ADVERTISEMENT

ಬೆಂಗಳೂರು: ವನ್ಯಜೀವಿ ಆಂಬುಲೆನ್ಸ್‌ಗೆ ಅನಿಲ್‌ ಕುಂಬ್ಳೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 15:56 IST
Last Updated 22 ಡಿಸೆಂಬರ್ 2025, 15:56 IST
ವನ್ಯಜೀವಿಗಳಿಗೆ ತುರ್ತಾಗಿ ಸ್ಪಂದಿಸಲು ಸಿದ್ಧವಾದ ಆಂಬುಲೆನ್ಸ್‌
ವನ್ಯಜೀವಿಗಳಿಗೆ ತುರ್ತಾಗಿ ಸ್ಪಂದಿಸಲು ಸಿದ್ಧವಾದ ಆಂಬುಲೆನ್ಸ್‌   

ಬೆಂಗಳೂರು: ಬೆಂಗಳೂರು ನಗರ ವನ್ಯಜೀವಿ ಆಂಬುಲೆನ್ಸ್‌ ಸೇವೆಗೆ ವನ್ಯಜೀವಿ ರಾಯಭಾರಿ ಅನಿಲ್‌ ಕುಂಬ್ಳೆ ಚಾಲನೆ ನೀಡಿದರು.

ನಗರದಲ್ಲಿ ವನ್ಯಜೀವಿಗಳಿಗೆ ಸಮಸ್ಯೆ ಉಂಟಾದಾಗ ತುರ್ತು ಸ್ಪಂದನೆ ನೀಡಲು ಎಐ-ಆಟೋಮೋಟಿವ್ ಪ್ಲಾಟ್‌ಫಾರ್ಮ್‌ ಸಂಸ್ಥೆ ಟೆಕಿಯಾನ್ ಮತ್ತು ಪ್ರಾಣ ಅನಿಮಲ್ ಫೌಂಡೇಷನ್ ಜಂಟಿ ಯೋಜನೆಯಡಿ ಆಂಬುಲೆನ್ಸ್‌ ಸೇವೆ ಆರಂಭಗೊಂಡಿದೆ.

ನಗರ ಆವಾಸಸ್ಥಾನಗಳು ಮತ್ತು ವನ್ಯಜೀವಿಗಳು ಓಡಾಡುವ ಸ್ಥಳಗಳ ನಡುವೆ ಹೆಚ್ಚುತ್ತಿರುವ ಅತಿಕ್ರಮಣವು ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗಿದೆ. ವನ್ಯಜೀವಿ ತುರ್ತು ಪರಿಸ್ಥಿತಿಗಳಿಗೆ ತ್ವರಿತವಾಗಿ ಮತ್ತು ಮಾನವೀಯವಾಗಿ ಸ್ಪಂದಿಸುವುದು ಇಂದಿನ ಅಗತ್ಯ. ವನ್ಯಜೀವಿಗಳು ನಗರದಲ್ಲಿ ಕಾಣಿಸಿಕೊಂಡರೆ, ಪ್ರಾಣಿ, ಪಕ್ಷಿಗಳಿಗೆ ಗಾಯವಾಗಿದ್ದರೆ ಅವುಗಳನ್ನು ಸಂರಕ್ಷಿಸುವ ಕೆಲಸವನ್ನು ಮಾಡಲಾಗುವುದು ಎಂದು ಪ್ರಾಣ ಅನಿಮಲ್ ಫೌಂಡೇಷನ್‌ ಸಂಸ್ಥಾಪಕಿ ಸಂಯುಕ್ತಾ ಹೊರನಾಡು ತಿಳಿಸಿದರು.

ADVERTISEMENT

ವಲಸೆ ಹಕ್ಕಿಗಳು, ಸರೀಸೃಪಗಳು ಮತ್ತು ಮಂಗಗಳಿಂದ ಹಿಡಿದು ಸಣ್ಣ ಸಸ್ತನಿಗಳವರೆಗಿನ ವನ್ಯಜೀವಿಗಳ ಸಾಗಾಟಕ್ಕೆ ಸಮಸ್ಯೆಯಾಗದಂತೆ ಆಂಬುಲೆನ್ಸ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ತರಬೇತಿ ಪಡೆದ ಪಶುವೈದ್ಯರು ಆಂಬುಲೆನ್ಸ್‌ನಲ್ಲಿರುತ್ತಾರೆ. ವಸತಿ ಪ್ರದೇಶಗಳಲ್ಲಿ ಅಲೆದಾಡುವ ಚಿರತೆ, ಕಾಡುಕೋಣ, ಕರಡಿಗಳಂಥ ದೊಡ್ಡ ಪ್ರಾಣಿಗಳ ಸಾಗಣೆಗೆ ಅರಣ್ಯ ಇಲಾಖೆಗೆ ಬೆಂಬಲ ನೀಡಲು ವಿನ್ಯಾಸಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಟೆಕಿಯಾನ್‌ ಹಿರಿಯ ನಿರ್ದೇಶಕ ಅರವಿಂದ್ ಗೌಡ, ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸುಲು ಭಾಗವಹಿಸಿದ್ದರು.

ರಕ್ಷಿಸಲಾಗುವ ಪ್ರಾಣಿಗಳನ್ನು ವೃತ್ತಿಪರ ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನ ಅಥವಾ ಬರ್ಡ್ಸ್ ಆಫ್ ಪ್ಯಾರಡೈಸ್ ಪುನರ್ವಸತಿ ಕೇಂದ್ರಕ್ಕೆ ವರ್ಗಾಯಿಸಲಾಗುತ್ತದೆ. ಸಹಾಯವಾಣಿ: 9108819998

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.