
ಬೆಂಗಳೂರು: ‘ಮೂರ್ನಾಲ್ಕು ದಿನದಿಂದ ದುಬೈನಲ್ಲಿ ಭಯದ ವಾತಾವರಣವಿತ್ತು. ನಾವಿದ್ದ ಹೊಟೇಲ್ ಸಮೀಪದಲ್ಲಿ ಸ್ಪೋಟದ ಸದ್ದುಗಳು ಕೇಳಿಸುತ್ತಿತ್ತು. ದೀಪಾವಳಿ ಪಟಾಕಿ ಸಿಡಿತದ ಸದ್ದು ಕೇಳಿದ ನಮಗೆ ಬಾಂಬ್ ಸದ್ದು ನಿಜಕ್ಕೂ ಆತಂಕವನ್ನೇ ಹುಟ್ಟಿಸಿತ್ತು. ಈಗಲೂ ಅದನ್ನು ಮರೆಯಲು ಆಗುತ್ತಿಲ್ಲ. ಅಲ್ಲಿಂದ ಬೆಂಗಳೂರಿಗೆ ಬಂದು ಇಳಿದಾಗ ಮನಸಿಗೆ ನಿರಾಳವಾಯಿತು. . .’
ದುಬೈ ಪ್ರವಾಸದಲ್ಲಿದ್ದು ಅಲ್ಲಿಯೇ ಸಿಲುಕಿಕೊಂಡು ಮಂಗಳವಾರ ಬೆಳಗಿನಜಾವ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದು ಚಿಕ್ಕಮಗಳೂರಿನ ತಮ್ಮ ಮನೆ ತಲುಪಿದ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅಲ್ಲಿನ ಅನುಭವವನ್ನು ಹಂಚಿಕೊಂಡರು.
‘ನಾವು ಅಲ್ಲಿನ ಕಾರ್ಯಕ್ರಮ ಮುಗಿಸಿ ಹೊರಡಬೇಕಿತ್ತು. ಯುದ್ದದ ವಾತಾವರಣ ಶುರುವಾಗಿ ವಿಮಾನ ಸೇವೆಯೂ ನಿಂತು ಹೋಯಿತು. ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದೆ. ಕತ್ತಲಾಗುತ್ತಲೇ ಸಮೀಪದಲ್ಲೇ ಬಾಂಬ್ ಬೀಳುತ್ತಿರುವ ಮಾಹಿತಿ ನೀಡಲಾಗುತ್ತಿತ್ತು. ಕೊನೆಗೆ ಕನ್ನಡಿಗರಾದ ರೊನಾಲ್ಡ್ ಕೊಲಾಸೊ ಅವರು ತಮ್ಮ ಮನೆಗೆ ಕರೆದುಕೊಂಡು ಹೋದರೂ ಭಯ ಕಡಿಮೆಯಾಗಿರಲಿಲ್ಲ. ಸೋಮವಾರ ಮಧ್ಯರಾತ್ರಿ 300ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತ ಎಮಿರೇಟ್ಸ್ ವಿಮಾನ ಕರಾಚಿ ಮಾರ್ಗವಾಗಿ ಬೆಂಗಳೂರಿಗೆ ಬಂದಿಳಿಯಿತು. ಮನೆ ತಲುಪಿದ್ದೇನೆ’ ಎಂದು ನಿಟ್ಟುಸಿರುಬಿಟ್ಟರು.
‘ನಮ್ಮ ನೆರವಿಗೆ ಬರುವಂತೆ ಭಾರತೀಯ ದೂತವಾಸ ಕಚೇರಿಯನ್ನು ಸಂಪರ್ಕಿಸಿದರೂ ಸೂಕ್ತ ಸಹಕಾರ ಸಿಗಲಿಲ್ಲ. ದುಬೈ ಸರ್ಕಾರವೇ ನಿಜಕ್ಕೂ ನಮ್ಮಲ್ಲಿ ಆತ್ಮಸ್ಥೈರ್ಯ ತುಂಬಿತು. ವಿಮಾನದ ಪೈಲಟ್ ಕೂಡ ಧೈರ್ಯದಿಂದಲೇ ನಮ್ಮನ್ನು ಕರೆದುಕೊಂಡು ಬಂದರು ’ ಎಂದು ನೆನಪಿಸಿಕೊಂಡರು.
ಅಲ್ಲಿಯೇ ಉಳಿದಿರುವ ಹಲವರು
ದುಬೈ ಸೇರಿದಂತೆ ವಿವಿಧೆಡೆ ಸಂಕಷ್ಟಕ್ಕೆ ಸಿಲುಕಿದ್ದ 1053 ಕನ್ನಡಿಗರು ಸೋಮವಾರ ಹಾಗೂ ಮಂಗಳವಾರ ಮರಳಿದರೆ ಇನ್ನಷ್ಟು ಪ್ರವಾಸಿಗರು ಅಲ್ಲಿಯೇ ಉಳಿದಿದ್ದಾರೆ.
ಎರಡು ವಿಮಾನದಲ್ಲಿ ದುಬೈ ಮಾತ್ರವಲ್ಲದೇ ಅಬುಧಾಬಿ ದೋಹಾ ಜೆಡ್ಡಾ ಸಹಿತ ವಿವಿಧ ಕಡೆ ಸಿಲುಕಿದ್ದವರನ್ನು ಬೆಂಗಳೂರಿಗೆ ಮಂಗಳವಾರ ಬೆಳಗಿನ ಜಾವ ಸುರಕ್ಷಿತವಾಗಿ ಕರೆತರಲಾಗಿದೆ. ಉಳಿದವರು ಬುಧವಾರ ಊರುಗಳಿಗೆ ತಲುಪುವ ವಿಶ್ವಾಸ ಹೊಂದಿದ್ದಾರೆ.
ಉದ್ಯಮಿ ರೊನಾಲ್ಡ್ ಕೊಲಾಸೊ ಅವರೊಂದಿಗೆ ಕನ್ನಡ ಕೂಟಗಳ ಪ್ರಮುಖರು ಪ್ರವಾಸಿಗರ ಸುರಕ್ಷತೆ ಕುರಿತು ಚರ್ಚೆ ನಡೆಸಿದರು.
‘ದುಬೈನಲ್ಲಿ ಸಿಲುಕಿಕೊಂಡಿರುವ ಹಲವರಿಗೆ ಕನ್ನಡಿಗರ ಕೂಟದಿಂದ ಮಂಗಳವಾರ ಬೆಳಿಗ್ಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಪರಿಸ್ಥಿತಿ ಸಂಪೂರ್ಣ ಸುಧಾರಿಸುವವರೆಗೆ ಅಗತ್ಯ ನೆರವು ಮುಂದುವರಿಸಲಾಗುತ್ತದೆ. ಕರ್ನಾಟಕದ ಅನಿವಾಸಿ ಭಾರತೀಯ ಸಮಿತಿಯೊಂದಿಗೆ ಮಾತುಕತೆ ನಡೆಸಲಾಗಿದ್ದು ಬುಧವಾರ ಎಲ್ಲರನ್ನೂ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ದುಬೈ ಕನ್ನಡಿಗರ ಕೂಟದ ಅಧ್ಯಕ್ಷ ಅರುಣ್‌ಕುಮಾರ್ ಸಲಹೆಗಾರ ಭಾರ್ಗವ ಶರ್ಮ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.