ADVERTISEMENT

ಕಾರಾಗೃಹದಲ್ಲಿ ರೌಡಿಶೀಟರ್‌ ಜನ್ಮದಿನ ಆಚರಣೆ: ಇಬ್ಬರ ಅಮಾನತು, ಐವರ ವಿಚಾರಣೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಗುಬ್ಬಚ್ಚಿ ಸೀನನ ಜನ್ಮದಿನ ಆಚರಣೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 0:30 IST
Last Updated 9 ಅಕ್ಟೋಬರ್ 2025, 0:30 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ 
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ    

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರೌಡಿಶೀಟರ್‌ ಜನ್ಮದಿನ ಆಚರಣೆಗೆ ನೆರವು ನೀಡಿದ್ದ ಪ್ರಕರಣದಲ್ಲಿ ಕಾರಾಗೃಹದ ಮುಖ್ಯ ವೀಕ್ಷಕ ಹಾಗೂ ವೀಕ್ಷಕನನ್ನು ಅಮಾನತು ಮಾಡಲಾಗಿದೆ. ಉಳಿದ ಐವರನ್ನು ಗುರುವಾರ ಅಮಾನತು ಮಾಡುವ ಸಾಧ್ಯತೆ ಇದೆ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮೂಲಗಳು ತಿಳಿಸಿವೆ.

ವಿಚಾರಣಾಧೀನ ಕೈದಿಯಾಗಿರುವ ಸರ್ಜಾಪುರದ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನ ಜನ್ಮದಿನ ಆಚರಣೆ ನಡೆಸಿದ್ದ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅದರ ಬೆನ್ನಲ್ಲೇ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮಹಾನಿರ್ದೇಶಕ ಬಿ.ದಯಾನಂದ ಅವರು ಪ್ರಕರಣದ ತನಿಖೆಗೆ ಆದೇಶಿಸಿದ್ದರು.

ಇಲಾಖೆಯ ಉಪ ಮಹಾನಿರೀಕ್ಷಕಿ ಕೆ.ಸಿ.ದಿವ್ಯಾ ಅವರು (ದಕ್ಷಿಣ ವಲಯ) ಅ.10ರಂದು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನೆ ಕುರಿತು ಪ್ರಾಥಮಿಕ ವಿಚಾರಣೆ ನಡೆಸಿ, ತನಿಖಾ ವರದಿಯನ್ನು ಬಿ.ದಯಾನಂದ ಅವರಿಗೆ ಸಲ್ಲಿಸಿದ್ದಾರೆ. ವರದಿ ಸಲ್ಲಿಕೆಯಾದ ಬೆನ್ನಲ್ಲೇ ಇಬ್ಬರನ್ನು ಅಮಾನತು ಮಾಡಲಾಗಿದೆ.

ADVERTISEMENT

‘ಪ್ರಕರಣದಲ್ಲಿ ಏಳು ಸಿಬ್ಬಂದಿ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ. ಜೈಲಿನ ಮುಖ್ಯ ವೀಕ್ಷಕ ಹಾಗೂ ವೀಕ್ಷಕನನ್ನು ಅಮಾನತು ಮಾಡಲಾಗಿದೆ. ಸಹಾಯಕ ಅಧೀಕ್ಷಕ, ಇಬ್ಬರು ಜೈಲರ್‌ ಹಾಗೂ ಇಬ್ಬರು ಸಹಾಯಕ ಜೈಲರ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ತನಿಖಾ ತಂಡವು ಶಿಫಾರಸು ಮಾಡಿದೆ’ ಎಂದು ಇಲಾಖೆಯ ಮೂಲಗಳು ಮೂಲಗಳು ತಿಳಿಸಿವೆ.

