇಸರಿಬಾತ್, ಸ್ಟ್ಯಾಂಡ್‌ ಅಪ್ ಕಾಮಿಡಿ, ಆರೋಗ್ಯ ಕಾಳಜಿಯ ಮಾತುಗಳು ಸೇರಿ ಹಲವು ವಿಶೇಷತೆಯನ್ನು ಈ ಕಾರ್ಯಕ್ರಮ ಒಳಗೊಂಡಿತ್ತು. ನಿರೂಪಕ ಆರ್‌.ಜೆ. ಅಕ್ಷಯ್ ಅವರು ನಡೆಸಿಕೊಟ್ಟ ವಿವಿಧ ಚಟುವಟಿಕೆಗಳು ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಸಹಕಾರಿಯಾಯಿತು. 

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ದಿಕ್ಸೂಚಿ ಭಾಷಣ ಮಾಡಿದರು. ಪದ್ಮಿನಿ ಪ್ರಿಯ ನೃತ್ಯ ಕಲಾ ಅಕಾಡೆಮಿಯ ವಿದ್ಯಾರ್ಥಿಗಳು ಉಷಾ ಬಸಪ್ಪ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಪ್ರದರ್ಶಿಸಿದರು. 

ಚಂದನಾ ಲಕ್ಷ್ಮೀಕಾಂತ್ ಅವರು ‘ಜುಂಬಾ ಡಾನ್ಸ್’ ನಡೆಸಿಕೊಟ್ಟರು. ಅವರ ಜತೆಗೆ ನೆರೆದಿದ್ದ ಪ್ರೇಕ್ಷಕರು ವಿವಿಧ ಗೀತೆಗಳಿಗೆ ಉತ್ಸಾಹದಿಂದ ಹೆಜ್ಜೆ ಹಾಕಿದರು. ಪ್ರೇಕ್ಷಕರಲ್ಲಿ ಉತ್ತಮವಾಗಿ ನೃತ್ಯ ಮಾಡಿದವರನ್ನು ವೇದಿಕೆಗೆ ಆಹ್ವಾನಿಸಿ, ಅವರೊಂದಿಗೆ ‘ಬ್ಯಾಂಗಲ್ ಬಂಗಾರಿ...’ ಗೀತೆಗೆ ಚಂದನಾ ಹೆಜ್ಜೆ ಹಾಕಿದರು. ಆಯ್ದ ಪ್ರೇಕ್ಷಕರಲ್ಲಿ ಅತ್ಯುತ್ತಮವಾಗಿ ನೃತ್ಯ ಮಾಡಿದ ಇಬ್ಬರಿಗೆ ಬಹುಮಾನವನ್ನೂ ನೀಡಲಾಯಿತು. 

ಅನಘಾ ಅವರು ವಿವಿಧ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು. ನೆರೆದಿದ್ದ ಮಹಿಳೆಯರು ಕೂಡ ಆಗಾಗ ಕೆಲ ಸಾಲುಗಳನ್ನು ಗುನುಗಿದರು. ವರ್ಷಿಣಿ ಅವರು ಸ್ಟ್ಯಾಂಡ್‌ ಅಪ್ ಕಾಮಿಡಿ ಮಾಡಿದರು. ಪ್ರೇಕ್ಷಕರನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಹಾಸ್ಯದ ಕಚಗುಳಿ ನೀಡಿದರು. ಲಕ್ಕಿ ವಿಜೇತರಲ್ಲಿ ಸುಧಾ ಸಾಗರಿ ಅವರು ವಾಟರ್‌ ಪ್ಯೂರಿಫೈಯರ್ ತಮ್ಮದಾಗಿಸಿಕೊಂಡರೆ, ಗಾಯತ್ರಿ ಸಿ.ಎಸ್. ಅವರು ‘ಪ್ರಜಾವಾಣಿ ಸಿನಿ ಸಮ್ಮಾನ’ ಸಮಾರಂಭದ ಎರಡು ವಿವಿಐಪಿ ಪಾಸ್‌ಗಳನ್ನು ಪಡೆದುಕೊಂಡರು.‌

10 ಅದೃಷ್ಟ ಪ್ರೇಕ್ಷಕರಿಗೆ ಮಲ್ಟಿಪ್ಲೆಕ್ಸ್‌ನಲ್ಲಿ ಚಲನಚಿತ್ರ ವೀಕ್ಷಣೆಗೆ ತಲಾ ಎರಡು ಟಿಕೆಟ್‌ಗಳನ್ನು ವಿತರಿಸಲಾಯಿತು. ತುಳಸಿ ಶಿವಕುಮಾರ್, ಸುಮಿತ್ರಾ ಎಂ., ಚಂಪಕಾ, ಸ್ವಾತಿ ಎಂ.ವಿ., ಶರ್ಮಿಳಾ, ಪ್ರಿಯಾ, ವಿಜಯಶ್ರೀ, ವಿದ್ಯಾ, ಸರಸ್ವತಿ ಮತ್ತು ಚಂದ್ರಕಲಾ ಹೆಗಡೆ ಅವರು ಟಿಕೆಟ್‌ಗಳನ್ನು ಪಡೆದ ಅದೃಷ್ಟಶಾಲಿಗಳು.

