
ತಿರುವನಂತಪುರ: ಬೆಂಗಳೂರು ಉತ್ತರ ನಗರ ಪಾಲಿಕೆಯ ಯಲಹಂಕ ಹೋಬಳಿಯ ಕೋಗಿಲು ಬಂಡೆ ಕ್ವಾರಿ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಮನೆಗಳನ್ನು ಈಚೆಗೆ ನೆಲಸಮಗೊಳಿಸಲಾಗಿತ್ತು. ಮನೆ ಕಳೆದುಕೊಂಡಿರುವ ಅರ್ಹರಿಗೆ ಬೈಯ್ಯಪ್ಪನಹಳ್ಳಿಯ ವಸತಿ ಸಮುಚ್ಚಯದಲ್ಲಿ ನಿರ್ಮಿಸಿರುವ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಸರ್ಕಾರ ಘೋಷಿಸಿದೆ. ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, ಮೊದಲನೆಯದಾಗಿ, ಆ ಜಾಗ ಸರ್ಕಾರಕ್ಕೆ ಸೇರಿದ್ದು, ಅಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಲಾಗಿತ್ತು. ಎರಡನೆಯದಾಗಿ, ಆ ಜಾಗ ಕಸದ ತೊಟ್ಟಿಯಾಗಿತ್ತು. ವಿಷಕಾರಿ ತ್ಯಾಜದಿಂದ ನೀರು ಕಲುಷಿತಗೊಂಡಿತ್ತು. ಆದ್ದರಿಂದ ಆ ಪ್ರದೇಶ ವಸತಿಗೆ ಯೋಗ್ಯವಾದ್ದುದ್ದಲ್ಲ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೇ ಮನೆ ತೆರವು ಕಾರ್ಯಾಚರಣೆಗೂ ಮುನ್ನ ನಿವಾಸಿಗಳಿಗೆ ನೋಟಿಸ್ ನೀಡಲಾಗಿತ್ತು. ಸಂತ್ರಸ್ತರು ಬಡವರು ಎಂಬ ಆಧಾರದ ಮೇಲೆ ಮಾತ್ರ ಈ ವಿಷಯವನ್ನು ರಾಜಕೀಯವಾಗಿ ಬಿಂಬಿಸುವುದು ನ್ಯಾಯವಲ್ಲ ಎಂದಿದ್ದಾರೆ.
ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ಒದಗಿಸಲು ಸರ್ಕಾರ ನಿರ್ಧರಿಸಿದೆ. ಐದಾರು ತಿಂಗಳೊಳಗೆ ಕಾಯಂ ಮನೆಗಳನ್ನು ಕಟ್ಟಿಕೊಡುವುದಾಗಿ ಭರವಸೆ ನೀಡಿದೆ. ಈ ಸಮಸ್ಯೆಯನ್ನು ಬಗೆಹರಿಸಲು ದಾರಿ ಸಿಕ್ಕಿರುವಾಗ ವಿಷಯವನ್ನು ಅನಗತ್ಯವಾಗಿ ದೊಡ್ಡದು ಮಾಡುವ ಅಗತ್ಯವಿಲ್ಲ. ತೆರವು ಪ್ರಕ್ರಿಯೆಯಲ್ಲಿ ಕೆಲವು ನ್ಯೂನತೆಗಳಿರಬಹುದು. ಅದನ್ನು ಹೇಗೆ ಮಾಡಿದರು ಎಂಬುದರ ಕುರಿತು ಭಿನ್ನಾಭಿಪ್ರಾಯಗಳಿರಬಹುದು. ಆದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಸರ್ಕಾರವು ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಿ ಈ ಕ್ರಮ ಕೈಗೊಂಡಿದೆ. ತೆರವು ಕಾರ್ಯಾಚರಣೆಗೂ ಮುನ್ನ ನೋಟಿಸ್ ನೀಡಲಾಗಿತ್ತು. ಕೆಲವು ಸಂದರ್ಭಗಳಲ್ಲಿ, ಮನೆಗಳನ್ನು ತೆರವು ಮಾಡುವ ಮುನ್ನ ಹಲವಾರು ಬಾರಿ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಇದೆ. ನಾನು ಕರ್ನಾಟಕಕ್ಕೆ ಭೇಟಿ ನೀಡಿಲ್ಲ. ಹಾಗಾಗಿ ನಿರ್ಣಾಯಕ ಅಭಿಪ್ರಾಯ ತಿಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತವು ತ್ಯಾಜ್ಯ ನಿರ್ವಹಣೆ ಸಂಬಂಧಿತ ಯೋಜನೆಗಳನ್ನು ಕೈಗೆತ್ತಿಕೊಳ್ಳಲು 167 ಶೆಡ್‌ಗಳನ್ನು ಕೆಡವಿತ್ತು. 90 ಕುಟುಂಬಗಳು ಪರ್ಯಾಯ ವಸತಿ ಯೋಜನೆಗೆ ಅರ್ಹವಾಗಿವೆ ಎಂದು ಸರ್ಕಾರ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.