ಬೆಂಗಳೂರು: ಆಸ್ತಿ ತೆರಿಗೆ ಸುಸ್ತಿದಾರರಿಗೆ ದಂಡ ವಿಧಿಸುವ ಜೊತೆಗೆ, ನೋಟಿಸ್ ಅವಧಿಯೊಳಗೆ ತೆರಿಗೆ ಪಾವತಿ ಮಾಡದಿದ್ದರೆ, ಸ್ಥಿರಾಸ್ತಿ, ಚರಾಸ್ತಿಗಳನ್ನು ಮಾರಾಟ ಅಥವಾ ಹರಾಜು ಹಾಕಿ ಬಾಕಿ ವಸೂಲಿ ಮಾಡಲು ಬಿಬಿಎಂಪಿ ಮುಂದಾಗಿದೆ.
ಆಸ್ತಿ ತೆರಿಗೆ ಸಂಗ್ರಹದಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಗುರಿ ಸಾಧಿಸಲು ಇನ್ನೂ ಮೂರು ತಿಂಗಳು ಬಾಕಿ ಉಳಿದಿದ್ದು, ಸುಮಾರು ₹900 ಕೋಟಿ ಪಾವತಿಯಾಗಬೇಕಿದೆ. ಇದಕ್ಕಾಗಿ ‘ವಿಶೇಷ ಅಭಿಯಾನ’ವನ್ನು ಆರಂಭಿಸಲಿದ್ದು, ಕಾಯ್ದೆ ಪ್ರಕಾರ ತನಗಿರುವ ಎಲ್ಲ ಅಧಿಕಾರವನ್ನೂ ಬಳಸಿಕೊಳ್ಳಲು ಪಾಲಿಕೆ ನಿರ್ಧರಿಸಿದೆ. ಬಿಬಿಎಂಪಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೊಂದಿದ್ದ ಗುರಿಯಲ್ಲಿ ಶೇ 82.90ರಷ್ಟು ಸಾಧನೆ ಮಾಡಿದ್ದು, ತೆರಿಗೆ ಸಂಗ್ರಹದಲ್ಲಿ ದಾಖಲೆ ಸೃಷ್ಟಿಸಿದೆ.
‘ಆಸ್ತಿ ತೆರಿಗೆ ಪಾವತಿ ಮಾಡದಿದ್ದವರಿಗೆ ಮೊದಲು ನೋಟಿಸ್ ಜಾರಿ ಮಾಡಲಾಗುತ್ತದೆ. ಆ ಅವಧಿಯಲ್ಲೂ ಪಾವತಿ ಮಾಡದಿದ್ದರೆ, ಬೀಗಮುದ್ರೆ ಹಾಕಿ ಮತ್ತೊಮ್ಮೆ ಗಡುವು ನೀಡಲಾಗುತ್ತದೆ. ಅದನ್ನೂ ಮೀರಿದರೆ ಆಸ್ತಿ ಮುಟ್ಟುಗೋಲು, ಹರಾಜು ಹಾಕಲು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ಅಂತ್ಯಗೊಂಡ ಸಮಯದಲ್ಲಿ ಹೇಳಿದ್ದರು. ಅದು ಇದೀಗ ಅನುಷ್ಠಾನವಾಗುತ್ತಿದೆ.
ಒಟಿಎಸ್ ಯೋಜನೆ ಅಂತ್ಯವಾದ ನಂತರ ಡಿಸೆಂಬರ್ 3ರಿಂದಲೇ ಸುಸ್ತಿದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಜನವರಿಯಲ್ಲಿ ‘ವಿಶೇಷ ಅಭಿಯಾನ’ ಹಮ್ಮಿಕೊಳ್ಳಲಿರುವ ಬಿಬಿಎಂಪಿ ಕಂದಾಯ ವಿಭಾಗದ ಸಿಬ್ಬಂದಿ, ಸುಸ್ತಿದಾರರಿಂದ ಆಸ್ತಿ ತೆರಿಗೆ ಸಂಗ್ರಹಿಸಲು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಜನವರಿ 6ರಿಂದ ಬೀಗಮುದ್ರೆ ಹಾಕಲಾಗುತ್ತದೆ. ಅದಕ್ಕೂ ಮಣಿಯದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಮುಂದಿನ 15 ದಿನಗಳಲ್ಲೂ ತೆರಿಗೆ ಪಾವತಿಸದಿದ್ದರೆ ವಾಹನ ಸೇರಿದಂತೆ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಮಾರಾಟ ಅಥವಾ ಹರಾಜು ಹಾಕಲು ಬಿಬಿಎಂಪಿ ನಿರ್ಧರಿಸಿದೆ. ಈ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಾರ್ಚ್ ಅಂತ್ಯದ ವೇಳೆಗೆ ಎಲ್ಲ ಸುಸ್ತಿದಾರರಿಂದ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದರು.
ಆಸ್ತಿ ತೆರಿಗೆ ಪಾವತಿಗೆ ಬಹಳಷ್ಟು ಸಮಯ ನೀಡಲಾಗಿದೆ. ಇನ್ನು ಕಾನೂನು ಪ್ರಕಾರ ಕಾರ್ಯಾಚರಣೆ ನಡೆಯುತ್ತದೆ.-ಮುನೀಶ್ ಮೌದ್ಗಿಲ್, ವಿಶೇಷ ಆಯುಕ್ತ ಕಂದಾಯ ವಿಭಾಗ ಬಿಬಿಎಂಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.