ADVERTISEMENT

ವಿಷ್ಣುವರ್ಧನ್‌ ಕುಟುಂಬದವರ ನಿಂದನೆ | ಅನಿರುದ್ಧ್‌ ದೂರು: ಎನ್‌ಸಿಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 13:37 IST
Last Updated 17 ಸೆಪ್ಟೆಂಬರ್ 2025, 13:37 IST
ಅನಿರುದ್ಧ್
ಅನಿರುದ್ಧ್   

ಬೆಂಗಳೂರು: ನಟ ದಿವಂಗತ ವಿಷ್ಣುವರ್ಧನ್‌ ಅವರ ಕುಟುಂಬದ ಸದಸ್ಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಪದಗಳನ್ನು ಬಳಸಿ ನಿಂದನೆ ಮಾಡಲಾಗಿದ್ದು, ವಿಷ್ಣುವರ್ಧನ್ ಅವರ ಅಳಿಯ, ಕಲಾವಿದ ಅನಿರುದ್ಧ್‌ ಅವರು ತಿಲಕ್‌ನಗರ ಠಾಣೆಗೆ ದೂರು ನೀಡಿದ್ದಾರೆ.

‘ನಗರದ ಅಭಿಮಾನ್‌ ಸ್ಟುಡಿಯೊದಲ್ಲಿದ್ದ ವಿಷ್ಣುವರ್ಧನ್‌ ಅವರ ಸಮಾಧಿಯನ್ನು ತೆರವು ಮಾಡಲಾಗಿದ್ದು, ಈ ವಿಚಾರವಾಗಿ ನಮ್ಮ ಕುಟುಂಬದವರ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಲಾಗುತ್ತಿದೆ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗುತ್ತಿದೆ. ಕೆಟ್ಟದಾಗಿ ಕಮೆಂಟ್‌ ಹಾಕಿದವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು’ ಎಂದು ಕೋರಿ ಅನಿರುದ್ಧ್‌ ಅವರು ದೂರು ನೀಡಿದ್ದಾರೆ.

ದೂರು ಆಧರಿಸಿ ಗಂಭೀರ ಸ್ವರೂಪವಲ್ಲದ ಪ್ರಕರಣ(ಎನ್‌ಸಿಆರ್) ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಎಫ್‌ಐಆರ್‌ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದರು.

‘ನಕಾರಾತ್ಮಕವಾಗಿ ಸಂದೇಶ ಕಳುಹಿಸಿದರೆ ಸುಮ್ಮನಿರುವುದಿಲ್ಲ ಎಂದು ಈ ಹಿಂದೆಯೇ ಎಚ್ಚರಿಸಿದ್ದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಕುಟುಂಬದವರ ವಿರುದ್ಧ ಕೀಳಾಗಿ ಕಮೆಂಟ್ ಮಾಡುತ್ತಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಅನಿರುದ್ಧ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.