ಅಡುಗೆ ಮಾಡುತ್ತಿರುವ ರೂಪಾ ಬಲ್ಲಾಳ್ ಮತ್ತು ಅನುಪಮಾ ಜತೆಗೆ ಆರ್.ಜೆ.ಅಕ್ಷಯ್ ಸಮಾಲೋಚನೆ ನಡೆಸಿದರು
ಪದ್ಮಿನಿ ಪ್ರಿಯ ನೃತ್ಯ ಕಲಾ ಅಕಾಡೆಮಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು

ಸ್ತನ ಕ್ಯಾನ್ಸರ್‌ ಬಗ್ಗೆ ಅರಿವು 

ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ತಜ್ಞರಾದ ಡಾ. ಪೂನಂ ಪಾಟೀಲ್ ಅವರು ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ‘ಸ್ತನ ಕ್ಯಾನ್ಸರ್ ಭಾರತೀಯ ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಸ್ತನ ಕ್ಯಾನ್ಸರ್ ತಡೆಗೆ ತಪಾಸಣೆಯೇ ಪರಿಹಾರವಾಗಿದ್ದು ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡಿದಲ್ಲಿ ಚಿಕಿತ್ಸೆ ಸುಲಭ ಸಾಧ್ಯವಾಗಲಿದೆ. ಸ್ತನ ಕ್ಯಾನ್ಸರ್ ಎಲ್ಲ ವಯೋಮಾನದ ಮಹಿಳೆಯರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಪ್ರತಿ ತಿಂಗಳು ಸ್ವಯಂ ತಪಾಸಣೆ ಮಾಡಿಸಿಕೊಳ್ಳಬೇಕು. ಕ್ಯಾನ್ಸರ್‌ ಶಂಕೆ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು. ವರ್ಷಕ್ಕೆ ಒಮ್ಮೆ ‘ಮ್ಯಾಮೋಗ್ರಾಮ್’ ಪರೀಕ್ಷೆಗೆ ಒಳಪಡಬೇಕು. ಆರೋಗ್ಯಕರ ಜೀವನಶೈಲಿ ಅಳವಡಿಕೆಯಿಂದ ಕ್ಯಾನ್ಸರ್ ತಡೆ ಸಾಧ್ಯ. ಪ್ರತಿನಿತ್ಯ ಕನಿಷ್ಠ 30 ನಿಮಿಷಗಳಾದರೂ ವ್ಯಾಯಾಮ ಮಾಡಬೇಕು’ ಎಂದು ಹೇಳಿದರು. 

ಡಾ. ಪೂನಂ ಪಾಟೀಲ್ 
ಭೂಮಿಕಾ ಕ್ಲಬ್ ಲೋಗೊ

ಅಡುಗೆ ತಯಾರಿ ಸ್ಪರ್ಧೆ

ಮಹಿಳೆಯರಿಗೆ ಅಡುಗೆ ತಯಾರಿ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಚೀಟಿ ಎತ್ತುವ ಮೂಲಕ ಪ್ರೇಕ್ಷಕರಲ್ಲಿ ಇಬ್ಬರನ್ನು ಆಯ್ಕೆ ಮಾಡಲಾಯಿತು. ಈ ಸ್ಪರ್ಧೆಗೆ ಆಯ್ಕೆಯಾಗಿದ್ದ ಅನುಪಮಾ ಮತ್ತು ರೂಪಾ ಬಲ್ಲಾಳ್ ಅವರು ಲಭ್ಯ ಸಾಮಗ್ರಿಗಳಲ್ಲಿ ಕೇಸರಿ ಬಾತ್ ಮಾಡಿದರು. ಇಬ್ಬರಿಗೂ ತಲಾ 15 ನಿಮಿಷಗಳನ್ನು ನೀಡಲಾಗಿತ್ತು. ಚೀಟಿ ಎತ್ತುವ ಮೂಲಕ ನೆರದಿದ್ದ ಪ್ರೇಕ್ಷಕರಲ್ಲಿ ಮೂವರನ್ನು ನಿರ್ಣಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ರೂಪಾ ಅವರು ವಿಜೇತರಾಗಿ ಬಹುಮಾನ ಪಡೆದರು. ಇಬ್ಬರೂ ಸ್ಪರ್ಧಿಗಳು ತಾವು ತಯಾರಿಸಿದ ಕೇಸರಿ ಬಾತ್‌ನ ರುಚಿ ಆಸ್ವಾದಿಸಲು ಪ್ರೇಕ್ಷಕರಿಗೂ ನೀಡಿದರು. 

ಚಂದನಾ ಲಕ್ಷ್ಮೀಕಾಂತ್ ಅವರು ‘ಜುಂಬಾ ಡಾನ್ಸ್’ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.