ADVERTISEMENT

Ranya Rao Gold Smuggling Case |ರನ್ಯಾ ರಾವ್‌ಗೆ ನೆರವು: ವರದಿ ಶೀಘ್ರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 23:58 IST
Last Updated 18 ಮಾರ್ಚ್ 2025, 23:58 IST
<div class="paragraphs"><p>ರನ್ಯಾ ರಾವ್‌</p></div>

ರನ್ಯಾ ರಾವ್‌

   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹರ್ಷವರ್ಧಿನಿ ರನ್ಯಾ ರಾವ್ ಅವರ ಮಲತಂದೆ ಡಿಜಿಪಿ ರಾಮಚಂದ್ರ ರಾವ್‌ ಅವರ ವಿಚಾರಣೆ ಪೂರ್ಣಗೊಳಿಸಿರುವ ಗೌರವ ಗುಪ್ತ ನೇತೃತ್ವದ ತನಿಖಾ ತಂಡ, ಸರ್ಕಾರಕ್ಕೆ  ಸದ್ಯವೇ ವರದಿ ಸಲ್ಲಿಸಲಿದೆ.

ಶಿಷ್ಟಾಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಕರಣದ ತನಿಖಾಧಿಕಾರಿ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) ವ್ಯವಸ್ಥಾಪಕ ನಿರ್ದೇಶಕರಾದ ಗೌರವ್ ಗುಪ್ತ ನೇತೃತ್ವದ ತಂಡ, ಶಿಷ್ಟಾಚಾರ ಸಿಬ್ಬಂದಿಯಾದ ಹೆಡ್‌ಕಾನ್‌ಸ್ಟೆಬಲ್ ಬಸವರಾಜು, ವಿಮಾನ ನಿಲ್ದಾಣ ಗುಪ್ತದಳ ವಿಭಾಗದ ಕಾನ್‌ಸ್ಟೆಬಲ್‌ ಧನುಷ್‌ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಿ, ಹೇಳಿಕೆಯನ್ನು ದಾಖಲಿಸಿಕೊಂಡಿದೆ.

ADVERTISEMENT

ರನ್ಯಾಗೆ ವಿಮಾನ ನಿಲ್ದಾಣದಲ್ಲಿ ಯಾವ ರೀತಿಯ ಶಿಷ್ಟಾಚಾರದ ನಿಯಮಗಳನ್ನು ನೀಡಲಾಗುತ್ತಿತ್ತು, ಆಕೆಯನ್ನು ಕರೆದೊಯ್ಯಲು ಯಾವ ಹಂತದ ಅಧಿಕಾರಿಗಳು ನಿಲ್ದಾಣಕ್ಕೆ ಬರುತ್ತಿದ್ದರು ಎಂಬೆಲ್ಲಾ ಮಾಹಿತಿ ಕಲೆ ಹಾಕಿದೆ.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದ ಕಚೇರಿಯಲ್ಲಿ ರಾಮಚಂದ್ರ ರಾವ್ ಅವರನ್ನು ಸೋಮವಾರ‌ ಎರಡು ತಾಸು ವಿಚಾರಣೆಗೊಳಪಡಿಸಿದ ತನಿಖಾ ತಂಡ, ‘ರನ್ಯಾಗೆ ಶಿಷ್ಟಾಚಾರ ನೀಡಲು ಯಾರಿಗಾದರೂ ಕರೆ ಮಾಡಿ ಸೂಚನೆ ನೀಡಿದ್ದೀರಾ?, ವಿಮಾನ ನಿಲ್ದಾಣಕ್ಕೆ ಸರ್ಕಾರಿ ವಾಹನವನ್ನು ಕಳುಹಿಸಿ ಕೊಟ್ಟಿದ್ದೀರಾ?, ರನ್ಯಾ ಕರೆತರಲು ನೀವು ವಿಮಾನ ನಿಲ್ದಾಣಕ್ಕೆ ಹೋಗಿದ್ದೀರಾ ಎಂಬ ಪ್ರಶ್ನೆಗಳಿಗೆ ರಾಮಚಂದ್ರ ಅವರು ‘ಇಲ್ಲ’ ಎಂದು ಉತ್ತರ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಶಿಷ್ಟಾಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ತನಿಖಾ ತಂಡ, ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ, ರನ್ಯಾ ರಾವ್‌, ರಾಮಚಂದ್ರ ರಾವ್‌ ಹಾಗೂ ವಿಮಾನ ನಿಲ್ದಾಣ ಸಿಬ್ಬಂದಿಯ ಮೊಬೈಲ್ ಕರೆಗಳ ವಿವರ ಕಲೆ ಹಾಕಿದೆ.

ದುಬೈನಿಂದ ಚಿನ್ನ ಕಳ್ಳಸಾಗಣೆ ಸಾಗಿಸುತ್ತಿದ್ದ ಆರೋಪದಡಿ ನಟಿ ರನ್ಯಾ ರಾವ್‌ ಅವರನ್ನು ಡಿಆರ್‌ಐ ಅಧಿಕಾರಿಗಳು ಮಾರ್ಚ್ 3ರಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.