
ಬೆಂಗಳೂರು: ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ಬಡ್ತಿ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ನೀಡಿರುವುದು ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಕ್ಕೆ ಸಂದ ಜಯ ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಅಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.
ಕರವೇ ನಿಯೋಗವು ಶುಕ್ರವಾರ ಬೆಂಗಳೂರು ವಿಭಾಗದ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಅವರು ಮಾತನಾಡಿದರು.
‘ಗೂಡ್ಸ್ ರೈಲು ವ್ಯವಸ್ಥಾಪಕ ಹುದ್ದೆಗೆ ಸಂಬಂಧಿಸಿದ ಪದೋನ್ನತಿ ಪರೀಕ್ಷೆ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದೆವು. ನಮ್ಮ ಆಗ್ರಹಕ್ಕೆ ರೈಲ್ವೆ ಇಲಾಖೆಯ ಡಿಆರ್‌ಎಂ, ಪಿಸಿಪಿಒ ಸೇರಿದಂತೆ ಹಿರಿಯ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.
‘ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರೂ ನಮ್ಮ ಮನವಿ ಮೇರೆಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಸಂಸದರಾದ ಪಿ.ಸಿ. ಮೋಹನ್ ಮತ್ತು ತೇಜಸ್ವಿ ಸೂರ್ಯ ಕೂಡ ಕಾಳಜಿ ವಹಿಸಿದರು’ ಎಂದು ಮಾಹಿತಿ ನೀಡಿದ್ದಾರೆ.
ಸಂವಿಧಾನಕ್ಕೆ ಅಪಚಾರ: ರೈಲ್ವೆ ಇಲಾಖೆಯ ಬಡ್ತಿ ಹಾಗೂ ನೇಮಕಾತಿ ಪರೀಕ್ಷೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಕಡೆಗಣಿಸಿ ಕರ್ನಾಟಕದ ಆಡಳಿತ ಕನ್ನಡ ಭಾಷೆಗೆ ಅವಕಾಶ ನೀಡದೆ ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅವಕಾಶ ಕಲ್ಪಿಸಿರುವುದು ಸಂವಿಧಾನಕ್ಕೆ ಎಸಗಿದ ಅಪಚಾರ. ಹಿಂದಿ ಭಾಷಿಕರಿಗೆ ಅನುಕೂಲ ಮಾಡುವ ಸ್ಪಷ್ಟ ಪಿತೂರಿ ಎಂದು ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸರಂಗ ಆರೋಪಿಸಿದೆ.
ಈ ಅಧಿಸೂಚನೆಯನ್ನು ರದ್ದುಪಡಿಸಿ, ಕನ್ನಡಕ್ಕೆ ಅವಕಾಶ ನೀಡಿ ಕೂಡಲೇ ಮರು ಅಧಿಸೂಚನೆ ಹೊರಡಿಸಬೇಕು ಎಂದು ಎಂದು ಬಳಗದ ಅಧ್ಯಕ್ಷ ವ.ಚ. ಚನ್ನೇಗೌಡ, ಸಂಚಾಲಕ ರಾ.ನಂ. ಚಂದ್ರಶೇಖರ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.