‘ಅ.5ರಂದು ಆರನೇ ಬ್ಯಾರಕ್‌ನ ಏಳನೇ ಕೊಠಡಿಯಲ್ಲಿ ಮಧ್ಯಾಹ್ನದ ವೇಳೆ ಕೈದಿಗಳು ಸೇರಿಕೊಂಡು ಜನ್ಮದಿನ ಆಚರಣೆ ನಡೆಸಿದ್ದಾರೆ. ಕೈದಿಗಳಿಗೆ ಹೇಗೆ ಮೊಬೈಲ್‌ ದೊರೆಯಿತು? ಯಾರು ಮೊಬೈಲ್‌ ಪೂರೈಸಿದ್ದರು? ಯಾವಾಗಿನಿಂದ ಕೈದಿಗಳು ಮೊಬೈಲ್‌ ಬಳಸುತ್ತಿದ್ದಾರೆ ಎಂಬುದರ ಕುರಿತೂ ತನಿಖೆ ಮುಂದುವರಿದಿದೆ. ಜನ್ಮದಿನ ಆಚರಣೆಗೆ ಕೇಕ್‌ ಹಾಗೂ ಸೇಬಿನ ಹಾರವನ್ನು ಹೊರಗಿನಿಂದ ತರಿಸಿಕೊಳ್ಳಲಾಗಿದೆ. ಶಿಸ್ತು ಕ್ರಮಕ್ಕೆ ಶಿಫಾರಸುಗೊಂಡಿರುವ ಐವರ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಎನ್‌ಸಿಆರ್ ದಾಖಲು: ಜೈಲಿನ ಅಧಿಕಾರಿಗಳು ನೀಡಿದ ದೂರಿನ ಅನ್ವಯ ರೌಡಿಶೀಟರ್‌ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನ ಮತ್ತು ಈತನ ಸಹಚರರ ವಿರುದ್ಧ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಎನ್‌ಸಿಆರ್(ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲಿಸಿದ್ದಾರೆ. 

ಜನವರಿಯಲ್ಲಿ ಸರ್ಜಾಪುರದ ರೌಡಿ ವೆಂಕಟೇಶ್‌ ಎಂಬುವರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಶ್ರೀನಿವಾಸ್ ಹಾಗೂ ಸಹಚರರು ಜೈಲು ಸೇರಿದ್ದಾರೆ. ಜನ್ಮದಿನವನ್ನು ಆಚರಿಸಿಕೊಂಡಿದ್ದ ವಿಡಿಯೊವನ್ನು ಸಾಗರ್ ಎಂಬ ಹೆಸರಿನ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು.

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್‌ ಅವರಿಗೂ ಇದೇ ಜೈಲಿನಲ್ಲಿ ‘ವಿಶೇಷ ಆತಿಥ್ಯ’ ನೀಡಿದ್ದ ಫೋಟೊವೊಂದು ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆಗಲೂ ವಿಶೇಷ ಆತಿಥ್ಯ ನೀಡಿದ್ದ ಆರೋಪದಡಿ ಜೈಲಿನ ಮುಖ್ಯ ಅಧೀಕ್ಷಕ, ಅಧೀಕ್ಷಕ ಮತ್ತು ಸಿಬ್ಬಂದಿ ಸೇರಿ ಒಂಬತ್ತು ಮಂದಿಯನ್ನು ಅಮಾನತು ಮಾಡಲಾಗಿತ್ತು. 

ಸಂಭ್ರದಲ್ಲಿ ಜೈಲು ಸಿಬ್ಬಂದಿ ಭಾಗಿ?

ವಿಚಾರಣಾಧೀನ ಕೈದಿಯ ಜನ್ಮದಿನಾಚರಣೆ ಸಂಭ್ರಮದಲ್ಲಿ ಜೈಲಿನ ಸಿಬ್ಬಂದಿ ಸಹ ಪಾಲ್ಗೊಂಡಿರುವುದು ಕಂಡುಬಂದಿದೆ. ಸಿಬ್ಬಂದಿಯೊಬ್ಬರು ಕೇಕ್‌ ಕತ್ತರಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಆ ವಿಡಿಯೊವನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.